ADVERTISEMENT

ಹತ್ತಿ ಬೇಲ್ ಬೆಂಕಿಗಾಹುತಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:59 IST
Last Updated 15 ಮಾರ್ಚ್ 2017, 6:59 IST
ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಕಾಟನ್‌ ಪ್ರೆಸಿಂಗ್‌ ಫ್ಯಾಕ್ಟರಿಯಲ್ಲಿ ಉಂಟಾದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು
ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಕಾಟನ್‌ ಪ್ರೆಸಿಂಗ್‌ ಫ್ಯಾಕ್ಟರಿಯಲ್ಲಿ ಉಂಟಾದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು   

ಹುಬ್ಬಳ್ಳಿ: ಹತ್ತಿಯ ಬೀಜ ಬಿಡಿಸಿ ಪ್ರೆಸಿಂಗ್ ಮಾಡುವ ಫ್ಯಾಕ್ಟರಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಬೇಲ್‌ (ಜಿನಿಂಗ್ ಫ್ಯಾಕ್ಟರಿಗೆ ಕಳುಹಿಸಲು ಸಿದ್ಧಗೊಂಡಿರುವ ಹತ್ತಿಯ ಮೂಟೆ) ಸುಟ್ಟು ಕರಕಲಾಗಿದೆ.

ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಕಾಟನ್ ಸೀಡ್‌ ಕಾರ್ಪೊರೇಷನ್ ಎಂಬ ಹೆಸರಿನ ಫ್ಯಾಕ್ಟರಿಯಲ್ಲಿ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಲಾಗಿದೆ. ಅಮರಗೋಳದಿಂದ ಎರಡು ಮತ್ತು ಹುಬ್ಬಳ್ಳಿಯಿಂದ ಒಂದು ಅಗ್ನಿಶಾಮಕ ವಾಹನಗಳಲ್ಲಿ ತೆರಳಿದ 15ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಿದರು. ಸುಮಾರು ₹ 4 ಲಕ್ಷ ಮೌಲ್ಯದ ಬೇಲ್‌ ಸುಟ್ಟು ಹೋಗಿದ್ದು ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿ ಇನ್ನಷ್ಟು ನಷ್ಟ ಆಗುವುದನ್ನು ತಪ್ಪಿಸಿದರು. 

‘ಕೇವಲ ಹತ್ತು ನಿಮಿಷದಲ್ಲಿ ಸ್ಥಳಕ್ಕೆ ತಲುಪಿದ್ದೇವೆ. ಒಂದೂವರೆ ತಾಸು ಶ್ರಮ ವಹಿಸಿ ಬೆಂಕಿ ನಂದಿಸಲಾಯಿತು. ಹೀಗಾಗಿ ಕೋಟ್ಯಂತರ ಮೌಲ್ಯದ ಬೇಲ್ ಉಳಿಸಲು ಸಾಧ್ಯವಾಯಿತು’ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಡಿ.ದೇವರಾಜ ‘ಪ್ರಜಾವಾಣಿ’ಗೆ ತಿಳಿಸಿದರು. ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ADVERTISEMENT

ಇಸ್ಪೀಟಾಟ: ಒಂಬತ್ತು ಮಂದಿ ಬಂಧನ
ಹುಬ್ಬಳ್ಳಿ:
ಸಾರ್ವಜನಿಕ ಜಾಗದಲ್ಲಿ ಇಸ್ಪೀಟು ಆಡುತ್ತಿದ್ದ ಇಮ್ರಾನ್‌ ಮಕಬುಲ್‌ ಹವಾಲ್ದಾರ ಮತ್ತು ಇತರ ಎಂಟು ಮಂದಿಯನ್ನು ಎಪಿಎಂಸಿ ಮತ್ತು ನವನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇವರಿಂದ ₹ 3250 ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ
ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಮಾರ್ಚ್‌ 13ರಂದು ಒಟ್ಟು 783 ಕೇಸುಗಳನ್ನು ದಾಖಲಿಸಿರುವ ಸಂಚಾರಿ ಪೊಲೀಸರು ಒಟ್ಟು ₹1,32,000 ದಂಡ ವಸೂಲಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

**

140 ವಿದ್ಯುತ್‌ ಕಳ್ಳತನ ಪ್ರಕರಣ
ಹುಬ್ಬಳ್ಳಿ:
ಹೆಸ್ಕಾಂನ ಜಾಗೃತ ದಳದವರು ಫೆಬ್ರುವರಿ ತಿಂಗಳಲ್ಲಿ ಒಟ್ಟು 140 ವಿದ್ಯುತ್ ಕಳ್ಳತನ ಪ್ರಕರಣ ಪತ್ತೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ವಿದ್ಯುತ್‌ ದುರುಪಯೋಗದ 396 ಪ್ರಕರಣಗಳನ್ನು ದಾಖಲಿ­ಸಲಾಗಿದ್ದ ನಿರಂತರ ಜ್ಯೋತಿ ಫೀಡರ್‌ಗಳಿಂದ ವಿದ್ಯುತ್ ಕಳ್ಳತನ ಮಾಡಿರುವ ನಾಲ್ಕು ಪ್ರಕರಣಗಳು ಪತ್ತೆ­ಯಾಗಿವೆ. ಈ ಎಲ್ಲ ಪ್ರಕರಣ­ಗಳಿಂದ ಒಟ್ಟು ₹ 1 ಕೋಟಿ 11 ಲಕ್ಷ ಮೊತ್ತವನ್ನು ದಂಡದ ರೂಪ­ದಲ್ಲಿ ವಸೂಲಿ ಮಾಡ­ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.