ADVERTISEMENT

ರೈತರ ಕಷ್ಟ ಅರಿತುಕೊಂಡ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 10:25 IST
Last Updated 22 ಜೂನ್ 2017, 10:25 IST

ಹೊನ್ನಾಳಿ: ರಾಜ್ಯದ ರೈತರ ಕಷ್ಟಗಳನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಸಹಕಾರ ಸಂಘಗಳಲ್ಲಿನ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಸಾಲಮನ್ನಾ ನಿರ್ಧಾರದಿಂದ ರೈತರು, ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ. ಈ ನಿರ್ಧಾರದಿಂದ ವಿರೋಧಪಕ್ಷಗಳ ಮುಖಂಡರ ಬಾಯಿ ಮುಚ್ಚಿಸಿದಂತಾಗಿದೆ ಎಂದರು.

ADVERTISEMENT

‘ಸಾಲ ಮನ್ನಾಕ್ಕೆ ಕೇಂದ್ರದ ಮೇಲೆ ಒತ್ತಡ ತರಲಿ’: ‘ರಾಜ್ಯದ ಬಿಜೆಪಿ ಮುಖಂಡರು ತಾಕತ್ತಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಾಲಮನ್ನಾ ಮಾಡಿಸಲಿ’ ಎಂದು ಮಂಜಪ್ಪ ಸವಾಲು ಹಾಕಿದರು.

ತಾಲ್ಲೂಕಿನಲ್ಲಿ ₹ 44 ಕೋಟಿ ಮನ್ನಾ: ‘ಸಾಲ ಮನ್ನಾದಿಂದ  ತಾಲ್ಲೂಕಿನ  ಒಟ್ಟು 17,793 ರೈತರಿಗೆ ಸೇರಿದ  ಒಟ್ಟು ₹ 44 ಕೋಟಿಯಷ್ಟು ಸಾಲಮನ್ನಾ ಆಗಿದೆ. ಅದಕ್ಕಾಗಿ ತಾಲ್ಲೂಕಿನ ರೈತರ ಪರವಾಗಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ’ ಎಂದು ಎಂದುಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ಸುರೇಂದ್ರ ಹೇಳಿದರು.

ಈ ಸಂದರ್ಭದಲ್ಲಿ ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಎಪಿಎಂಸಿ ಅಧ್ಯಕ್ಷ ಎಸ್.ಎಸ್.ಬೀರಪ್ಪ, ಸದಸ್ಯ ಸೋಮಣ್ಣ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪಗೌಡ, ಪಟ್ಟಣ ಪಂಚಾಯ್ತಿ ಸದಸ್ಯರಾದ ಎಚ್.ಬಿ.ಅಣ್ಣಪ್ಪ, ಎಚ್.ಡಿ.ವಿಜೇಂದ್ರಪ್ಪ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ಮಧುಗೌಡ, ಮಾಜಿ ಅಧ್ಯಕ್ಷ  ಕೆ.ವಿ. ಶ್ರೀಧರ್, ರಮೇಶ್, ಹೊಟ್ಯಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಲ್ಲೇಶ್, ಮುಖಂಡ ಕುಳಗಟ್ಟೆ ಚಂದ್ರಪ್ಪ, ಬೆನಕನಹಳ್ಳಿ ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.