ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:16 IST
Last Updated 24 ಮೇ 2017, 9:16 IST

ಹುಬ್ಬಳ್ಳಿ:  ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಘಟನೆಗಳು ನಗರದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಗ್ರಾಮ ಪಂಚಾಯ್ತಿ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಿದ್ದರೂ ಅದನ್ನು ನೀಡುತ್ತಿಲ್ಲ ಎಂದು ಆರೋಪಿಸಿ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ ತಾಲ್ಲೂಕು ಸಮಿತಿ ವತಿಯಿಂದ ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಲಾಯಿತು.

‘ಗ್ರಾಮ ಪಂಚಾಯ್ತಿ ನೌಕರರಿಗೆ ಕನಿಷ್ಠ ವೇತನ ನೀಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಆದರೆ, ಬಹುತೇಕ ಗ್ರಾಮ ಪಂಚಾಯ್ತಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಿಲ್ಲ. ಪಂಚಾಯ್ತಿ ಆದಾಯದ ಶೇ 40ರಷ್ಟನ್ನು ನೌಕರರ ವೇತನಕ್ಕೆ ಮೀಸಲಿರಿಸಿದ್ದರೂ ವೇತನ ನೀಡಲು ವಿಳಂಬ ಮಾಡಲಾಗುತ್ತಿದೆ’ ಎಂದು ಸಿಐಟಿಯು
ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ಆರೋಪಿಸಿದರು.

‘ಪ್ರತಿ ತಿಂಗಳು ವೇತನ ನೀಡಲು ವಿಳಂಬ ಮಾಡಲಾಗುತ್ತಿದೆ. ನೌಕರರಿಗೆ ಕಿರುಕುಳ, ಶೋಷಣೆ ಮಾಡಲಾಗುತ್ತಿದೆ. ಆಯಾ ಪಂಚಾಯ್ತಿ ಸಮಿತಿಗಳಿಗೆ ಪಿಡಿಓಗಳು ಸುತ್ತೋಲೆಯ ಮಾಹಿತಿ ನೀಡುತ್ತಿಲ್ಲ. ಸಮಸ್ಯೆ ಬಗೆಹರಿಸಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

ಸಂಘದ ತಾಲ್ಲೂಕು ಕಾರ್ಯದರ್ಶಿ ಶರಣಪ್ಪ ದೇವನೂರ, ಅಧ್ಯಕ್ಷ ಬಿ.ಐ. ಈಳಿಗೇರ, ಖಜಾಂಚಿ ಎನ್.ಎಂ. ಪಾಟೀಲ ಪ್ರತಿಭಟನೆಯಲ್ಲಿ  ಇದ್ದರು. ಕೆಎಸ್‌ಆರ್‌ಟಿಸಿ ನೌಕರರ ಸಂಘ: ಸಾರಿಗೆ ಸಂಸ್ಥೆ ಸಹಕಾರಿ ಪತ್ತಿನ ಆಡಳಿತ ಮಂಡಳಿಯು ಸದಸ್ಯರಿಂದ ಹೆಚ್ಚಿನ ದಂಡದ ಬಡ್ಡಿಯನ್ನು ವೇತನದಲ್ಲಿ ಕಡಿತ ಮಾಡಿರುವುದನ್ನು ಖಂಡಿಸಿ ಕೆಎಸ್‌ಆರ್‌ಟಿಸಿ ಸ್ಟ್ಯಾಫ್‌ ಅಂಡ್‌ ವರ್ಕರ್ಸ್‌ ಯೂನಿಯನ್‌ ಹುಬ್ಬಳ್ಳಿ ವಿಭಾಗದ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿಯಿಂದ ಮೆರವಣಿಗೆ  ಹೊರಟು ಸಹಕಾರ ಸಂಘ ಪತ್ತಿನ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಸಂಘದ ಸದಸ್ಯರ ಸಾಲದ ಮರುಪಾವತಿ ಹಣವನ್ನು ವೇತನದಲ್ಲಿ ಕಡಿತ ಮಾಡಿಕೊಂಡಿದ್ದರೂ ಸಂಸ್ಥೆಯ ಆಡಳಿತ ಮಂಡಳಿಯಿಂದ ಹಣ ಪಡೆಯಲು ವಿಫಲಗೊಂಡು ಸದಸ್ಯರ ವೇತನದಿಂದ ಕಡಿತ ಮಾಡುವ ಮೂಲಕ ಅನ್ಯಾಯ ಮಾಡಲಾಗಿದೆ.

ಸಹಕಾರಿ ಮತ್ತು ಪತ್ತಿನ ಆಡಳಿತ ಮಂಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ ಘೋಷಣೆ ಕೂಗಿದರು. ಯೂನಿಯನ್‌ ಅಧ್ಯಕ್ಷ ರಮೇಶ ಎನ್‌. ಪಡತರೆ, ಪ್ರಧಾನ ಕಾರ್ಯದರ್ಶಿ ಆರ್‌.ಎಫ್‌. ಕವಳಿಕಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.