ADVERTISEMENT

ಹರಿದ ಸೀಟು, ಸೋರುವ ಬಸ್‌ ಚಾವಣಿ

ಮನೋಜ ಕುಮಾರ್ ಗುದ್ದಿ
Published 22 ಸೆಪ್ಟೆಂಬರ್ 2017, 11:21 IST
Last Updated 22 ಸೆಪ್ಟೆಂಬರ್ 2017, 11:21 IST
ಧಾರವಾಡ–ಹುಬ್ಬಳ್ಳಿ ರೈಲು ನಿಲ್ದಾಣ ಮಧ್ಯೆ ಗುರುವಾರ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನ ಸೀಟಿನ ರಾಡ್‌ ಕಿತ್ತು ಹೋಗಿರುವುದು
ಧಾರವಾಡ–ಹುಬ್ಬಳ್ಳಿ ರೈಲು ನಿಲ್ದಾಣ ಮಧ್ಯೆ ಗುರುವಾರ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನ ಸೀಟಿನ ರಾಡ್‌ ಕಿತ್ತು ಹೋಗಿರುವುದು   

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿಯ ಹೊಸ್ತಿಲಲ್ಲಿರುವ ಹುಬ್ಬಳ್ಳಿ–ಧಾರವಾಡ ಹಾಗೂ ಬೆಳಗಾವಿ ಸೇರಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಆರು ಜಿಲ್ಲೆಗಳಲ್ಲಿ ಇನ್ನೂ 600 ಗುಜರಿ ಬಸ್‌ಗಳನ್ನೇ ಓಡಿಸುತ್ತಿದೆ. ಹೊಸದಾಗಿ 1050 ಬಸ್‌ಗಳು ನಿಗಮಕ್ಕೆ ಸೇರ್ಪಡೆಯಾಗಬೇಕಿವೆ. ಆದರೆ, ಅವು ಇನ್ನೂ ಬಂದಿಲ್ಲ. ಹೀಗಾಗಿ, ಹಳೆಯ ಬಸ್‌ಗಳನ್ನೇ ಓಡಿಸಲಾಗುತ್ತಿದೆ.

ಕೆಲವು ಸಾರಿಗೆ ಇಲಾಖೆಯ ಮಾನದಂಡಗಳನ್ನೂ ಮೀರಿ 14 ವರ್ಷ ಮೀರಿದರೂ ರಸ್ತೆಯ ಮೇಲೆ ಓಡುತ್ತಿವೆ ಎನ್ನುತ್ತಾರೆ ನಿಗಮದ ಅಧಿಕಾರಿಗಳು. ಇತ್ತೀಚೆಗೆ ಅವಳಿ ನಗರದಲ್ಲಿ ಸುರಿದ ಮಳೆಯು ಬಸ್‌ಗಳ ದುಃಸ್ಥಿತಿಯನ್ನೂ ಅನಾವರಣಗೊಳಿಸಿತು ಎನ್ನುತ್ತಾರೆ ಧಾರವಾಡದ ವಿದ್ಯಾಗಿರಿಯ ನಿವಾಸಿ ಅನಂತ ಪಾಟೀಲ.

