ADVERTISEMENT

‘ಕನ್ನಡ ಅನ್ನ ಕೊಡುವ ಭಾಷೆ ಎಂದು ಸಾಬೀತು’

​ಪ್ರಜಾವಾಣಿ ವಾರ್ತೆ
Published 28 ಜೂನ್ 2014, 6:15 IST
Last Updated 28 ಜೂನ್ 2014, 6:15 IST

ಧಾರವಾಡ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ­ಯಲ್ಲಿ ಕನ್ನಡ ಸಾಹಿತ್ಯವನ್ನು ವಿಷಯ­ವನ್ನಾಗಿ ತೆಗೆದುಕೊಂಡು, ಕನ್ನಡದಲ್ಲಿ ಪರೀಕ್ಷೆ­ಯಲ್ಲಿ ಬರೆದು ಉತ್ತಮ ಶ್ರೇಯಾಂಕದೊಂದಿಗೆ ಆಯ್ಕೆಯಾಗುವ ಮೂಲಕ ಕನ್ನಡ ಅನ್ನ ಕೊಡುವ ಭಾಷೆ ಎಂದು ಅಭ್ಯರ್ಥಿ­ಗಳು ಸಾಬೀತುಪಡಿಸಿದ್ದಾರೆ ಎಂದು ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.

ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇತರ ರಾಜ್ಯಗಳಿಗೆ ಹೋಲಿಸಿ­ದಲ್ಲಿ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ಪಾಸಾಗುವ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ. ಈ ಬಾರಿ 40 ಮಂದಿ ಆಯ್ಕೆಯಾಗಿದ್ದಾರೆ. ಅವರ ಸಂಖ್ಯೆ ಇನ್ನಷ್ಟು ಹೆಚ್ಚಬೇಕೆಂದರೆ ಪ್ರತಿ­ಯೊಬ್ಬರಲ್ಲೂ ಅರಿವು ಹೆಚ್ಚಾಗಬೇಕು’ ಎಂದರು.

ಐಎಎಸ್‌ ಪರೀಕ್ಷೆಗೆ ಪೂರ್ವಭಾವಿ ತಯಾರಿ ನಡೆಸಲು ಮೂರು ನಾಲ್ಕು ವರ್ಷಗಳ ತ್ಯಾಗಕ್ಕೆ ನಮ್ಮವರು ಸಿದ್ಧರಿಲ್ಲ. ಪದವಿ ಮುಗಿಸಿದ ಉತ್ತರ ಭಾರತೀ­ಯರು ಇದಕ್ಕಾಗಿಯೇ  ಹಲವು ವರ್ಷ­ಗಳನ್ನು ವಿನಿಯೋಗಿಸುತ್ತಾರೆ. ನಮ್ಮಲ್ಲೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳ ಕುರಿತು ಜಾಗೃತಿ ಮೂಡಬೇಕು. ಈ ನಿಟ್ಟಿನಲ್ಲಿ ನಾವು ಎಷ್ಟು ಜನಕ್ಕೆ ಸಾಧ್ಯವೋ ಅವರೆಲ್ಲರಿಗೂ ಪರೀಕ್ಷೆಯ ಪೂರ್ವ ತಯಾರಿ, ಪರೀಕ್ಷೆಗೆ ಓದುವ ಹಾಗೂ ಬರೆಯುವ ರೀತಿ ಕುರಿತು ಅರಿವು ಮೂಡಿಸಬೇ­ಕೆಂದಿದ್ದೇವೆ’ ಎಂದು ಐಎಎಸ್‌ನಲ್ಲಿ 25ನೇ ರ‍್ಯಾಂಕ್ ಪಡೆದ ಗುರುದತ್ತ ಹೆಗಡೆ ತಿಳಿಸಿದರು.

‘ನಾವು ಮುಂದಿನ ಎರಡು ತಿಂಗಳ ಕಾಲ ಲಭ್ಯವಿರುತ್ತೇವೆ. ಅಷ್ಟರೊಳಗೆ ನಮ್ಮನ್ನು ಸಾಧ್ಯವಾದಷ್ಟು ಬಳಸಿಕೊಳ್ಳಿ. ಪರೀಕ್ಷೆಯ ತಯಾರಿ ಕುರಿತು ಭಾನುವಾರ (ಇದೇ 29) ಕಾರ್ಯಾಗಾರ ನಡೆಸುತ್ತಿದ್ದೇವೆ. ಅದೇ ದಿನ ಪರೀಕ್ಷೆಯ ತಯಾರಿ ಕುರಿತು ಜಾಲತಾಣ ಪುಟವನ್ನು ಅನಾವರಣ­ಗೊಳಿಸುತ್ತಿದ್ದೇವೆ. ಲೋಕಸೇವಾ ಆಯೋಗದ ಪರೀಕ್ಷೆಯ ತಯಾರಿ ಕುರಿತು ಕನ್ನಡಗಿರನ್ನು ಸಜ್ಜುಗೊಳಿಸಲು ಅದು ನಾಂದಿಯಾಗಲಿದೆ’ ಎಂದರು.

