ADVERTISEMENT

ಮಕ್ಕಳ ಕೈಯಲ್ಲಿ ಅರಳಿದ ವಿಜ್ಞಾನ ಲೋಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 11:10 IST
Last Updated 24 ಜನವರಿ 2018, 11:10 IST
ಧಾರವಾಡದ ಆಲೂರು ವೆಂಕಟರಾವ್ ವೃತ್ತದ ಬಳಿ ಇರುವ ಹೆಣ್ಣು ಮಕ್ಕಳ ತರಬೇತಿ ಸಂಸ್ಥೆಯಲ್ಲಿ ಮಂಗಳವಾರದಿಂದ ಆರಂಭವಾದ ವಿಜ್ಞಾನ ವಸ್ತು ಪ್ರದರ್ಶನಲ್ಲಿ ಮಾದರಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಮಕ್ಕಳು
ಧಾರವಾಡದ ಆಲೂರು ವೆಂಕಟರಾವ್ ವೃತ್ತದ ಬಳಿ ಇರುವ ಹೆಣ್ಣು ಮಕ್ಕಳ ತರಬೇತಿ ಸಂಸ್ಥೆಯಲ್ಲಿ ಮಂಗಳವಾರದಿಂದ ಆರಂಭವಾದ ವಿಜ್ಞಾನ ವಸ್ತು ಪ್ರದರ್ಶನಲ್ಲಿ ಮಾದರಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಮಕ್ಕಳು   

ಧಾರವಾಡ: ಸೌರ ವಿದ್ಯುತ್ ಉತ್ಪಾದನೆ, ಕೊಳಚೆ ನೀರು ಶುದ್ಧೀಕರಣ, ಭೂಕಂಪ ನಿರೋಧ ಕಟ್ಟಡ ಹೀಗೆ ಹತ್ತಾರು ಬಗೆಯ ವಿಜ್ಞಾನ ಮಾದರಿಗಳು ಮಕ್ಕಳ ಕೈಯಲ್ಲಿ ಅರಳಿದ್ದವು.

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಜಂಟಿ ಆಶ್ರಯದಲ್ಲಿ ಮಂಗಳವಾರದಿಂದ ಆರಂಭಗೊಂಡ ಇನ್‌ಸ್ಪೈರ್-ಮಿಲಿಯನ್ ಮೈಂಡ್ಸ್‌ ಅಗ್ಯುಮೆಂಟಿಂಗ್ ನ್ಯಾಷನಲ್ ಆಸ್ಪರೇಷನ್ ಆಂಡ್ ನಾಲೆಡ್ಜ್‌ ಅವಾರ್ಡ್‌ (ಎಂಎಎನ್ಎಕೆ) ಯೋಜನೆಯ ಅಡಿಯಲ್ಲಿ ಆಯೋಜಿಸಲಾಗಿದ್ದ 2 ದಿನಗಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳ ವೈಜ್ಞಾನಿಕ ಕಲ್ಪನಾ ಲೋಕ ಅನಾವರಣಗೊಂಡಿತು.

ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿ ಶಾಲಾ ಮಕ್ಕಳಲ್ಲಿ ನಾವಿನ್ಯತೆ ಹಾಗೂ ಸೃಜನಶೀಲ ವೈಚಾರಿಕತೆಯನ್ನು ಬೆಳೆಸುವಲ್ಲಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ಈ ವಸ್ತು ಪ್ರದರ್ಶನದಲ್ಲಿ ಶಾಲಾ ಮಕ್ಕಳು ತಮ್ಮ ವೈಜ್ಞಾನಿಕ ಕಲ್ಪನೆಗೆ ಕಲಾ ಸ್ಪರ್ಶ ನೀಡಿದ್ದರು.

ADVERTISEMENT

ಕೊಪ್ಪಳ, ಗದಗ ಹಾಗೂ ಹಾವೇರಿ ಜಿಲ್ಲೆಗಳ ವಿದ್ಯಾರ್ಥಿಗಳು ಈ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಸುಮಾರು 260ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳು ಇಲ್ಲಿ ಪ್ರದರ್ಶನಗೊಂಡಿವೆ.

ಪ್ರದರ್ಶನ ಉದ್ಘಾಟಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಸಂಶೋಧನಾ ಶಕ್ತಿ ಬೆಳೆಯಲು ಮನೆಯಲ್ಲಿ ಪಾಲಕರು ಹಾಗೂ ಪೋಷಕರು, ಶಾಲೆಗಳಲ್ಲಿ ಅಧ್ಯಾಪಕರು ಪ್ರೋತ್ಸಾಹ ನೀಡಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್‌.ಎಚ್.ನಾಗೂರ, ಕರ್ನಾಟಕ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲಕ್ಷ್ಮಿ ಇನಾಮದಾರ ಹಾಗೂ ಡಯಟ್‌ ಉಪಪ್ರಾಚಾರ್ಯ ಸಾಯಿರಾಬಾನು ಖಾನ್ ಮಾತನಾಡಿದರು. ಡಯಟ್‌ ಪ್ರಾಚಾರ್ಯೆ ಸುಮಂಗಲಾ ಕುಚಿನಾಡ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣಾಧಿಕಾರಿ ಮೋಹನ ಹಂಚಾಟೆ, ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಶ್ರೀಶೈಲ ಕರಿಕಟ್ಟಿ, ಗ್ರಾಮೀಣ ಬಿಇಒ ವಿದ್ಯಾ ನಾಡಗೇರ, ಶಹರ ಬಿಇಒ ಅಕ್ಬರ್‌ಅಲಿ ಖಾಜಿ, ಡಯಟ್ ಹಿರಿಯ ಉಪನ್ಯಾಸಕರಾದ ಎಸ್.ಬಿ. ಬಿಂಗೇರಿ, ಮಂಗಳಾ ಪಾಟೀಲ, ಜಯಶ್ರೀ ಕಾರೇಕರ್, ವೈ.ಬಿ. ಬಾದವಾಡಗಿ, ಮೌಲ್ಯಮಾಪನ ಸಮಿತಿ ಸದಸ್ಯರಾದ ವಿಮಲಾಗೌಡ, ಎಸ್.ಕೆ. ಪಾಟೀಲ, ಸುಜಾತಾ ತಿಮ್ಮಾಪೂರ ಇದ್ದರು.

ಇಲ್ಲಿ ಪ್ರದರ್ಶನಗೊಂಡ ಮಾದರಿಗಳಲ್ಲಿ ಅತ್ಯುತ್ತಮವಾದ ಶೇ 10ರಷ್ಟು ಮಾದರಿಗಳು ರಾಜ್ಯಮಟ್ಟಕ್ಕೆ ಅರ್ಹತೆ ಪಡೆಯಲಿವೆ ಎಂದು ಆಯೋಜಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.