ADVERTISEMENT

ಸಮರ್ಥ ನಾಯಕ ಈಗಲೇ ಸಜ್ಜುಗೊಳ್ಳಲಿ

‘ಅಧ್ಯಕ್ಷರಾಗಿ ಪಾಪು–50’ ವಿಚಾರ ಸಂಕಿರಣದಲ್ಲಿ ಡಾ.ಎಸ್‌.ಎಂ.ಜಾಮದಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 10:59 IST
Last Updated 20 ಜುಲೈ 2017, 10:59 IST
‘ಅಧ್ಯಕ್ಷರಾಗಿ ಪಾಪು–50’ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಡಾ.ಎಸ್‌.ಎಂ.ಜಾಮದಾರ ಹಾಗೂ ಡಾ. ಪಾಟೀಲ ಪುಟ್ಟಪ್ಪ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ಡಾ. ಮಾಲತಿ ಪಟ್ಟಣಶೆಟ್ಟಿ ಇದ್ದಾರೆ
‘ಅಧ್ಯಕ್ಷರಾಗಿ ಪಾಪು–50’ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಡಾ.ಎಸ್‌.ಎಂ.ಜಾಮದಾರ ಹಾಗೂ ಡಾ. ಪಾಟೀಲ ಪುಟ್ಟಪ್ಪ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ಡಾ. ಮಾಲತಿ ಪಟ್ಟಣಶೆಟ್ಟಿ ಇದ್ದಾರೆ   

ಧಾರವಾಡ: ‘ಕನ್ನಡದ ಕಾರ್ಯಕ್ಕೆ ಸದಾ ಮುಂಚೂಣಿಯಲ್ಲಿ ನಿಲ್ಲುವ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕರನ್ನು ಹುಡುಕಿ ಅವರನ್ನು ಸಜ್ಜುಗೊಳಿಸುವ ಕಾರ್ಯವನ್ನು ಸಂಘದ ಅಧ್ಯಕ್ಷ ಡಾ. ಪಾಟೀಲ ಪುಟ್ಟಪ್ಪ ಈಗಲೇ ಆರಂಭಿಸಬೇಕು’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಡಾ. ಎಸ್‌.ಎಂ. ಜಾಮದಾರ ವಿನಂತಿಸಿಕೊಂಡರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬುಧವಾರದಿಂದ ಆರಂಭಗೊಂಡ 128ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ‘ಅಧ್ಯಕ್ಷರಾಗಿ ಪಾಪು–50’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯ 128 ವರ್ಷಗಳ ಅವಧಿಯಲ್ಲಿ 50 ವರ್ಷಗಳ ಕಾಲ ಸತತವಾಗಿ ಅಧ್ಯಕ್ಷರಾಗಿರುವ ಡಾ. ಪಾಟೀಲ ಪುಟ್ಟಪ್ಪ ಅವರು ಕನ್ನಡದ ಸಾಕ್ಷಿಪ್ರಜ್ಞೆಯಂತೆ ಹೋರಾಟದ ನೇತೃತ್ವವಹಿಸಿದ್ದು ಹಾಗೂ ಇಂದಿಗೂ ಕನ್ನಡ ಕಟ್ಟುವ ಕೆಲಸದಲ್ಲಿ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿರುವುದು ಸಂಘದ ಬೆಳವಣಿಗೆಗೆ ಕಾರಣವಾಗಿದೆ.

ADVERTISEMENT

ಹೀಗಾಗಿ ಹಲವು ಇತಿಹಾಸ ಸೃಷ್ಟಿಗೆ ಕಾರಣವಾಗಿರುವ ಇಂಥ ಸಂಸ್ಥೆಯನ್ನು ಮುನ್ನಡೆಸಲು ಸಾಮರ್ಥ್ಯ ಇರುವವರನ್ನು ಹುಡುಕಿ ಈಗಿಂದಲೇ ಡಾ. ಪಾಪು ಅವರು ತರಬೇತಿ ನೀಡಬೇಕು. ಆ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡದ ಏಳಿಗೆಗೆ ಸದಾ ಮುಂಚೂಣಿಯಲ್ಲಿರುವಂತೆ ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸುವ ಪ್ರಯತ್ನ ನಡೆಸಬೇಕು’ ಎಂದರು.