‘ಸುಲಭವಾಗಿ ಕೆಲಸ ದಕ್ಕುವ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕೋರ್ಸ್‌ಗಳ ಕಾಲೇಜುಗಳು ನಮ್ಮಲ್ಲಿ ಹೆಚ್ಚಿವೆ. ಉತ್ತರ ಭಾರತದಲ್ಲಿ ತಾಂತ್ರಿಕ ಶಿಕ್ಷಣದ ಕಾಲೇಜುಗಳು ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಅವರಲ್ಲಿ ಅವರ ಗುರಿ ನಾಗರಿಕ ಸೇವೆಯ ಮೇಲೆಯೇ ಇರುತ್ತದೆ. ಹೀಗಾಗಿ ನಮ್ಮಲ್ಲಿ ಉತ್ತರ ಭಾರತದ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ಸಂಖ್ಯೆ ಹೆಚ್ಚಿದೆ’ ಎಂದು ಐಎಎಸ್‌ನಲ್ಲಿ 104ನೇ ರ‍್ಯಾಂಕ್ ಪಡೆದ ಲಕ್ಷ್ಮಣ ನಿಂಬರಗಿ ಅಭಿಪ್ರಾಯಪಟ್ಟರು.

‘ನಾಗರಿಕ ಸೇವೆ ಹಾಗೂ ಅದಕ್ಕೆ ಪರೀಕ್ಷೆ ನಡೆಸುವ ಲೋಕಸೇವಾ ಆಯೋಗದ ಪರೀಕ್ಷೆಗಳ ಕುರಿತು ಕನ್ನಡಿಗರಲ್ಲಿ ಅರಿವು ಹೆಚ್ಚಾಗಬೇಕು. ಅದ­ರಲ್ಲೂ ಇಂಥ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆದು ಯಶಸ್ಸು ಗಳಿಸಬಹುದೆಂಬುದಕ್ಕೆ ನಾವೇ ಸಾಕ್ಷಿ. ನಾಗರಿಕ ಸೇವೆಗೆ ಹೆಚ್ಚು ಜನ ಕನ್ನಡಿಗರು ನಿಯೋಜನೆಗೊಂಡರೆ ಅದು ಕರ್ನಾಟಕಕ್ಕೇ ಲಾಭ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪ್ರೋತ್ಸಾಹ ಅತ್ಯಗತ್ಯ’ ಎಂದರು.

‘ಕರ್ನಾಟಕದಲ್ಲಿ ಕೆಲವೊಂದು ನಕಲಿ ತರಬೇತಿ ಕೇಂದ್ರ­ಗಳಿವೆ. ಹಣ ಗಳಿಕೆಯೇ ಅವುಗಳ ಉದ್ದೇಶ. ನಾಗರಿಕ ಸೇವೆಯನ್ನು ಗಂಭೀರವಾಗಿ ಪರಿ­ಗಣಿಸಿದ ಅಭ್ಯರ್ಥಿಗಳು ಇಂಥವರಿಂದ ಮೋಸ ಹೋಗುತ್ತದ್ದಾರೆ. ಹೀಗಾಗಿ ಕಲಿಕಾ ಕೇಂದ್ರ­ಗಳು, ಪರೀಕ್ಷೆ ತೆಗೆದುಕೊಳ್ಳುವ ಮಾರ್ಗ, ಕಲಿಕಾ ಉಪಾಯಗಳ ಕುರಿತು ಭಾನುವಾರದ ಕಾರ್ಯಾ­ಗಾರದಲ್ಲಿ ತಿಳಿಸಿಕೊಡಲಿದ್ದೇವೆ’ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ. ವೀಣಾ ಶಾಂತೇಶ್ವರ ಹಾಗೂ ಪ್ರೊ. ರಾಜಶೇಖರ ಜಾಡರ ಉಪಸ್ಥಿತರಿದ್ದರು.

ಯಶಸ್ಸಿನ ಮೆಟ್ಟಿಲು ನಾಳೆ
ಡಾ. ಅಣ್ಣಾಜಿರಾವ ಸಿರೂರ ರಂಗ­ಮಂದಿರ ಪ್ರತಿಷ್ಠಾನ ಹಾಗೂ ಕರ್ನಾಟಕ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳ ಸಂಘದ ಜಂಟಿ ಆಶ್ರಯದಲ್ಲಿ ಇದೇ 29ರಂದು ಭಾರತೀಯ ಆಡಳಿತ ಸೇವಾ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿರುವ ವಿದ್ಯಾರ್ಥಿಗ­ಳೊಂದಿಗೆ ಸಂವಾದ ‘ಯಶಸ್ಸಿನ ಮೆಟ್ಟಿಲು’ ಆಯೋಜಿಸಲಾಗಿದೆ. ಗುರುದತ್ತ ಹೆಗಡೆ ಹಾಗೂ ಲಕ್ಷ್ಮಣ ನಿಂಬರಗಿ ಅವರು ಈ ಕಾರ್ಯಾಗಾರವನ್ನು ನಡೆಸಿಕೊಡ­ಲಿದ್ದಾರೆ. ಸ್ಥಳ: ಸೃಜನಾ–ಡಾ.ಅಣ್ಣಾಜಿರಾವ ಸಿರೂರ ರಂಗಮಂದಿರ, ಕರ್ನಾಟಕ ಕಾಲೇಜು ಆವರಣ, ಧಾರವಾಡ. ಸಂಜೆ 4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.