ADVERTISEMENT

‘ಉತ್ತರ ಕರ್ನಾಟಕ ನಿರ್ಲಕ್ಷಿಸಿದರೆ ಬೀದಿಗಿಳಿದು ಪ್ರತಿಭಟನೆ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 5:26 IST
Last Updated 20 ಸೆಪ್ಟೆಂಬರ್ 2014, 5:26 IST

ಧಾರವಾಡ: ಉತ್ತರ ಕರ್ನಾಟಕವನ್ನು ಸರ್ಕಾರ ನಿರ್ಲಕ್ಷಿಸಿದರೆ ಬೀದಿಗಿಳಿದು ಹೋರಾಟ ಮಾಡಲು ವಿವಿಧ ಸಂಘಟ­ನೆಗಳು ಸಜ್ಜಾಗಿ ನಿಂತಿವೆ. ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪುರ ಟ್ರಸ್ಟ್‌, ಜಿಲ್ಲಾ ಪಾಲಕರ ಸಂಘ, ಕನ್ಸೂಮರ್‌ ಪ್ರೊಟೆಕ್ಷನ್‌ ಅಂಡ್‌ ರಿಸರ್ಚ್ ಫೋರಮ್‌, ಫೋರಮ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿ­ಯರ್ಸ್‌ ಸಂಘದ ಸದಸ್ಯರು, ಇದುವರೆಗೆ ಆಡಳಿತ ನಡೆಸಿದ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.

ಪುರ ಟ್ರಸ್ಟ್‌ ಅಧ್ಯಕ್ಷ ವಿಜಯಾನಂದ ದೊಡವಾಡ ಮಾತನಾಡಿ, ‘ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನ್ಯಾನೊ ಕಾರು ಘಟಕ ಉತ್ತರ ಕರ್ನಾಟಕದ ಕೈತಪ್ಪಿ ಹೋಗಿತ್ತು. ಆಗ ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರವೇ ಹೀರೊ ಮೋಟೋಕಾರ್ಪ್‌ ಕಂಪೆನಿಯನ್ನು ಉತ್ತರ ಕರ್ನಾಟಕದಿಂದ ಹೊರ ದಬ್ಬಿದೆ. ಹೀಗೇ ಎಲ್ಲಾ ರಾಜಕಾರಣಿ­ಗಳು ಅವರ ಮೇಲೆ ಇವರು ಇವರ ಮೇಲೆ ಅವರು ಆರೋಪ ಮಾಡು­ತ್ತಲೇ ಸಾಗಿದ್ದಾರೆ ಹೊರತು ಉತ್ತರ ಕರ್ನಾಟಕವನ್ನು ಅಭಿವೃದ್ಧಿ ದೃಷ್ಟಿ­ಯಿಂದ ಹಿಂದೆ ತಳ್ಳಿದ್ದಾರೆ’ ಎಂದರು.

‘ಕೈಗಾರಿಕಾ ಖಾತೆಯನ್ನು ಹೊಂದಿರುವ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀರೊ ಕಂಪೆನಿ ಧಾರವಾಡದಲ್ಲಿ ಸ್ಥಾಪನೆಯಾ­ಗು­ವಂತೆ ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಅವರು ಕೇವಲ ತಮ್ಮ ಸ್ವ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರು­ವು­ದನ್ನು ನೋಡಿದರೆ ಎಲ್ಲೋ ಒಂದು ಕಡೆ ನಮಗೆ ಶಾಸಕ ಉಮೇಶ ಕತ್ತಿ ನೆನಪಾಗುತ್ತಾರೆ. ಬೆಂಗಳೂರು–ಚೆನ್ನೈಗೆ ಎಕ್ಸ್‌ಪ್ರೆಸ್‌ ರೈಲು ವ್ಯವಸ್ಥೆ ಮಾಡಿರುವ ರಾಜ್ಯ ಸರ್ಕಾರ, ಹುಬ್ಬಳ್ಳಿ–ಧಾರವಾಡದಿಂದ ಬೆಂಗ­ಳೂರಿಗೆ ಇದುವರೆಗೂ ಎಕ್ಸ್‌ಪ್ರೆಸ್‌ ರೈಲು ವ್ಯವಸ್ಥೆ ಮಾಡಿಲ್ಲ.

ಈ ಕುರಿತ ಸರ್ಕಾರದ ಮೇಲೆ ಒತ್ತಡ ಹೇರಬೇ­ಕಾದ ನಮ್ಮ ಉತ್ತರ ಕರ್ನಾಟದ ಜನಪ್ರತಿನಿಧಿಗಳು ಕೈ ಕಟ್ಟಿ ಕುಳಿತಿದ್ದಾರೆ. ಅದೇ ಕಾವೇರಿ ನದಿ ವಿವಾದ ಬಂದಾಗ ಇಡೀ ರಾಜ್ಯವನ್ನೇ ರಾಜಕಾರಣಿಗಳು ಒಕ್ಕಲೆಬ್ಬಿಸುತ್ತಾರೆ. ಆದರೆ, ಇದು­ವರೆಗೂ ಕಳಸಾ ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದಂತೆ ಯಾವ ಮುಖ್ಯಮಂತ್ರಿಯೂ ಚಕಾರವೆತ್ತಿಲ್ಲ’ ಎಂದು ಅವರು ಆರೋಪಿಸಿದರು.

‘ವಿದ್ಯಾಕಾಶಿ ಎಂದು ಹೇಳುವ ಧಾರವಾಡ ಈಗ ಕಸದ ಕಾಶಿಯಾಗಿ ಮಾರ್ಪಾಡಾಗುತ್ತಿದೆ. ಕೇವಲ ಆರ್‌.ವಿ.ದೇಶಪಾಂಡೆ ಹಾಗೂ ಬೆಲ್ಲದ ಅವರಂಥ ಕಂಪೆನಿಗಳು ಮಾತ್ರ ತಲೆ ಎತ್ತುತ್ತಿವೆ. ಇದನ್ನು ಬಿಟ್ಟರೆ ಅಭಿವೃದ್ಧಿ ಕೆಲಸ ಮಾತ್ರ ಹಿಂದೆ ಉಳಿದಿದೆ. ಎಲ್ಲಾ ಶಾಸಕರೂ ತಮ್ಮ ಸಂಬಳವನ್ನು ಮಾತ್ರ ಹೆಚ್ಚಳ ಮಾಡಿಕೊಂಡು ತಾವೇ ಅಭಿವೃದ್ಧಿ ಹೊಂದುತ್ತಿದ್ದಾರೆ. ಉತ್ತರ ಕರ್ನಾಟಕವನ್ನು ಅಭಿವೃದ್ಧಿ ದೃಷ್ಟಿ­ಯಿಂದ ನಿರ್ಲಕ್ಷಿಸಿದರೆ, ಸದ್ಯ ಎಚ್ಚೆತ್ತು­ಕೊಂಡಿರುವ ಜನ ಬೀದಿಗಳಿದು ಪ್ರತಿಭಟನೆ ಮಾಡಲು ಮುಂದಾಗುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.