ADVERTISEMENT

ವೇತನ ನೇರ ಪಾವತಿ,ಉಪಾಹಾರ ಪೂರೈಕೆಗೆ ಒಪ್ಪಿಗೆ

ಗುತ್ತಿಗೆ ಪೌರಕಾರ್ಮಿಕರ ಮುಷ್ಕರಕ್ಕೆ ಮಣಿದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 10:36 IST
Last Updated 24 ಮಾರ್ಚ್ 2018, 10:36 IST

ಹುಬ್ಬಳ್ಳಿ: ಗುತ್ತಿಗೆ ಪೌರಕಾರ್ಮಿಕರು ಮೂರು ದಿನಗಳಿಂದ ನಡೆಸುತ್ತಿದ್ದ ಮುಷ್ಕರಕ್ಕೆ ಮಣಿದ ಮಹಾನಗರ ಪಾಲಿಕೆಯ ಸದಸ್ಯರು, ರಾಜ್ಯ ಸರ್ಕಾರದ ಆದೇಶದಂತೆ ವೇತನ ನೇರ ಪಾವತಿಸಲು ಹಾಗೂ ಬೆಳಗ್ಗಿನ ಉಪಾಹಾರ ಪೂರೈಕೆ ಮಾಡಲು ಶುಕ್ರವಾರ ನಡೆದ ಸಾಮಾನ್ಯಸಭೆಯಲ್ಲಿ ಸಮ್ಮತಿಸಿದರು.

ಶವಯಾತ್ರೆ: ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಇತ್ತ ಗುತ್ತಿಗೆ ಪೌರಕಾರ್ಮಿಕರು ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅವರ ಅಣಕು ಶವಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಬಾಯಿ ಬಡಿದುಕೊಂಡು, ಹಲಗೆ ಬಾರಿಸುವ ಮೂಲಕ ಗಮನ ಸೆಳೆದರು. ಪಾಲಿಕೆ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿದರು.

ಮುಷ್ಕರ ನಿರತ ಗುತ್ತಿಗೆ ಪೌರಕಾರ್ಮಿಕರನ್ನು ಭೇಟಿ ಮಾಡಿದ ಮೇಯರ್‌ ಸುಧೀರ ಸರಾಫ್‌, ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸು
ವುದಾಗಿ ಭರವಸೆ ನೀಡಿದರು.

ADVERTISEMENT

ಸಭೆಯಲ್ಲಿ ನಿರ್ಣಯ ಅಂಗೀಕಾರವಾಗುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಹಟಹಿಡಿದ ಗುತ್ತಿಗೆಪೌರ ಕಾರ್ಮಿಕರು, ನೆತ್ತಿಸುಡುವ ಬಿಸಿಲನ್ನು ಲೆಕ್ಕಿಸದೇ ಪಾಲಿಕೆ ಆವರಣದಲ್ಲಿ ಧರಣಿ ಮುಂದುವರಿಸಿದರು.

ಸಭೆಯಲ್ಲಿ ಬೇಡಿಕೆ ಈಡೇರಿಸಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಬಳಕೆದಾರರ ಶುಲ್ಕಕ್ಕೆ ವಿರೋಧ: ಘನತ್ಯಾಜ್ಯ ನಿರ್ವಹಣೆ ಸಂಬಂಧ ಸಾರ್ವಜನಿಕರಿಗೆ ಬಳಕೆದಾರರ ಶುಲ್ಕ ವಿಧಿಸುವ ಪ್ರಸ್ತಾವಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ, ಪ್ರಸ್ತಾವವನ್ನು ಕೈಬಿಡಲಾಯಿತು.

ಅವಳಿ ನಗರದಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ಅನುಷ್ಠಾನವಾದ ಬಳಿಕ ಬಳಕೆದಾರರ ಶುಲ್ಕವನ್ನು ವಿಧಿಸುವಂತೆ ಸದಸ್ಯರಾದ ವೀರಣ್ಣ ಸವಡಿ, ಗಣೇಶ ಟಗರಗುಂಟಿ ಸಲಹೆ ನೀಡಿದರು.

ಮೂಲಸೌಲಭ್ಯ ಒದಗಿಸಿ: ಹುಬ್ಬಳ್ಳಿಯಲ್ಲಿರುವ ಸಾಂಸ್ಕೃತಿಕ ಭವನ ಮತ್ತು ಕನ್ನಡ ಭವನದಲ್ಲಿ ಆಸನ, ಧ್ವನಿ–ಬೆಳಕಿನ ವ್ಯವಸ್ಥೆ ಹಾಳಾಗಿದೆ. ಅದನ್ನು ಸರಿಪಡಿಸಬೇಕು ಬಾಡಿಗೆ, ಠೇವಣಿ ಕಡಿಮೆ ಮಾಡಬೇಕು ಎಂದು ಸದಸ್ಯ ಪಾಂಡುರಂಗ ಪಾಟೀಲ ಒತ್ತಾಯಿಸಿದರು.

ನೆಹರೂ ಮೈದಾನ ಅಭಿವೃದ್ಧಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ₹ 15 ಕೋಟಿ ಮೊತ್ತದಲ್ಲಿ ಹುಬ್ಬಳ್ಳಿಯ ನೆಹರೂ ಮೈದಾನವನ್ನು ಅಭಿವೃದ್ಧಿ ಪಡಿಸಲು ಸಭೆ ಒಪ್ಪಿಗೆ ಸೂಚಿಸಿತು.
**
ಸಮಿತಿ ರಚನೆ: ಮೇಯರ್‌

ಪಾಲಿಕೆ ಆಯುಕ್ತರಿಗೆ ₹ 5 ಕೋಟಿ ವಿವೇಚನಾ ನಿಧಿಯನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ. ಆದರೆ, ಅವರು ತಮಗೆ ಬೇಕಾದ ವಾರ್ಡ್‌ ಸದಸ್ಯರಿಗೆ ₹ 24 ಕೋಟಿ ಮೊತ್ತವನ್ನು ಹಂಚಿಕೆ ಮಾಡುವ ಮೂಲಕ ದುರ್ಬಳಕೆ ಮಾಡಿದ್ದಾರೆ ಎಂದು ಸದಸ್ಯ ಶಿವು ಮೆಣಸಿನಕಾಯಿ ಆರೋಪಿಸಿದರು.

ಆಯುಕ್ತರ ವಿವೇಚನಾ ನಿಧಿ ದುರ್ಬಳಕೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸಮಿತಿ ರಚನೆ ಮಾಡಲಾಗುವುದು ಎಂದು ಮೇಯರ್‌ ಸುಧೀರ ಸರಾಫ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.