ADVERTISEMENT

ಹುಬ್ಬಳ್ಳಿ | ಚಿತ್ರಮಂದಿರಗಳಿಗೆ ಕಾಡುತ್ತಿದೆ ಪ್ರೇಕ್ಷಕರ ‘ಬರ‘

ಕಲಾವತಿ ಬೈಚಬಾಳ
Published 23 ಅಕ್ಟೋಬರ್ 2023, 4:19 IST
Last Updated 23 ಅಕ್ಟೋಬರ್ 2023, 4:19 IST
ಅಣ್ಣಿಗೇರಿಯ ಜನತಾ ಚಿತ್ರಮಂದಿರದಲ್ಲಿ ಕಡಿಮೆ ಸಂಖ್ಯೆಯ ಪ್ರೇಕ್ಷಕರಿರುವುದು
ಅಣ್ಣಿಗೇರಿಯ ಜನತಾ ಚಿತ್ರಮಂದಿರದಲ್ಲಿ ಕಡಿಮೆ ಸಂಖ್ಯೆಯ ಪ್ರೇಕ್ಷಕರಿರುವುದು   

ಹುಬ್ಬಳ್ಳಿ: ಅತ್ಯುತ್ತಮ ಚಿತ್ರಕಥೆಯುಳ್ಳ, ನೆಚ್ಚಿನ‌ ನಟನ ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರಗಳೆಲ್ಲ ಕಿಕ್ಕಿರಿದು ತುಂಬುತ್ತಿದ್ದವು, ತಿಂಗಳುಗಟ್ಟಲೇ ಅದೇ ಚಿತ್ರದ ಹವಾ..!

ತಿಂಗಳುಪೂರ್ತಿ, ವರ್ಷಗಳವರೆಗೆ ಮೆಚ್ಚಿನ ಚಲನಚಿತ್ರಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತಿತ್ತು. ಸ್ನೇಹಿತರು ಅಥವಾ ಆಪ್ತರು ಸಿಕ್ಕರಂತೂ ಆಯಾ ನಾಯಕ, ನಾಯಕಿಯ ಮಿಮಿಕ್ರಿ ಮಾಡುವುದರಲ್ಲಿ ಮತ್ತು ಗೀತೆ ಗುಣಗುಣಿಸುವುದರಲ್ಲಿ ಖುಷಿ. ಹೊಸ ಚಿತ್ರಗಳು ಬಿಡುಗಡೆ ಹತ್ತಿರ‌ದಲ್ಲಿದೆ ಎಂದರೆ, ಯಾವ ಚಿತ್ರಮಂದಿರದಲ್ಲಿ ಎಂಬುದರ ಬಗ್ಗೆ ಹುಡುಕಾಟ ನಡೆಯುತಿತ್ತು.

ಈ ಹಿಂದೆ ಹುಬ್ಬಳ್ಳಿ ನಗರವೊಂದರಲ್ಲೇ ಅಂದಾಜು 18 ಚಿತ್ರಮಂದಿರಗಳಿದ್ದರೆ, ಧಾರವಾಡದಲ್ಲಿ ಏಳು ಚಿತ್ರಮಂದಿರಗಳು ಇದ್ದವು. ಪ್ರೇಕ್ಷಕರ ಕೊರತೆ, ಆರ್ಥಿಕ ಸಮಸ್ಯೆಯಿಂದ ಕೆಲವು ಬಾಗಿಲು ಹಾಕಿದ್ದರೆ, ಮತ್ತೆ ಕೆಲವು ಸಭಾ ಭವನ, ಕಲ್ಯಾಣ ಮಂಟಪ, ಕಾಂಪ್ಲೆಕ್ಸ್‌, ಮಾಲ್‌ಗಳಾಗಿ ಪರಿವರ್ತನೆಯಾಗಿವೆ. ಈಗ ಜೀವಂತ ಉಳಿದವು ಕೆಲವು ಮಾತ್ರ.