‘ಇಲ್ಲಿನ ಮೂರು ಕೆಂಪು ಕಟ್ಟಡಗಳು ಉತ್ತರ ಕರ್ನಾಟಕದಲ್ಲಿ ನಡೆದ ಹಲವು ಚಳವಳಿಗಳಲ್ಲಿ ಮಹತ್ತರ ಪಾತ್ರವಹಿಸಿವೆ. ಚಳವಳಿಗಳ ಕಾಲದಲ್ಲಿ ಇಲ್ಲಿದ್ದ ಪ್ರತಿಯೊಬ್ಬರೂ ಈ ಮೂರು ಶಕ್ತಿ ಕೇಂದ್ರಗಳ ಮಹತ್ವವನ್ನು ತಿಳಿದಿರುತ್ತಾರೆ. ಅಂಥವರಲ್ಲಿ ನಾನೂ ಒಬ್ಬ’ ಎಂದು ಅವರು ಹೇಳಿದರು.

‘ನಾಡಿನ ಏಕೀಕರಣ, ಭಾಷೆ ಹಿರಿಮೆಗಾಗಿ ಮೂರು ಕೆಂಪು ಕಟ್ಟಡಗಳಾದ ಕರ್ನಾಟಕ ವಿದ್ಯಾವರ್ಧಕ ಸಂಘ, ಶಿಕ್ಷಕರ ತರಬೇತಿ ಕೇಂದ್ರ ಹಾಗೂ ಕರ್ನಾಟಕ ಕಾಲೇಜು ಪ್ರಮುಖ ಪಾತ್ರ ವಹಿಸಿವೆ. ಇಲ್ಲಿ ಅನೇಕ ಚಳವಳಿಗಳ ರೂಪುರೇಷೆಗಳು ಸಿದ್ಧಗೊಂಡಿವೆ. ಚಳವಳಿಗಳ ಹುಟ್ಟಿಗೆ ಪ್ರೇರಣೆಯಾಗಿವೆ. ಹಾಗೆಯೇ ನೂರಾರು ಹೋರಾಟಗಾರರನ್ನು ಈ ನಾಡಿಗೆ ನೀಡಿದ ಕೊಡುಗೆಯೂ ಈ ಮೂರು ಕಟ್ಟಡಗಳಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಕನ್ನಡತನಕ್ಕೆ ಗೂಟ ಹೊಡೆದು ಕೂತ ಪಾಪು’
ನಂತರ ನಡೆದ ಗೋಷ್ಠಿಯಲ್ಲಿ ‘ಕನ್ನಡ ಉಸಿರಾಗಿ ಪಾಪು’ ಎಂಬ ವಿಷಯ ಕುರಿತು ಮಾತನಾಡಿದ ಡಾ.ಶಾಂತಿನಾಥ ದಿಬ್ಬದ, ‘ಪಾಟೀಲ ಪುಟ್ಟಪ್ಪ ಅವರು ಸಂಘದ ಅಧ್ಯಕ್ಷರಾಗಿ ಗೂಟ ಹೊಡೆದು ಕೂತಿದ್ದಾರೆ ಎಂದು ಅಸೂಯೆಯಿಂದ ಮಾತನಾಡುವವರಿದ್ದಾರೆ. ಆದರೆ ಪಾಪು ಗೂಟ ಹೊಡೆದು ಕೂತಿದ್ದು ಸಂಘದಲ್ಲಿ ಅಲ್ಲ, ಬದಲಿಗೆ ಕನ್ನಡತನಕ್ಕೆ.

ನರು ಬದುಕಬೇಕಾದರೆ ಬಳಸುವ ಭಾಷೆ ಉಳಿಯಬೇಕು ಎಂದು ಸ್ವಾತಂತ್ರ್ಯ ಪೂರ್ವದಿಂದಲೇ ಪ್ರತಿಪಾದಿಸಿಕೊಂಡು ಬಂದಿರುವ ಪಾಪು ಅವರಿಗೆ ಇಂದಿಗೂ ಕನ್ನಡ ಕುರಿತ ಯಾವುದೇ ಹೋರಾಟದ ಮುಂದಾಳತ್ವ ವಹಿಸುವ ಸಾಮರ್ಥ್ಯವಿದೆ. ಅವರ ಅಗಾಧ ನೆನಪಿನ ಶಕ್ತಿ ಕುರಿತೇ ಸಂಶೋಧನೆ ನಡೆಸಬಹುದಾಗಿದೆ’ ಎಂದರು.

