ADVERTISEMENT

ರಾಜಕೀಯ ಒತ್ತಡಕ್ಕೆ ಮಣಿದ ಆರೋಪ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 5:33 IST
Last Updated 9 ಸೆಪ್ಟೆಂಬರ್ 2017, 5:33 IST

ಹುಬ್ಬಳ್ಳಿ: ವೀರಾಪುರ ಓಣಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಆವ ರಣ ದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಎರಡು ಕಟ್ಟಡಗಳನ್ನು ತೆರವುಗೊಳಿಸು ವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಎರಡು ದಿನಗಳಿಂದ ನಡೆಸುತ್ತಿರುವ ಪ್ರತಿ ಭಟನೆ ಶುಕ್ರವಾರವೂ ಮುಂದುವರಿಯಿತು.

‘ಅಕ್ರಮ ಕಟ್ಟಡಗಳನ್ನು ಶುಕ್ರವಾರ ಬೆಳಿಗ್ಗೆ ತೆರವುಗೊಳಿಸುವುದಾಗಿ ಹೇಳಿದ್ದ ಆಯುಕ್ತರು, ರಾಜಕೀಯ ಒತ್ತಡಕ್ಕೆ ಮಣಿದು ತೆರವು ಕಾರ್ಯಾಚರಣೆ ಕೈಬಿಟ್ಟಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮುಖಂಡರು, ಆಯುಕ್ತರ ಕಚೇರಿಯ ಸಿಬ್ಬಂದಿ ಹೊರಹಾಕಿ, ಬಾಗಿಲು ಬಂದ್‌ ಮಾಡಿ ಧರಣಿ ನಡೆಸಿದರು.

‘ಹೈಕೋರ್ಟ್‌ ಆದೇಶ ಪಾಲಿಸದ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ನಗರಾಭಿವೃದ್ಧಿ ಸಚಿವರು ತಕ್ಷಣ ಕೆಲಸದಿಂದ ಅಮಾನತು ಮಾಡಬೇಕು’ ಎಂದು ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಆಗ್ರಹಿಸಿದರು.

ADVERTISEMENT

ಇಂದು ತೆರವು: ಧರಣಿ ನಿತರ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದ ಹೆಚ್ಚುವರಿ ಆಯುಕ್ತ ಅಜೀಜ್‌ ದೇಸಾಯಿ, ಶನಿವಾರ ಬೆಳಿಗ್ಗೆ 6ಕ್ಕೆ ಅಕ್ರಮ ಕಟ್ಟಡಗಳನ್ನು ತೆರವು ಮಾಡಲಾಗು ವುದು ಎಂದು ತಿಳಿಸಿದರು.

ಶುಕ್ರವಾರ ನಡೆಸಲು ಉದ್ದೇಶಿಸಿದ್ದ ತೆರವು ಕಾರ್ಯಾಚರಣೆಗೆ ಅಗತ್ಯ ಪೊಲೀಸ್‌ ಭದ್ರತೆ ಸಿಗದ ಕಾರಣ ಕೈಡಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಧರಣಿ ಕೈಬಿಡುವಂತೆ ಮನವಿ ಮಾಡಿದರು. 

ಪಾಲಿಕೆ ಸದಸ್ಯರಾದ ಶಿವು ಹಿರೇ ಮಠ, ಸುಧೀರ್‌ ಸರಾಫ, ಮಂಜುಳಾ ಅಕ್ಕೂರ, ಉಮೇಶ ಕೌಜಗೇರಿ, ವಿಜಯಾನಂದ ಶೆಟ್ಟಿ,  ಶಿವಣ್ಣ ಬಡವಣ್ಣವರ, ಉಮೇಶ ದುಶಿ, ಶಾಂತಾ ಚನ್ನೋಜಿ, ಸ್ಮಿತಾ ಜಾಧವ್‌, ಮೇನಕಾ ಹುರುಳಿ, ಸಂಜಯ ಕಪಟಕರ, ಮಹೇಶ್‌ ಬುರ್ಲಿ  ಪಾಲ್ಗೊಂಡಿದ್ದರು.