‘ಕಿಮ್ಸ್‌ ಬಳಿಯ ಸುರಿಯುತ್ತಿದ್ದ ಮಳೆಯಲ್ಲಿಯೇ ಧಾರವಾಡದತ್ತ ಹೊರಟ ಬಸ್‌ ಏರಿದರೆ ಒಳಗೂ ಹೊರಗೂ ಮಳೆಯ ಅಬ್ಬರ! ಎಲ್ಲ ಕಿಟಕಿಯಂಚಿನ ಸೀಟುಗಳ ಮೇಲೆ ನೀರು ಸುರಿಯುತ್ತಿತ್ತು. ಹೇಗೋ ಸಾವರಿಸಿ ಕೊಂಡು ಸೀಟಿನ ತುದಿಗೆ ಕುಳಿತರೆ ಅಲ್ಲಿಯೂ ಮಳೆ ನೀರು ಸುರಿಯುತ್ತಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಹುಬ್ಬಳ್ಳಿಯ ವಿದ್ಯಾನಗರ ನಿವಾಸಿ ಜಯಲಕ್ಷ್ಮಿ ಪಾಟೀಲರ ಅನುಭವ ವಿಭಿನ್ನ. ‘ಧಾರವಾಡದಿಂದ ಹುಬ್ಬಳ್ಳಿಯ ಸ್ಟೇಷನ್‌ನತ್ತ ಹೊರಟ ಕೆಂಪು ಬಸ್ಸನ್ನು ಹತ್ತಿದ ಏನೋ ಕಟ ಕಟ ಶಬ್ದ ಕೇಳಿದಂತಾಯಿತು. ನೋಡಿದರೆ, ಸೀಟಿನ ಹಿಂಬದಿಯ ಕಬ್ಬಿಣದ ರಾಡ್‌ ತುಂಡಾಗಿ ಕೆಳಕ್ಕೆ ವಾಲಿತ್ತು. ಅದರ ಪಾರ್ಶ್ವ ಭಾಗ ಬಸ್‌ನ ಹಿಂಬದಿಗೆ ಬಡಿಯುತ್ತಿದೆ. ರಸ್ತೆಯಲ್ಲಿ ತಗ್ಗು ದಿನ್ನೆಗಳು ಎದುರಾದಾಗ, ಜೋರಾಗಿ ಬ್ರೇಕ್‌ ಹಾಕಿದಾಗ ಈ ಶಬ್ದ ಇನ್ನಷ್ಟು ಕರ್ಕಶ ವಾಯಿತು’ ಎಂದು ಬಸ್‌ನಲ್ಲಿದ್ದ ಜಯಲಕ್ಷ್ಮಿ ತಿಳಿಸಿದರು.

ಇಂಥ ಹತ್ತಾರು ಅನುಭವಗಳು ಪ್ರಯಾಣಿಕರಿಗೆ ಆಗುತ್ತಿವೆ. ಹಳೆಯ ಬಸ್‌ಗಳನ್ನೇ ಓಡಿಸುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ ಎನ್ನುತ್ತಾರೆ ಆರೋಗ್ಯ ತಪಾಸಣೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಬಂದಿದ್ದ ಧಾರವಾಡದ ಸನ್ಮತಿ ರಸ್ತೆ ನಿವಾಸಿ ಗಂಗಾಧರ ಬಡಿಗೇರ.

‘ಜೆ–ನರ್ಮ್‌ ಯೋಜನೆಯಡಿ ಹೊಸ ಬಸ್‌ಗಳನ್ನು ತರಿಸಿಕೊಳ್ಳಲಾಗಿದೆ. ಆದರೆ, ಹುಬ್ಬಳ್ಳಿ–ಧಾರವಾಡ ನಗರಗಳ ಬಡಾವಣೆಗಳಲ್ಲೇ ಅವು ಸಂಚರಿಸುತ್ತಿವೆ. ಅವಳಿ ನಗರದ ಮಧ್ಯೆ ಉತ್ತಮ ಬಸ್‌ಗಳನ್ನು ನಿಯೋಜಿಸಲು ಸಾರಿಗೆ ಸಂಸ್ಥೆಗೆ ಏನು ತೊಂದರೆ’ ಎಂದು ಗಂಗಾಧರ ಅವರ ಪತ್ನಿ ಭುವನಾ ಪ್ರಶ್ನಿಸಿದರು.

