ADVERTISEMENT

ಹೋರಾಟ, ಜನರ ಒಡನಾಟದಿಂದ ಶಾಸಕನಾದೆ

ಮೊದಲ ಶಾಸಕನಾದ ನೆನಪುಗಳ ಬುತ್ತಿ ಬಿಚ್ಚಿಟ್ಟ ನವಲಗುಂದ ಶಾಸಕ ಎನ್‌.ಎಚ್. ಕೋನರಡ್ಡಿ

ಪ್ರಮೋದ ಜಿ.ಕೆ
Published 23 ಮಾರ್ಚ್ 2018, 10:30 IST
Last Updated 23 ಮಾರ್ಚ್ 2018, 10:30 IST
ಎನ್‌.ಎಚ್‌. ಕೋನರಡ್ಡಿ
ಎನ್‌.ಎಚ್‌. ಕೋನರಡ್ಡಿ   

ಹುಬ್ಬಳ್ಳಿ: ‘ವಿದ್ಯಾರ್ಥಿಯಾಗಿದ್ದಾಗಿಂದಲೇ ಬೆಳೆಸಿಕೊಂಡಿದ್ದ ಹೋರಾಟ ಮನೋಭಾವ ಹಾಗೂ ನಂತರ ದಿನಗಳಲ್ಲಿ ಜನರೊಂದಿಗೆ ಹೊಂದಿದ್ದ ನಿರಂತರ ಒಡನಾಟದಿಂದ ಶಾಸಕನಾಗಿ ಆಯ್ಕೆಯಾದೆ. ಮೊದಲ ಎರಡು ಚುನಾವಣೆಗಳಲ್ಲಿ ಎದುರಾದ ಸೋಲು ನನ್ನ ಬದುಕಿನ ದಿಕ್ಕನ್ನೇ ಬದಲಿಸಿದವು...’

ನವಲಗುಂದ ಕ್ಷೇತ್ರದ ಶಾಸಕ ಎನ್‌.ಎಚ್‌. ಕೋನರಡ್ಡಿ ತಾವು ಮೊದಲ ಬಾರಿಗೆ ಶಾಸಕನಾದ ನೆನಪುಗಳನ್ನು ‘‍ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಕಾಲೇಜು ಚುನಾವಣೆ ಬಗ್ಗೆ ಮೊದಲಿನಿಂದಲೂ ಆಸಕ್ತಿಯಿತ್ತು. ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಚುನಾವಣೆಗೆ ನಿಂತ ಸ್ನೇಹಿತರಿಗೆ ಬೆಂಬಲ ನೀಡಿ ಗೆಲ್ಲಿಸಿದೆ. ಈ ಮೂಲಕ ನಾನೂ ನಾಯಕನಾಗಿ ಗುರುತಿಸಿಕೊಂಡೆ’ ಎಂದು ನೆನಪಿಸಿಕೊಂಡರು.

ADVERTISEMENT

‘ರೈತರಿಗೆ ಬರಬೇಕಿದ್ದ ₹ 36 ಸಾವಿರ ಕೋಟಿ ಬೆಳೆ ವಿಮೆಗೆ ಆಗ್ರಹಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದೆವು. ಆಗ 180ಕ್ಕೂ ಹೆಚ್ಚು ರೈತರನ್ನು ಬಂಧಿಸಿ ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಪೊಲೀಸರು ಲಾಠಿ ಚಾರ್ಜ್‌ ಕೂಡ ಮಾಡಿದ್ದು, ಆಗ ದೊಡ್ಡ ಸುದ್ದಿಯಾಗಿತ್ತು. ಇದು ನನ್ನ ರಾಜಕೀಯ ಭವಿಷ್ಯಕ್ಕೆ ಊರುಗೋಲಾಯಿತು’ ಎಂದು ಅವರು ಹೇಳಿದರು.

‘ನಮ್ಮದು ಕೃಷಿ ಹಿನ್ನಲೆಯ ಕುಟುಂಬ. ರಾಜಕಾರಣದ ಯಾವುದೇ ನಂಟಿಲ್ಲ. ಕೃಷಿಕ ಕೂಡ ಏಕೆ ಶಾಸಕನಾಗಬಾರದು ಎನ್ನುವ ಛಲದಿಂದ ರಾಜಕಾರಣಕ್ಕೆ ಬಂದೆ. ನವಲಗುಂದ ಕ್ಷೇತ್ರದಲ್ಲಿ ನಾನು ಗೆಲ್ಲಬೇಕು ಎನ್ನುವುದಕ್ಕಿಂತ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸುವುದು ನನ್ನ ಗುರಿಯಾಗಿತ್ತು’ ಎಂದರು.

