ADVERTISEMENT

ಹೆದ್ದಾರಿ ದರೋಡೆಕೋರರ ಬಂಧನ

ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಲಾರಿಗಳೇ ಗುರಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:26 IST
Last Updated 20 ಮಾರ್ಚ್ 2017, 6:26 IST

ಹುಬ್ಬಳ್ಳಿ: ಹೊರ ರಾಜ್ಯಗಳ ಲಾರಿಗಳನ್ನು ಗುರಿಯಾಗಿಸಿಕೊಂಡು ಪೊಲೀಸರ ಸೋಗಿನಲ್ಲಿ ದರೋಡೆ ನಡೆಸುತ್ತಿದ್ದ ಮೂವರನ್ನು ಕೇಶ್ವಾಪುರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸೆಟ್ಲ್‌ಮೆಂಟ್‌ನ ನಿವಾಸಿಗಳಾದ ಆನಂದ ಮುಳಗುಂದ (28), ಮೌನೇಶ ಅಂಗಡಿ (26) ಹಾಗೂ ಕಾರು ಚಾಲಕ ಗದಗ ರಸ್ತೆ ಶಾಲಿನಿ ಪಾರ್ಕ್‌ ನಿವಾಸಿ ಅಂಥೋನಿ ರಾಜಕುಮಾರ್‌ (37) ಬಂಧಿತರು. ಕೃತ್ಯಕ್ಕೆ ಬಳಸಿದ ಹುಂಡೈ ಕಾರು ಅಂಥೋನಿ ತಾಯಿಯ ಹೆಸರಿನಲ್ಲಿದೆ.

ಕಳೆದ 11ರಂದು ಗುಂತಕಲ್‌ನಿಂದ ಅಮರಗೋಳ ಎಪಿಎಂಸಿಗೆ ಮೆಣಸಿನಕಾಯಿ ಲೋಡನ್ನು ತಂದು ಮಾರಾಟ ಮಾಡಿ ವಾಪಸ್‌ ಹೋಗುವ ಸಂದರ್ಭದಲ್ಲಿ ಗದಗ ರಸ್ತೆಯಲ್ಲಿ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡು ಲಾರಿಯಲ್ಲಿದ್ದವರಿಂದ ₹ 15 ಸಾವಿರ ನಗದು ಕಿತ್ತುಕೊಂಡಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು.

ದೂರುದಾರರು ನೀಡಿದ ಮಾಹಿತಿ ಅನ್ವಯ ದುಷ್ಕರ್ಮಿಗಳು ಬಳಸಿದ ಕಾರಿನ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚಿದ ಪೊಲೀಸರು ಶನಿವಾರ ಕಾರಿನಲ್ಲಿ ತೆರಳುತ್ತಿದ್ದ ಆರೋಪಿಗಳನ್ನು ಬಂಧಿಸಿದರು.

ಹೊರರಾಜ್ಯಗಳ ಲಾರಿಗಳು: ಹೆದ್ದಾರಿಯಲ್ಲಿ ಹುಬ್ಬಳ್ಳಿಯಿಂದ ಬಳ್ಳಾರಿ, ಮುರುಡೇಶ್ವರದವರೆಗೆ ಹೋಗುತ್ತಿದ್ದ ದುಷ್ಕರ್ಮಿಗಳು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಚಾಲಕರನ್ನು ಗುರಿಯಾಗಿಸಿ ದರೋಡೆ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಕೇಶ್ವಾಪುರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಶಾಮರಾವ್‌ ಸಜ್ಜನ ‘ಪ್ರಜಾವಾಣಿ’ಗೆ ತಿಳಿಸಿದರು.

ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಬಹುತೇಕ ಹೊರರಾಜ್ಯಗಳ ಲಾರಿಗಳನ್ನೇ ಇವರು ಪೊಲೀಸರೆಂದು ಹೇಳಿಕೊಂಡು ನಿಲ್ಲಿಸಿ ದರೋಡೆ ಮಾಡುತ್ತಿದ್ದರು. ಕರ್ನಾಟಕದವರಾದರೆ ಪೊಲೀಸರಿಗೆ ದೂರು ನೀಡಬಹುದು. ಹೊರರಾಜ್ಯದವರು ನೀಡಲಿಕ್ಕಿಲ್ಲ ಎಂಬ ನಂಬಿಕೆಯೇ ಆರೋಪಿಗಳು ಹೊರಗಿನ ಲಾರಿಗಳನ್ನು ದರೋಡೆ ಮಾಡಲು ಕಾರಣವಾಗಿತ್ತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.