‘ಕ್ರಮೇಣ ಸೇವೆಯಿಂದ ವಾಪಸ್‌’
‘ಆರು ಜಿಲ್ಲೆಗಳ ಎಂಟು ವಿಭಾಗಗಳಲ್ಲಿ ಒಟ್ಟು 4,800 ಬಸ್‌ಗಳು ಓಡಾಡುತ್ತಿದ್ದು, ನಿತ್ಯ 22 ಲಕ್ಷ ಪ್ರಯಾಣಿಕರು ಸೇವೆ ಪಡೆಯುತ್ತಿದ್ದಾರೆ. ಸದ್ಯಕ್ಕೆ 600 ಬಸ್‌ಗಳು ನಿಗಮದ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿವೆ. ಹೊಸದಾಗಿ 1050 ಬಸ್‌ಗಳು ಸೇರ್ಪಡೆ ಆಗಬೇಕಿದ್ದು, ಅವು ಬರುತ್ತಿದ್ದಂತೆ ಹಂತಹಂತವಾಗಿ ಹಳೆಯ ಬಸ್‌ಗಳನ್ನು ಗುಜರಿಗೆ ಕಳಿಸುತ್ತೇವೆ’ ಎಂದು ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ಸಾರಿಗೆ ಸೇವೆಗೆ 261 ಬಸ್‌
ಪ್ರಸ್ತುತ ಅವಳಿ ನಗರ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಸಾರಿಗೆ ಸೇವೆ ಸಲ್ಲಿಸಲು ಸಂಸ್ಥೆಯು 261 ಬಸ್‌ಗಳನ್ನು ಒದಗಿಸಿದೆ. ಕೆಲ ವರ್ಷಗಳ ಹಿಂದೆ ಗುಜರಿಗೆ ಹೋಗುವ ಸ್ಥಿತಿಯಲ್ಲಿದ್ದ ಬಿಎಂಟಿಸಿ ಬಸ್‌ಗಳನ್ನು ಅವಳಿ ನಗರದಲ್ಲಿ ಸೇವೆಗೆ ನಿಯೋಜಿಸಲಾಗಿತ್ತು.

ಪದೇ ಪದೇ ಕೆಟ್ಟು ನಿಲ್ಲಿತ್ತಿದ್ದ ಬಸ್‌ಗಳಲ್ಲಿ ಪ್ರಯಾಣಿಸಿ ರೋಸಿ ಹೋದ ಪ್ರಯಾಣಿಕರು ಸುಸ್ಥಿತಿಯಲ್ಲಿರುವ ಬಸ್‌ಗಳ ನಿಯೋಜನೆಗೆ ಒತ್ತಾಯಿಸಿದ್ದರು. ಆ ಸಂದರ್ಭದಲ್ಲಿ ನಿಗಮವು ಟಾಟಾ ಬಸ್‌ಗಳನ್ನು ಖರೀದಿಸಿ ನಿಯೋಜಿಸಿತ್ತು.

ಇದೀಗ ಅವೂ ಹಳೆಯದಾಗಿದ್ದರಿಂದ ಈಚೆಗೆ ಜೆ ನರ್ಮ್‌ ಅನುದಾನದಡಿ ತರಿಸಲಾದ ಹಸಿರು ಮಿನಿ ಬಸ್‌ಗಳನ್ನು ಸೇವೆಗೆ ಒದಗಿಸಲಾಗಿದೆ. ಆದರೂ, ಶೇ 60ರಷ್ಟು ಹಳೆಯ ಬಸ್‌ಗಳೇ ಓಡಾಡುತ್ತಿವೆ. ಒಮ್ಮೊಮ್ಮೆ ಕೆಟ್ಟು ರಸ್ತೆಯಲ್ಲಿಯೇ ನಿಂತು ಬಿಡುತ್ತವೆ ಎನ್ನುತ್ತಾರೆ ಅವಳಿ ನಗರದ ಮಧ್ಯೆ ಬಸ್‌ ಓಡಿಸುವ ಚಾಲಕರೊಬ್ಬರು.

* * 

ಬಸ್‌ಗಳ ಬಗ್ಗೆ ತಕರಾರು ಇದ್ದರೆ ಪ್ರಯಾಣಿಕರು ಕೂಡಲೇ ಬಸ್‌ ನೋಂದಣಿ ಸಂಖ್ಯೆ ಬರೆದು 77609 91687 ವಾಟ್ಸ್ ಆ್ಯಪ್‌ ಸಂಖ್ಯೆಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ
ಸದಾನಂದ ಡಂಗನವರ
ಅಧ್ಯಕ್ಷರು, ವಾಕರಸಾಸಂ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.