‘ನವಲಗುಂದ ಮತ್ತು ನರಗುಂದ ಬಂಡಾಯಕ್ಕೆ ತೆರೆಮರೆಯಲ್ಲಿದ್ದು ರೈತರಿಗೆ ಬೆಂಬಲ ಕೊಟ್ಟಿದ್ದೆ. ನಂಜುಂಡಸ್ವಾಮಿ, ಪುಟ್ಟಣ್ಣಯ್ಯ.. ಹೀಗೆ ರಾಜ್ಯ ನಾಯಕರ ಜೊತೆ ಗುರುತಿಸಿಕೊಂಡೆ. ಧಾರವಾಡ ಅಖಂಡ ಜಿಲ್ಲೆಗೆ ಪಕ್ಷದ ಅಧ್ಯಕ್ಷನಾಗಿದ್ದೆ. ರಾಜ್ಯ ಯುವ ಜನತಾದಳದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಮತ್ತು ಎಚ್‌.ಡಿ. ದೇವೇಗೌಡ, ಕುಮಾರಸ್ವಾಮಿ, ಬಸವರಾಜ ಹೊರಟ್ಟಿ ಅವರ ಜೊತೆಗಿನ ಒಡನಾಟ ಶಾಸಕನಾಗಲು ನೆರವಾಯಿತು’ ಎಂದು ಕೋನರಡ್ಡಿ ನೆನಪುಗಳನ್ನು ಬಿಚ್ಚಿಟ್ಟರು.

‘ಮಹದಾಯಿ, ಕಳಸಾ ಬಂಡೂರಿ ಸಮಸ್ಯೆ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿ ನಾನು ಕೇಳಿದ ಮೊದಲ ಪ್ರಶ್ನೆಯಾಗಿತ್ತು. ಕಲಾಪದಲ್ಲಿ ಹಿರಿಯರಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಮಹದಾಯಿ ಬಗೆಗಿನ ನನ್ನ ಹೋರಾಟ ಇಂದಿಗೂ ಮುಂದುವರಿಸಿದ್ದೇನೆ’ ಎಂದರು.

‘ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ ಜನ ಯಾವಾಗಲೂ ಪ್ರೀತಿಯಿಂದ ಕಂಡಿದ್ದಾರೆ. ಶಾಸಕನಾದ ಮೇಲೂ ಬೆಳಿಗ್ಗೆ ಎರಡು ಗಂಟೆ ಕ್ಷೇತ್ರದಲ್ಲಿ ಮೋಟಾರ್‌ ಬೈಕ್‌ ಮೇಲೆ ಸುತ್ತಾಡಿ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಜನರಿಗೆ ಸುಲಭವಾಗಿ ಸಿಗುತ್ತೇನೆ. ಅವರ ಸಮಸ್ಯೆಗಳನ್ನು ಆಲಿಸಿ ನನ್ನ ಮಿತಿಯಲ್ಲಿ ಪರಿಹಾರ ಒದಗಿಸುತ್ತೇನೆ. ಇದರಿಂದ ಕ್ಷೇತ್ರದ ಜನರಿಗೆ ಹತ್ತಿರವಾಗಿದ್ದೇನೆ’ ಎಂದು ಅವರು ಹೇಳಿದರು.