ADVERTISEMENT

‍‘ಛೋಟಾ ಮುಂಬೈ’ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ನಗರದಲ್ಲಿ ಮಾಲ್‌ಗಳೂ ತಲೆ ಎತ್ತಿವೆ. ಜನರ ಜೀವನ ಶೈಲಿಯೂ ಬದಲಾಗಿದ್ದು, ಆಧುನಿಕ ಸೌಲಭ್ಯಗಳತ್ತ ಮುಖಮಾಡುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಒಂದೇ ಪರದೆ ಮೇಲೆ ಬಿತ್ತರಗೊಳ್ಳುತ್ತಿದ್ದ ಸಿನಿಮಾಗಳಿಗ ಮೊಬೈಲ್ ಎಂಬ ಮಿನಿ ಥೇಟರ್ ಮೂಲಕ ಪ್ರೇಕ್ಷಕನ ತುದಿಬೆರಳಿಗೆ ಬಂದು ನಿಂತಿವೆ.

ಚಿತ್ರಮಂದಿರಕ್ಕೆ ಬಂದ ಸಿನಿಮಾ ಎರಡು–ಮೂರು ದಿನ ಅಥವಾ ವಾರದೊಳಗೆ ಆನ್‌ಲೈನ್‌ನಲ್ಲಿ ಓಟಿಟಿ (ಓವರ್ ದಿ ಟಾಪ್– ಇಂಟರ್‌ನೆಟ್ ಮೂಲಕ ಲಭ್ಯವಿರುವ ಯಾವುದೇ ಸೇವೆಯನ್ನು ಬೆರಳ ತುದಿಯಲ್ಲಿ ಪಡೆಯಬಹುದು) ಮೂಲಕ ಸುಲಭವಾಗಿ ಸಿಗುತ್ತಿದ್ದು, ಸಿನಿಮಾಮಂದಿರಗಳಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಸೆಟಿಲೈಟ್ ಆಧಾರಿತ ಪ್ರೊಜೆಕ್ಷನ್ ಚಿತ್ರಗಳ ಕಾಲವಿದು. ಹಾಗಾಗಿ ಹಳ್ಳಿಗಳಿಗೂ ಸಿನಿಮಾ ಸುಲಭವಾಗಿ ಸಿಗುತ್ತಿವೆ. ಕನ್ನಡ ಭಾಷೆಯ ಸಿನಿಮಾ ನೋಡುಗರ ಸಂಖ್ಯೆ ಶೇ 6ರಷ್ಟು ಮಾತ್ರ. ಕನ್ನಡ ಸಿನಿಮಾ ನೋಡುವ ಬಹುತೇಕರು ಮಲ್ಟಿಪ್ಲೆಕ್ಸ್‌ಗಳಿಗೆ ಹೋಗುತ್ತಿದ್ದು, ಹಿಂದಿ ಚಿತ್ರಗಳನ್ನು ಪ್ರದರ್ಶಿಸುವಂತಹ ಚಿತ್ರಮಂದಿರಗಳು ಇದೀಗ ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿವೆ.

‘ಒಂದು ಸಿನಿಮಾ ಮೂರು ವಾರ ಪ್ರದರ್ಶನ ಕಂಡರೆ ಹೆಚ್ಚು ಎನ್ನುವಂತಹ ಪರಿಸ್ಥಿತಿ ಇದೆ. ಹಳೆಯ ಚಿತ್ರಮಂದಿರಗಳು ನಷ್ಟದಲ್ಲಿದ್ದರೂ, ಖಾಲಿ ಬೀಳುವ ಬದಲು ಹಳೇ ಸಿನಿಮಾಗಳನ್ನೇ ಪ್ರದರ್ಶನ ಮಾಡಬೇಕಾದ ಪರಿಸ್ಥಿತಿಯಲ್ಲಿವೆ’ ಎಂಬ ಅಭಿಪ್ರಾಯ ಚಿತ್ರಮಂದಿರಗಳ ಮಾಲೀಕರದ್ದು.