‘ಏಕೀಕರಣಕ್ಕೆ ನಿರಾಸಕ್ತಿ ಹೊಂದಿದ್ದ ಮೈಸೂರು ಭಾಗದವರ ಒಳಸಂಚನ್ನು ಅರಿತಿದ್ದ ಡಾ. ಪಾಪು, ಮೈಸೂರು ಒಳಗೊಂಡೇ ಕರ್ನಾಟಕ ಏಕೀಕರಣ ಆಗಬೇಕು ಎಂದು ಲಿಖಿತ ರೂಪದಲ್ಲಿ ಒತ್ತಾಯ ಮಾಡಿದ್ದರಿಂದಾಗಿ ಇಂದು ಅಖಂಡ ಕರ್ನಾಟಕ ರಚನೆಯಾಗಿದೆ. ಆದರೆ ಇಂದಿಗೂ ಕರ್ನಾಟಕದಿಂದ ಹೊರಗುಳಿದ ಕನ್ನಡ ಪ್ರದೇಶಗಳ ಕುರಿತು ಅವರಲ್ಲಿ ಬೇಸರವಿದೆ’ ಎಂದರು.

‘ಪಾಪು ಸಾಹಿತ್ಯ’ ವಿಷಯ ಕುರಿತು ಮಾತನಾಡಿದ ಡಾ.ಮಾಲತಿ ಪಟ್ಟಣಶೆಟ್ಟಿ, ‘ಪಾಪು ರಚಿಸಿದ ಪ್ರತಿಯೊಂದು ಕೃತಿಯಲ್ಲೂ ಕನ್ನಡದ ಪ್ರತಿ ಭಾಗದ ವ್ಯಕ್ತಿಗಳ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಆಶಾವಾದಿ, ಅಂತಃಕರಣ ಹಾಗೂ ಸೃಜನಶೀಲತೆ ಅವರ ಬರವಣಿಗೆಯಲ್ಲಿ ಕಾಣಬಹುದಾಗಿದೆ ಎಂದರು.

ಡಾ. ಸರಜೂ ಕಾಟ್ಕರ್‌, ಪ್ರೊ. ಅಲ್ಲಮಪ್ರಭು ಬೆಟದೂರ, ಎ.ಎಸ್‌.ಎನ್‌.ಹೆಬ್ಬಾರ, ಸಿ.ಚನ್ನಬಸವಣ್ಣ, ಮನೋಜ ಪಾಟೀಲ, ಡಾ. ಬಸವರಾಜ ಸಾದರ, ಡಾ. ಶಾಂತಾ ಇಮ್ರಾಪುರ ಡಾ. ಪಾಟೀಲ ಪುಟ್ಟಪ್ಪ ಅವರ ಬದುಕಿನ ಕುರಿತು ಮಾತನಾಡಿದರು.

**

ನಿಮ್ಮ ಸಂಶಯವೇನು?

‘ಪಾಟೀಲ ಪುಟ್ಟಪ್ಪ ಅವರು ನೂರು ವರ್ಷ ಪೂರೈಸಬೇಕು. ನೂರು ವರ್ಷದ ಕಾರ್ಯಕ್ರಮದಲ್ಲಿ ನನಗೆ ಮಾತನಾಡಲು ಅವಕಾಶ ಸಿಗಬೇಕು ಎಂದು ಪ್ರಾರ್ಥಿಸುತ್ತೇನೆ’ ಎಂದು ಡಾ.ಶಾಂತಿನಾಥ ದಿಬ್ಬದ ತಮ್ಮ ಮಾತಿನಲ್ಲಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ ಪುಟ್ಟಪ್ಪ, ‘ನಿಮ್ಮ ಸಂಶಯವೇನು?’ ಎಂದು ಚುಟುಕು ಪ್ರಶ್ನೆಯನ್ನು ಮುಂದಿಟ್ಟಾಗ ಇಡೀ ಸಭಾಂಗಣವೇ ನಗೆಗಡಲಿನಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.