ADVERTISEMENT

‘ಶಿವಾಜಿ ಮರಾಠರಿಗೆ ಮಾತ್ರ ಸೀಮಿತವಲ್ಲ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 6:15 IST
Last Updated 20 ಫೆಬ್ರುವರಿ 2017, 6:15 IST
ಶಿವಾಜಿ ಜಯಂತಿ ಪ್ರಯುಕ್ತ ಅಳ್ನಾವರದಲ್ಲಿ ತೆರೆದ ಟ್ರ್ಯಾಕ್ಟರ್‌ನಲ್ಲಿ ಶಿವಾಜಿ ವೇಷಧಾರಿ ರೂಪಕ ಗಮನ ಸೆಳೆಯಿತು
ಶಿವಾಜಿ ಜಯಂತಿ ಪ್ರಯುಕ್ತ ಅಳ್ನಾವರದಲ್ಲಿ ತೆರೆದ ಟ್ರ್ಯಾಕ್ಟರ್‌ನಲ್ಲಿ ಶಿವಾಜಿ ವೇಷಧಾರಿ ರೂಪಕ ಗಮನ ಸೆಳೆಯಿತು   

ಕುಂದಗೋಳ: ಛತ್ರಪತಿ ಶಿವಾಜಿ ಮಹಾರಾಜರು ಒಂದೇ ಜನಾಂಗಕ್ಕೆ ಸೀಮಿತರಾದವರಲ್ಲ. ಅವರೊಬ್ಬ ಸಮಸ್ತ ಹಿಂದೂ ಸಮಾಜದ ನಾಯಕ ಎಂದು ಶಿಕ್ಷಕ ಎಸ್.ಸಿ.ಶ್ಯಾನವಾಡ ಹೇಳಿದರು.

ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಭಾನುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಹೂ ಸಮರ್ಪಣೆ ಮಾಡಿದ ನಂತರ ಉಪನ್ಯಾಸ ನೀಡಿದ ಅವರು ಬಾಲ್ಯದಲ್ಲಿಯೇ ತಾಯಿ ಜೀಜಾಬಾಯಿ ಗರಡಿಯಲ್ಲಿ ಬೆಳೆದ ಶಿವಾಜಿ ಮಹಾರಾಜರು ಜಗತ್ತು ಕಂಡ ಅಪರೂಪದ ಮಹಾನ್ ವ್ಯಕ್ತಿಯಾಗಿ­ದ್ದರು. ಆದರೆ ಇಂದಿನ ದಿನಮಾನಗಳಲ್ಲಿ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ವಿಷಾದಕರ ಸಂಗತಿ ಎಂದರು.

ಶಿವಾಜಿ ಹುಟ್ಟದಿದ್ದರೆ ಇಂದು ಹಿಂದೂ ಸಂಸ್ಕೃತಿ ಇರುತ್ತಿರಲಿಲ್ಲ. ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿದರೆ ಎಲ್ಲರೂ ಸಮಾಜದಲ್ಲಿ ದೊಡ್ಡ ಮನುಷ್ಯನಾಗಿ ಬೆಳೆಯುತ್ತಾನೆ. ಇದಕ್ಕೆ ಶಿವಾಜಿಯೇ ಸಾಕ್ಷಿ ಎಂದರು.

ತಹಶೀಲ್ದಾರ್ ಮಹದೇವ ಬಣಸಿ ಮಾತನಾಡಿ ಜೀಜಾಬಾಯಿಯು ಶಿವಾಜಿಯನ್ನು ಬೆಳೆಸಿದಂತೆ ಪಾಲಕರು ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಯುವಕರು ಶಿವಾಜಿ ಮಹಾರಾಜರ ಆದರ್ಶ ತತ್ವಗಳನ್ನು ಮನಸ್ಸಿನಲ್ಲಿ  ಅಳವಡಿಸಿಕೊಳ್ಳಬೇಕು ಎಂದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಕಿರೇಸೂರ ಕಾರ್ಯ­ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾಜದ ಅಧ್ಯಕ್ಷ ವಿಠಲ ಚವ್ಹಾಣ, ಮುಖಂಡರಾದ ಸಿ.ಎಂ. ಕಾಳೆ, ಜಿ.ಡಿ. ಘೋರ್ಪಡೆ, ವಸಂತ ಶಿಂಧೆ, ಶಿವಾಜಿ ಗಾಯಕವಾಡ, ಜ್ಯೋತಿಬಾ ಖೈರೋಜಿ, ಶಂಕರ ಪರಮೇಕರ, ಪೃಥ್ವಿ ಕಾಳೆ, ಮಾರುತಿ ಕೈರಾಯಿ ಸಂಭಾಜಿ ತಡಸದ, ಪರಶುರಾಮ ಮಾನಪ್ಪನವರ, ಪ್ರಕಾಶ ಟೀಕಪ್ಪನವರ, ರಾಜು ಶಿವಳ್ಳಿ, ಮಂಜುನಾಥ ಭೋಸ್ಲೆ, ವಿಷ್ಣು ಬಾನೋಜಿ, ಬಸವರಾಜ ಕಮಡೊಳ್ಳಿ, ಅಧಿಕಾರಿಗಳಾದ ಚಿದಂಬರ ಜೋಶಿ, ಗೋಪಾಲಕೃಷ್ಣ, ಸಿದ್ದರಾಮೇಶ್ವರ, ಬಸವರಾಜ ಕುಸುಗಲ್, ಗಣೇಶ ಕೊಕಾಟೆ ವೇದಿಕೆಯಲ್ಲಿ ಇದ್ದರು.

