ADVERTISEMENT

ಸ್ಕ್ಯಾನಿಂಗ್‌ ಯಂತ್ರ ನಿಷ್ಕ್ರಿಯ: ಪರದಾಟ

ಗುರು ಪಿ.ಎಸ್‌
Published 21 ಏಪ್ರಿಲ್ 2017, 7:40 IST
Last Updated 21 ಏಪ್ರಿಲ್ 2017, 7:40 IST

ಹುಬ್ಬಳ್ಳಿ :  ‘ಮಶಿನ್ ಸರಿ ಇಲ್ರೀ... ನಾಳೆ ಬರ್ರಿ...’ಮೂರು ದಿನಗಳಿಂದ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ರೋಗಿಗಳಿಗೆ ಹೇಳುತ್ತಿರುವ ಮಾತಿದು. ‘ನನ್ನ ಅಳಿಯನಿಗೆ ಸಕ್ಕರೆ ಕಾಯಿಲೆ ಹೆಚ್ಚಾಗಿ ಕಣ್ಣು ಹೋಗಿವೆ. ವೈದ್ಯರ ಬಳಿ ತೋರಿಸಿದಾಗ ಮೆದುಳಿನಲ್ಲಿ ರಕ್ತಸ್ರಾವ ಆಗಿದೆ, ಸ್ಕ್ಯಾನ್ ಮಾಡಿಸಬೇಕು ಎಂದರು. ಕಿಮ್ಸ್‌ನಲ್ಲೇ ₹800 ಕಟ್ಟಿಸಿಕೊಂಡರು. ಮೂರು ದಿನ ಓಡಾಡಿದ ನಂತರ ಸ್ಕ್ಯಾನ್ ಮಾಡಿಸಿದ್ದೇವೆ. ಈಗ ರಿಪೋರ್ಟ್ ಕೊಡಿ ಎಂದರೆ, ಇಂಜೆಕ್ಷನ್ ಮಾಡಿಸಿದ ಮೇಲೆ ಇನ್ನೊಮ್ಮೆ ಸ್ಕ್ಯಾನ್ ಮಾಡಿಸಬೇಕು ಎನ್ನುತ್ತಿದ್ದಾರೆ. ಎರಡನೇ ಬಾರಿ ಸ್ಕ್ಯಾನ್ ಮಾಡಿಸಲು ಮೂರು ದಿನದಿಂದ ಓಡಾಡುತ್ತಿದ್ದೇವೆ. ರಿಪೋರ್ಟ್ ಕೊಡುತ್ತಿಲ್ಲ, ಸ್ಕ್ಯಾನ್ ಯಂತ್ರ ಕೆಟ್ಟಿದೆ ಎಂಬ ಉತ್ತರ ನೀಡುತ್ತಿದ್ದಾರೆ’ ಎಂದು ಹಾವೇರಿಯ ಬಂಕಾಪುರದಿಂದ ಬಂದಿದ್ದ ರಾಮು ಬಡಿಗೇರ ಅಸಮಾಧಾನ ವ್ಯಕ್ತಪಡಿಸಿದರು.

‘ನನ್ನ ತಾಯಿಯ ಉದರ ಸ್ಕ್ಯಾನ್ ಮಾಡಿಸಬೇಕು.  ಇದಕ್ಕಾಗಿ ನಾನು ಇದೇ ತಿಂಗಳು 4ನೇ ತಾರೀಖಿಗೆ ₹1,600 ಕಟ್ಟಿದ್ದೇನೆ. ಆದರೆ ಈವರೆಗೂ ಸ್ಕ್ಯಾನ್ ಮಾಡಿಸಲು ಆಗಿಲ್ಲ’ ಎಂದು ಲಕ್ಷ್ಮಣ ಚಂದ್ರಪ್ಪ ಶಿರೂರ ದೂರಿದರು.‘ಕಿಮ್ಸ್ ಸಿಬ್ಬಂದಿ ಈ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸೌಜನ್ಯದಿಂದಲೂ ವರ್ತಿಸುವುದಿಲ್ಲ. ಉಡಾಫೆಯಿಂದ ಮಾತನಾಡುತ್ತಾರೆ. ಬಿಸಿಲಿನಲ್ಲಿ ದಣಿದು ಬರುವ ರೋಗಿಗಳ ಜೊತೆ ಕಿಮ್ಸ್‌ ಆಸ್ಪತ್ರೆಯ ಸಿಬ್ಬಂದಿ ಆಟವಾಡುತ್ತಿದ್ದಾರೆ’ ಎಂದು ಹುಬ್ಬಳ್ಳಿಯ ಗುರುರಾಜ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.

ಮೂರನೇ ಬಾರಿ:  ಈ ಬಗ್ಗೆ ವಿಚಾರಿ15 ದಿನಗಳಲ್ಲಿ ಮೂರನೇ ಬಾರಿ ಸಿಟಿ ಸ್ಕ್ಯಾನಿಂಗ್ ಯಂತ್ರ ಕೆಟ್ಟು ಹೋಗಿದೆ ಎಂದು ಕಿಮ್ಸ್ ಸೂಪರಿಂಟಿಂಡೆಂಟ್ ಅವರೇ ಹೇಳುತ್ತಾರೆ!
‘ಈಗ ಕಿಮ್ಸನಲ್ಲಿರುವ ಸಿಟಿ ಸ್ಕ್ಯಾನಿಂಗ್ ಯಂತ್ರ 12 -13 ವರ್ಷ ಹಳೆಯದು. ಪದೇ ಪದೇ ರಿಪೇರಿಗೆ ಬರುತ್ತಿದೆ. ಈಗ ಆಯಿಲ್ ಸೋರಿಕೆಯಾಗುತ್ತಿರುವುದರಿಂದ ಕೆಟ್ಟಿದೆ. ಇಂತಹ ಯಂತ್ರಗಳ ನಿರ್ವಹಣೆಗಾಗಿಯೇ ವರ್ಷಕ್ಕೆ ₹22 ಲಕ್ಷ ತೆಗೆದಿರಿಸಿರುತ್ತೇವೆ. ಆದರೆ, ಈ ಒಂದು ಯಂತ್ರದ ದುರಸ್ತಿಗಾಗಿ ₹28 ಲಕ್ಷ ಖರ್ಚು ಆಗಿದೆ’ ಎಂದು ಕಿಮ್ಸ್ ಸೂಪರಿಂಟಿಂಡೆಂಟ್ ಶಿವಪ್ಪ ಆನುರಶೆಟ್ರು ತಿಳಿಸಿದರು.

ADVERTISEMENT

ಖಾಸಗಿಯವರೊಂದಿಗೆ ಒಪ್ಪಂದ: ‘ಈ ಯಂತ್ರಗಳು ಬರುವುದಕ್ಕೂ ಮುನ್ನ ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು. ಈಗ ಅದೇ ರೀತಿ ಖಾಸಗಿ ಕೇಂದ್ರಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಉದ್ದೇಶವಿದೆ’ ಎಂದು ಹೇಳಿದರು. ‘ಕೇಂದ್ರ ಸರ್ಕಾರ ಅನುಮೋದಿಸಿದ ದರದಲ್ಲಿ ಸೇವೆ ಒದಗಿಸುವಂತೆ ಈ ಕೇಂದ್ರಗಳನ್ನು ಕೋರಲಾಗುವುದು. ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಈ ಪರ್ಯಾಯ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಮಾಡಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.