ADVERTISEMENT

ಹೊರಗುತ್ತಿಗೆ ನೌಕರರಿಗೆ ‘ನಿರುದ್ಯೋಗ ಭಾಗ್ಯ’ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 9:58 IST
Last Updated 30 ಜನವರಿ 2018, 9:58 IST

ಧಾರವಾಡ: ‘ರಾಜ್ಯ ಸರ್ಕಾರವು ಐದು ಸಾವಿರ ಜನರಿಗೆ ಉದ್ಯೋಗ ಭಾಗ್ಯ ಕಲ್ಪಿಸುವ ಆತುರದಲ್ಲಿ ಕಳೆದ 20 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅಷ್ಟೇ ಸಂಖ್ಯೆಯ ಕಾರ್ಮಿಕರಿಗೆ ‘ನಿರುದ್ಯೋಗ ಭಾಗ್ಯ’ ನೀಡಲು ಮುಂದಾಗಿದೆ’ ಎಂದು ಎಐಯುಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಸೋಮಶೇಖರ್ ಆರೋಪ ಮಾಡಿದರು.

ಹೊರಗುತ್ತಿಗೆ ಆಧಾರದ ಮೇಲೆ ಎರಡು ದಶಕಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನು ತೆಗೆದು ಹಾಕಲು ಸಿದ್ಧತೆ ನಡೆಸಿರುವ ರಾಜ್ಯ ಸರ್ಕಾರದ ವಿರುದ್ಧ ಎಐಯುಟಿಯುಸಿ ಸಂಘಟನೆಯ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿಯು ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಇವರನ್ನು ಕೆಲಸದಿಂದ ತೆಗೆದುಹಾಕಿದಲ್ಲಿ ಇಡೀ ಕುಟುಂಬವೇ ಬೀದಿಪಾಲಾಗಲಿದೆ. ಇಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಹೆಚ್ಚಿನವರು ವಿಧವೆಯರು, ಒಂಟಿ ಮಹಿಳೆಯರು, ದಲಿತರು ಸೇರಿದಂತೆ ನಿರ್ಭಾಗ್ಯರೇ ಆಗಿದ್ದಾರೆ. ಆ ಮೂಲಕ ಸರ್ಕಾರ ಕಡುಶೋಷಿತ ಸಮುದಾಯವನ್ನು ಇನ್ನಷ್ಟು ಪಾತಾಳಕ್ಕೆ ನೂಕಲು ಹೊರಟಿದೆ’ ಎಂದು ಆರೋಪಿಸಿದರು.

ADVERTISEMENT

‘ರಾಜ್ಯದ ವಿವಿಧ ನ್ಯಾಯಾಲಯ ಹಾಗೂ ನ್ಯಾಯಮಂಡಳಿಗಳಲ್ಲಿ ಕಾರ್ಮಿಕ ವಿವಾದಗಳ ಪ್ರಕರಣಗಳ ವ್ಯಾಜ್ಯಗಳು ನಡೆಯುತ್ತಿವೆ. ಅಲ್ಲಿ ಇತ್ಯರ್ಥವಾಗುವವರೆಗೂ ಇಡೀ ಪ್ರಕ್ರಿಯೆ ಸ್ಥಗಿತಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಸೇವಾ ಭದ್ರತೆ ಒದಗಿಸಬೇಕು. ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

‘ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು 1985ರಿಂದ 2014ರವರೆಗೆ ಇಲಾಖೆಯಲ್ಲಿ ಜಾರಿಯಲ್ಲಿದ್ದ ನಿಯಮಗಳ ಅನ್ವಯ ಅವರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಬಸಮ್ಮ ಕಿಳ್ಳೇಕೇತರ, ಗೀತಾ ಬೊಮ್ಮಣ್ಣವರ, ನಿರ್ಮಲಾ ಕಣವಿ, ಗೀತಾ ಬಾಪಶೇಟ, ಸುಜಾತಾ, ಸಯ್ಯದ್, ಬಸವರಾಜ ಅಪರ್ಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.