ಶಾಸಕ ಸಿ.ಎಸ್. ಶಿವಳ್ಳಿ, ಬಿಜೆಪಿ ಮುಖಂಡ ಎಂ.ಆರ್. ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಉಮೇಶ ಹೆಬಸೂರ, ಬಿಜೆಪಿ ಅಧ್ಯಕ್ಷ ಮಾಲತೇಶ ಶ್ಯಾಗೋಟಿ ಛತ್ರಪತಿ ಶಿವಾಜಿ ಪುತ್ಥಳಿಗೆ ಹೂಮಾಲೆ ಹಾಕಿದರು.

ಸಂಭ್ರಮದ ಶಿವಾಜಿ ಜಯಂತಿ: ಭವ್ಯ ಮೆರವಣಿಗೆ
ಅಳ್ನಾವರ:
ಶಿವಾಜಿ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಭಾನುವಾರ ಸಂಜೆ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ನಡೆಯಿತು. ತೆರೆದ ಟ್ರ್ಯಾಕ್ಟರ್‌ನಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರ ಅಲಂಕರಿಸಲಾಗಿತ್ತು. ಶಿವಾಜಿ ವೇಷಧಾರಿಗಳ ರೂಪಕ ಕೂಡಾ ಮೆರವಣಿಗೆಗೆ ಮೆರಗು ತಂದಿತು.
ಬಸ್ ನಿಲ್ದಾಣದ ಬಳಿ ಇರುವ ಅಂಬಾಭವಾನಿ ದೇವಸ್ಥಾನದ ಎದುರು ಸಂಜೆ ಹಿರಿಯರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಎತ್ತುಗಳ ಜೋಡಿಗಳನ್ನು ಬಹು ಉತ್ಸಾಹದಿಂದ ಅಲಂಕರಿಸಿ ಮೆರವಣಿಗೆಯಲ್ಲಿ ಕರೆತರಲಾಗಿತ್ತು. ಅಲಂಕೃತ ಎತ್ತುಗಳ ಜೋಡಿಗಳ ಸಾಲಾಗಿ ಮೆರವಣಿಗೆಯಲ್ಲಿ ಸಾಗುವ ನೋಟ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಪ್ರತಿ ವರ್ಷ ಅಕ್ಷಯ ತೃತೀಯ ದಿನ ಶಿವಾಜಿ ಜಯಂತಿ ನಡೆಯುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಶಿವಾಜಿ ಹುಟ್ಟು ಹಬ್ಬದ ಪ್ರಯುಕ್ತ ಭಾನುವಾರ ಜಯಂತಿ ಆಚರಿಸಲಾಯಿತು.
ಇಂದಿರಾ ನಗರ ಬಡಾವಣೆಯ ಅಂಬಾಭವಾನಿ ದೇವಸ್ಥಾನದಲ್ಲಿ ಬೆಳಿಗ್ಗೆ ಬಾಲ ಶಿವಾಜಿಯ ತೊಟಿಲು ಸೇವೆ ನಡೆಯಿತು. ತೊಟ್ಟಿಲನ್ನು ತೂಗಿ ಮುತ್ತೈದೆಯರು ಜೋಗುಳ ಗೀತೆ ಹಾಡಿದರು. ಈ ಗೀತೆಗಳಲ್ಲಿ ಶಿವಾಜಿಯ ಜನನ ಹಾಗೂ ಜೀವನ ಚರಿತ್ರೆ ಅಡಕವಾಗಿತ್ತು. ಮರಾಠಾ ಸಮಾಜದ  ಹಿರಿಯರು,ಯುವಕರು, ಸಾರ್ವಜನಿಕರು ಇದ್ದರು.

ಶ್ರೀ ಛತ್ರಪತಿ ಶಿವಾಜಿ ಅರ್ಬನ್ ಬ್ಯಾಂಕಿನ ಆವರಣದಲ್ಲಿ ಇರುವ ಶಿವಾಜಿ ಪುತ್ಥಳಿಗೆ ಸಂಘದ ಅಧ್ಯಕ್ಷ ಬಳಿರಾಮ ಅಳೋನಿ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದರು. ಕೃಷ್ಣ ಅಷ್ಠೇಕರ, ನಿಂಗಪ್ಪ ಬೇಕ್ವಾಡಕರ, ನಾರಾಯಣ ಮೋರೆ, ವಿಷ್ಣು ಕೇಸರೇಕರ, ಪರಶುರಾಮ ಕಾಕತ್ಕರ್‌, ಜಯಶ್ರೀ ಮೋರೆ, ಮಂಜುನಾಥ ನಂದ್ಯಾಳಕರ ಇದ್ದರು.

ಪಟ್ಟಣ ಪಂಚಾಯ್ತಿ ಕಾರ್ಯಾಲಯ­ದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪ್ರಭಾರಿ ಅಧ್ಯಕ್ಷ ಉಸ್ಮಾನ್‌ ಬಾತಖಂಡೆ ಪೂಜೆ ನೇರವೇರಿಸಿದರು. ಪುಂಡಲಿಕ ಪಾರದಿ ನಿರೂಪಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್‌ ರ್‍್ಯಾಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.