ಮುತ್ತಣ್ಣಗೆ ಜೀವ ಬೆದರಿಕೆ ಪತ್ರ
ಹುಬ್ಬಳ್ಳಿ: ‘ಎಚ್ಚರಿಕೆ, ಎಚ್ಚರಿಕೆ, ಎಚ್ಚರಿಕೆ, ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಗೊತ್ತಲ್ಲಾ, ಹೋರಾಟ ಕೈಬಿಡದಿದ್ದರೆ ನಿನ್ನನ್ನು ನೋಡಿಕೊಳ್ಳುತ್ತೇವೆ. ಹುಷಾರ್‌, ಝಡ್‌.ಪಿ. ನೆನಪಿರಲಿ’ ಎಂಬ ಜೀವ ಬೆದರಿಕೆಯ ಅನಾಮಧೇಯ ಪತ್ರ ತಮಗೆ ಬಂದಿರುವುದಾಗಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ತೋರಿಸಿದರು.

‘ತಮ್ಮ ಕಾರಿನ ಒಳಗೆ ಯಾರೋ ಈ ಪತ್ರ ಹಾಕಿಹೋಗಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸಚಿವರು ಮತ್ತು ನನ್ನ ಸಂಬಂಧ ಚನ್ನಾಗಿದೆ. ನನ್ನೊಂದಿಗೆ ಆತ್ಮೀಯವಾಗಿದ್ದಾರೆ. ಕಟ್ಟಡ ತೆರವುಗೊಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದರಿಂದ ಯಾರೋ ದುಷ್ಕರ್ಮಿಗಳು ಪತ್ರ ಬರೆದಿದ್ದಾರೆ’ ಎಂದು ಅವರು ಹೇಳಿದರು.

‘ಆಯುಕ್ತರಿಂದ ಅಲ್ಪಸಂಖ್ಯಾತರ ಓಲೈಕೆ’
ಹುಬ್ಬಳ್ಳಿ: ‘ಶಾಲಾ ಜಾಗ ಅತಿಕ್ರಮಿಸಿ, ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ಕೋರ್ಟ್‌ ಜೂನ್‌ನಲ್ಲೇ ಆದೇಶ ಮಾಡಿದ್ದರೂ ಇದುವರೆಗೆ ಪಾಲಿಸದೆ ಪಾಲಿಕೆ ಆಯುಕ್ತರು ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿರತವಾಗಿದ್ದಾರೆ’ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.

‘ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಪಾಲಿಕೆಯ ಆಡಳಿತರೂಢ ಸದಸ್ಯರು ಒತ್ತಾಯಿಸಿದರೂ ಸ್ಪಂದಿಸದೇ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷದವರಂತೆ ವರ್ತಿಸುತ್ತಿರುವುದು ಖಂಡನೀಯ’ ಎಂದು ಅವರು ತಿಳಿಸಿದ್ದಾರೆ. ‘ಈ ಕೂಡಲೇ ಕಟ್ಟಡ ತೆರವುಗೊಳಿಸಿ, ಕಾನೂನು ಎತ್ತಿಹಿಡಿಯಬೇಕು’ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

* * 

ಅಕ್ರಮ ಕಟ್ಟಡಗಳನ್ನು ಶನಿವಾರ ತೆರವುಗೊಳಿಸದಿದ್ದರೆ ಸೋಮವಾರ ಅವಳಿ ನಗರ ಬಂದ್‌ ಮಾಡಿ, ಉಗ್ರ ಹೋರಾಟ ನಡೆಸಲಾಗುವುದು
ನಾಗೇಶ ಕಲಬುರ್ಗಿ
ಅಧ್ಯಕ್ಷ, ಹು–ಧಾ ಬಿಜೆಪಿ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.