ರಾಜಕಾರಣಿಗಳಾಗುವುದೇ ಸವಾಲು: ‘ಮೊದಲು ರಾಜಕಾರಣ ಮಾಡುವುದು ಸುಲಭವಿತ್ತು. ಜನರು ಸಮಸ್ಯೆಗಳನ್ನು ಹೇಳಿಕೊಂಡು ಬಂದರೆ ಪರಿಹರಿಸುತ್ತೇನೆ ಎಂದು ಹೇಳಿದರೆ ಸುಮ್ಮನಾಗುತ್ತಿದ್ದರು. ಆದರೆ, ಈಗ ಮೊಬೈಲ್‌ ಮತ್ತು ಇಂಟರ್‌ನೆಟ್ ನಂತಹ ಸಾಮಾಜಿಕ ಜಾಲತಾಣಗಳು ಇರುವುದರಿಂದ ಕೆಲಸ ಆಗುವ ತನಕ ಬಿಡುವುದೇ ಇಲ್ಲ. ಆದ್ದರಿಂದ, ರಾಜಕಾರಣಿ ಆಗುವುದು ಸವಾಲು ಎನಿಸಿದೆ’ ಎಂದು ಅವರು ನುಡಿದರು.

‘ಈ ಬಾರಿಯೂ ನವಲಗುಂದ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದೇನೆ. ಮಾಡಿದ ಕೆಲಸಕ್ಕೆ ಜನ ತಕ್ಕ ಕೂಲಿ ಕೊಡುತ್ತಾರೆ’ ಎಂಬ ವಿಶ್ವಾಸವಿದೆ ಎಂದರು.
**
ತಿರುವು ನೀಡಿದ ಆ ಒಂದು ಮಾತು

ಎರಡು ಚುನಾವಣೆಯಲ್ಲಿ ಸೋತ ಮೇಲೆ ಚುನಾವಣೆಯ ಗೊಡವೆಯೇ ಬೇಡ ಎಂದು ಹೊಲಕ್ಕೆ ಹೋಗಲಾರಂಭಿಸಿದೆ.

ದಾರಿಯಲ್ಲಿ ಸಿಕ್ಕ ಬಸವಣ್ಣಯ್ಯ ಮುಳುಗುಂದಮಠ ಎಂಬುವರು, ನಿನ್ನನ್ನು ನಂಬಿ ಮೊದಲ ಬಾರಿ 15 ಸಾವಿರ, ಎರಡನೇ ಬಾರಿ 30 ಸಾವಿರ ಮತಗಳನ್ನು ಜನರು ನೀಡಿದ್ದಾರೆ. ಅವರಿಗಾಗಿ ಮತ್ತೆ ಸ್ಪರ್ಧಿಸು  ಎಂದರು. ಅವರ ಮಾತಿನಿಂದ ಪ್ರೇರಣೆ ಪಡೆದು ಮತ್ತೆ ಸ್ಪರ್ಧಿಸಿ ಶಾಸಕನಾದೆ ಎಂದು ಕೋನರಡ್ಡಿ ನೆನಪಿಸಿಕೊಂಡರು.
**
‘ಎಂಜಿನಿಯರ್‌ ಆಗಬೇಕಿದ್ದವನು, ಶಾಸಕನಾದೆ’

ಮಗ ಎಂಜಿನಿಯರ್‌ ಆಗಬೇಕೆಂಬುದು ಪೋಷಕರ ಕನಸಾಗಿತ್ತು. ಅದಕ್ಕಾಗಿ ಹುಲಕೋಟಿಯಲ್ಲಿ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಕೊಡಿಸಿದ್ದರು. ಕಾಲೇಜು ಸೇರಿದ ಕೆಲವೇ ದಿನಗಳಲ್ಲಿ ಎಂಜಿನಿಯರಿಂಗ್‌ ಕೈ ಬಿಟ್ಟು ಬಿ.ಕಾಂ. ಸೇರಿದೆ. ಕಾಲೇಜು ಚುನಾವಣೆಯಿಂದ ನಾಯಕತ್ವ ಬೆಳೆಸಿಕೊಂಡೆ. ಮುಂದೆ ನವಲಗುಂದದಿಂದ ಗೆದ್ದು ಶಾಸಕನಾದೆ.
**
2004: ನವಲಗುಂದ ಕ್ಷೇತ್ರದಿದ ಜೆಡಿಯು ಪಕ್ಷದಿಂದ ಸ್ಪರ್ಧೆ –ಸೋಲು
2008: ನವಲಗುಂದ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧೆ –ಸೋಲು
1999: ಜೆಡಿಯುನಿಂದ ಸ್ಪರ್ಧೆ– ಸೋಲು
2013: ನವಲಗುಂದ ಕ್ಷೇತ್ರದಿಂದ ಜೆಡಿಎಸ್‌ ಸ್ಪರ್ಧೆ –ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.