ADVERTISEMENT

ರೈತ ಸಂಪರ್ಕ ಕೇಂದ್ರದಲ್ಲಿಯೇ ಬಿತ್ತನೆ ಬೀಜ ಖರೀದಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 8:59 IST
Last Updated 25 ಮೇ 2017, 8:59 IST

ಕಲಘಟಗಿ : ‘ತಾಲ್ಲೂಕಿನ ರೈತರು ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯ ‘ರೈತ ಸಂಪರ್ಕ ಕೇಂದ್ರ’ದಲ್ಲಿ ಪಡೆದುಕೊಳ್ಳಬೇಕು. ಅನಧಿಕೃತ ಮಾರಾಟಗಾರರಿಂದ ಬೀಜಗಳನ್ನು ಖರೀದಿಸಬಾರದು’ ಎಂದು ತಾಲ್ಲೂಕು  ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ ಕಿವಟೆ ಸಲಹೆ ನೀಡಿದ್ದಾರೆ.

‘ಈಗಾಗಲೇ ತಾಲ್ಲೂಕಿನ ಹಲವಾರು ರೈತರು ಕ್ವಿಂಟಲುಗಟ್ಟಲೇ ಗೋವಿನಜೋಳದ ಬೀಜಗಳನ್ನು ಖರೀದಿ ಮಾಡಿದ್ದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅವು ಕಡಿಮೆ ಗುಣಮಟ್ಟದ ಬೀಜಗಳಾಗಿದ್ದು, ಹಣ ಆಸೆಗಾಗಿ ಏಜಂಟರು ಬೀಸುವ ಗಾಳಕ್ಕೆ ರೈತರು ಮೋಸಹೋಗಬಾರದು. ರೈತ ಸಂಪರ್ಕ ಕೇಂದ್ರದಲ್ಲಿಯೇ ಬಿತ್ತನೆ ಬೀಜಗಳನ್ನು ಖರೀದಿಸಿ’ ಎಂದು ಮನವಿ ಮಾಡಿಕೊಂಡರು.

ಅವರು ಪಟ್ಟಣದ ಎ.ಪಿ.ಎಂ.ಸಿಯಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಗೋವಿನಜೋಳ, ಸೋಯಾಬಿನ್, ಭತ್ತ, ತೊಗರಿ ಮುಂತಾದ
ಬಿತ್ತನೆ ಬೀಜಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ  ಅವರು ಮಾತನಾಡಿದರು.

ನಂತರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ ರೈತರಿಗೆ ಬೀಜಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಆಡಿನ, ಎಪಿಎಂಸಿ ಅಧ್ಯಕ್ಷ ಮುತ್ತಪ್ಪ ಅಂಗಡಿ, ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರ, ಜಿಲ್ಲಾ ಪಂಚಾಯಿತಿ ಸದಸ್ಯೆ ವಿದ್ಯಾ ಬಾವನವರ, ತಾ ಪಂ ಸದಸ್ಯೆ ಕವಿತಾ ಬಡಿಗೇರ, ಬಸವರಾಜ ಭಾವಕಾರ, ಶಂಕರಗಿರಿ ಬಾವನವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.