ADVERTISEMENT

ಸಿಂಚಾಯಿ ಹನಿ ನೀರಾವರಿ ಯೋಜನೆಗೆ ಜಿಲ್ಲೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 4:49 IST
Last Updated 1 ಸೆಪ್ಟೆಂಬರ್ 2017, 4:49 IST

ಧಾರವಾಡ: ‘ಕೃಷಿ ಸಿಂಚಾಯಿ ಹನಿ ನೀರಾವರಿ ಯೋಜನೆಯಡಿ ರಾಜ್ಯದಲ್ಲಿ ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಧಾರವಾಡ ಜಿಲ್ಲೆಯೂ ಸೇರಿದೆ’ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು.

ತಾಲ್ಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್‌), ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ನವಭಾರತ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಿಲ್ಲೆಗೆ ಇಂಥ ಯೋಜನೆಯ ಜತೆಗೆ ರೈತರ ಆದಾಯ ದ್ವಿಗುಣಗೊಳಿಸುವ ನವಭಾರತ ಮಂಥನ ಸಂಕಲ್ಪ ಸಿದ್ಧಿ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ. ನೀರಾವರಿ ಸಂಪನ್ಮೂಲ ಸೌಕರ್ಯಗಳು, ಸುಧಾರಿತ ಬೀಜ, ಸಸಿಗಳ ಬಳಕೆ, ಸಾವಯವ ಕೃಷಿ, ಮಣ್ಣು ಆರೋಗ್ಯ ಕಾಪಾಡುವುದು, ಕೊಯ್ಲೋತ್ತರ ಗೋದಾಮು ಹಾಗೂ ಶೀಥಲ ಗೃಹ ಸೌಲಭ್ಯ, ಆಹಾರ ಸಂಸ್ಕರಣೆ, ಮೌಲ್ಯ ವರ್ಧನೆ,  ವಿದ್ಯುನ್ಮಾನ ರಾಷ್ಟ್ರೀಯ ಕೃಷಿ ಮಾರುಕಟ್ಟೆ ವ್ಯವಸ್ಥೆ, ಕೃಷಿ ಕ್ಷೇತ್ರದಲ್ಲಿ ನಷ್ಟವನ್ನು ಕಡಿಮೆ ಮಾಡಲು ಸಾಲದ ವ್ಯವಸ್ಥೆ ಬಲಪಡಿಸುವುದು, ಕೃಷಿ ಪೂರಕ ಯೋಜನೆಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು, ಮೀನುಗಾರಿಕೆ, ಅರಣ್ಯ ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಕುರಿತು ಕಾರ್ಯಕ್ರಮಗಳನ್ನು ಒಳಗೊಂಡಿದೆ’ ಎಂದು ಹೇಳಿದರು.

ADVERTISEMENT

ರಾಷ್ಟ್ರದಲ್ಲಿ 80 ಕೋಟಿ ಜನರ ಒಂದು ದಿನದ ಆದಾಯ ಕೇವಲ ₹ 20 ಮಾತ್ರ. ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳವರೆಗೆ ಕೃಷಿಯಲ್ಲಿ ಬದಲಾವಣೆ ತರಲು ರೈತರಿಗಾಗಿ ನೀರು, ವಿದ್ಯುತ್ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಿದೆ. ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಮಾಡಲು ಆನ್‌ಲೈನ್‌ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ’ ಎಂದು ಹೇಳಿದರು.  

ಜಿಲ್ಲೆಯ ರೈತರು ಒಟ್ಟು ₹ 16 ಕೋಟಿ ಬೆಳೆವಿಮೆ ವಂತಿಗೆಯನ್ನು ಭರಿಸಿ ದ್ದಾರೆ. ಅದರಲ್ಲಿ ₹ 85 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಮೆಣಸು ಹಾಗೂ ಹತ್ತಿ ಮೊದಲ ಬಾರಿಗೆ ಕಟಾವು ನಡೆಸಿದ ಸಮೀಕ್ಷೆ ನಡೆದಿದೆ. ಎರಡನೇ ಬಾರಿ ಸಮೀಕ್ಷೆಗೆ ಹೊಲದಲ್ಲಿ ಬೆಳೆ ಇಲ್ಲದಿರು ವುದರಿಂದ ಸಮೀಕ್ಷೆ ನಡೆಸಿಲ್ಲ.

ಆದ್ದರಿಂದ ₹ 45 ಕೋಟಿ ಬೆಳೆ ವಿಮೆ ಬಾಕಿ ಇದೆ. ಭತ್ತಕ್ಕಾಗಿ ₹ 10 ಕೋಟಿ ಬೆಳೆ ವಿಮೆ ಬಿಡುಗಡೆಗೊಂಡಿದೆ’ ಎಂದರು.   ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಪಿ. ಬಿರಾದಾರ ಅವರು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಶಪಥವನ್ನು ರೈತರಿಗೆ ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.