ADVERTISEMENT

‘ಶೋಷಣೆ ತಡೆಗೆ ಶಿವನಗೌಡರ ಸೇವೆ ಅಪಾರ’

₹ 4.5 ಕೋಟಿ ವೆಚ್ಚದಲ್ಲಿ ಹತ್ತಿ ಜಿನ್ನಿಂಗ್ ಫಾಕ್ಟರಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 25 ಮೇ 2017, 8:58 IST
Last Updated 25 ಮೇ 2017, 8:58 IST

ಅಣ್ಣಿಗೇರಿ: ‘ಸುಮಾರು 50 ವರ್ಷಗಳ ಹಿಂದೆ ಈ ಭಾಗದ ರೈತರ ಶೋಷಣೆಗಳನ್ನು ತಡೆಗಟ್ಟುವಲ್ಲಿ ಸಾಸ್ವಿಹಳ್ಳಿ ಶಿವನಗೌಡರ ಸೇವೆ ಬಹಳ ಅಪಾರವಾದದ್ದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸ್ಥಳೀಯ ದಿ.ಅಣ್ಣಿಗೇರಿ ಅಗ್ರಿಕಲ್ಚರಲ್ ಪ್ರೊಡ್ಯೂಸ್ ಕೋ-ಆ ಸೇಲ್ ಆ್ಯಂಡ್‌ ಪ್ರೊಸೆಸಿಂಗ್ ಸೊಸೈಟಿಯ ವತಿಯಿಂದ ಆಯೋಜಿಸಲಾಗಿದ್ದ ಕೆ.ಎಸ್.ಪಾಟೀಲರ 88ನೇ ಜಯಂತ್ಯುತ್ಸವ ಹಾಗೂ ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

‘ಈ ಭಾಗದ ರೈತರಿಗೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಈ ಸಂಸ್ಥೆ ಆರ್ಥಿಕ ಸಹಾಯವನ್ನು ನೀಡಿ ವಿದ್ಯಾವಂತರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದ ತುಂಬೆಲ್ಲಾ ಈ ಸೊಸೈಟಿ ಬೆಳಕಿಗೆ ಬರಲು ಕಾರಣಿಭೂತರಾದ ಸಹಕಾರಿ ಸಂಘದ ಹಿತಚಿಂತಕ ಬಿ.ವಿ. ಪಾಟೀಲ ಮತ್ತು ವ್ಯವಸ್ಥಾಪಕ ಎಚ್.ಎಫ್. ಕಿರೇಸೂರ ಅವರನ್ನು ಕರೆಸಿ ಸನ್ಮಾನಿಸಿ ಗೌರವಿಸಿದ್ದು ಸಂತೋಷದಾಯಕ’ ಎಂದರು.

‘ಪಟ್ಟಣದಲ್ಲಿ ಸುಮಾರು ₹4.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಪ್ರತಿದಿನ ಸುಮಾರು 400ರಿಂದ 600 ಕ್ವಿಂಟಾಲ್ ಹತ್ತಿಯನ್ನು ಜಿನ್ನಿಂಗ್ ಮಾಡುವ ಫ್ಯಾಕ್ಟರಿಯನ್ನು ಅಣ್ಣಿಗೇರಿಯಲ್ಲಿ ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿ’ ಎಂದು ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಹೇಳಿದರು.

‘ರೈತರ ಸಂಕಷ್ಟಗಳನ್ನು ಅರಿತುಕೊಂಡು ತನ್ನ ಖರ್ಚಿನಲ್ಲಿ ಇಂತಹ ದೊಡ್ಡ ಪ್ರಮಾಣದ ಫ್ಯಾಕ್ಟರಿಯನ್ನು ಆರಂಭಿಸಿರುವುದು ಈ ಭಾಗದ ರೈತರ ಪುಣ್ಯ. ಇದೇ ರೀತಿ ಮುಂದಿನ ದಿನಗಳಲ್ಲಿ ರೈತರು ಈ ಸಂಘದ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಸಂಸ್ಥೆಯನ್ನು ಉನ್ನತ ಮಟ್ಟದಲ್ಲಿ ಬೆಳೆಸಬೇಕು’ ಎಂದು ಕೆ.ಪಿ.ಸಿ.ಸಿ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಎಚ್.ಎಫ್. ಜಕ್ಕಪ್ಪನವರ ಹೇಳಿದರು.

ಸಂಸ್ಥೆ ನಡೆದು ಬಂದ ಹಾದಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು ಬಗ್ಗೆ ಹುಲಕೋಟಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕೆ.ಬಿ. ತಳಗೇರಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಮಾಡಳ್ಳಿ, ಸಹಕಾರಿ ಸಂಘದ ಉಪ ನಿಬಂಧಕ ಕೆ.ಎಲ್.ಶ್ರೀನಿವಾಸ, ಎಂ.ಬಿ. ಪಾಟೀಲ, ವಿ.ಎನ್. ಮೇಟಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ರೈತ ಬಾಂಧವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.