ಆಟ ನಿಲ್ಲಿಸಿದ ಸುಜಾತಾ, ಸಂಜೋತಾ: ‘ಬರೋಬ್ಬರಿ 50 ವರ್ಷಗಳ ಇತಿಹಾಸ ಹೊಂದಿರುವ ಸುಜಾತಾ ಮತ್ತು ಸಂಜೋತಾ ಚಿತ್ರಮಂದಿರಗಳು 2021ರಲ್ಲಿ ತಮ್ಮ ಆಟಗಳ ಪ್ರದರ್ಶನ ನಿಲ್ಲಿಸಿವೆ. ಕಾರಣಾಂತರಗಳಿಂದ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ’ ಎಂದು ಮಾಲೀಕರಾದ ಶ್ರೇಯಸ್ ವಿ. ಸೂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಲ್ಪಿಪ್ಲೆಕ್ಸ್ ಪರ್ವ

‘ಕಾಲಕ್ಕೆ ತಕ್ಕಂತೆ ಜನರ ಬೇಡಿಕೆಗಳೂ ಬದಲಾಗಿವೆ. ಅವರ ಅಭಿರುಚಿಗೆ ತಕ್ಕ, ಜನಮಾನಸದಲ್ಲಿ ನೆಲೆ ಕಂಡುಕೊಳ್ಳುವ ಸಿನಿಮಾಗಳು ಬಂದರೆ, ಚಿತ್ರಮಂದಿರಗಳೂ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿದರೆ ಮಾತ್ರ ಪ್ರೇಕ್ಷಕ ಮೆಚ್ಚಬಲ್ಲ. ಇದೇನಿದ್ದರೂ ಮಲ್ಟಿಪ್ಲೆಕ್ಸ್‌ಗಳ ಪರ್ವ. ಹಾಗಾಗಿ ನಾವು ಅಪ್ಡೇಟ್ ಆಗಲೇಬೇಕು’ ಎನ್ನುತ್ತಾರೆ ಹುಬ್ಬಳ್ಳಿಯ ಅಪ್ಸರಾ ಮತ್ತು ಸುಧಾ ಚಿತ್ರಮಂದಿರಗಳ ಮಾಲೀಕ ಕಿಶೋರ್ ರಾಯ್ಕರ್.

ಪಿವಿಆರ್‌ನತ್ತ ಪ್ರೇಕ್ಷಕ

ಹುಬ್ಬಳ್ಳಿಯಲ್ಲಿ ಪಿವಿಆರ್ ಚಿತ್ರಮಂದಿರ ಕಾಲಿಟ್ಟು 9ನೇ ವರ್ಷ ಆರಂಭವಾಗಿದೆ. 4 ಸ್ಕ್ರೀನ್‌ಗಳು, 850ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಇದೆ.

ಇನಾಕ್ಸ್‌ ಮಲ್ಟಿಪ್ಲೆಕ್ಸ್‌

ಧಾರವಾಡದ ಟೋಲ್ ನಾಕಾ ಹತ್ತಿರ ಇನಾಕ್ಸ್ ಮಲ್ಟಿಪ್ಲೆಕ್ಸ್‌ ಇದೇ ಸೆಪ್ಟೆಂಬರ್ 7ರಂದು ಪ್ರಾರಂಭವಾಗಿದೆ. 4ಕೆ ಗುಣಮಟ್ಟದ, ಲೇಸರ್ ಪ್ರಾಜೆಕ್ಟ್ ಆಧಾರಿತ 4 ಸ್ಕ್ರೀನ್‌ಗಳಿದ್ದು, 700ಕ್ಕೂ ಅಧಿಕ ಆಸನಗಳ ವ್ಯವಸ್ಥೆಯನ್ನು ಹೊಂದಿದೆ. ಮಾಲ್‌ನಲ್ಲಿ ಶಾಪಿಂಗ್‌ ಮಾಡಿ ಕೆಲವರು ಸಿನಿಮಾ ವೀಕ್ಷಣೆಗೆ ಅಲ್ಲಿಯೇ ಹೋಗುತ್ತಾರೆ.

‘ಹಬ್ಬ ಮತ್ತು ವಾರದ ಕೊನೆ ದಿನಗಳಲ್ಲಿ, ಅತ್ಯುತ್ತಮ ಚಿತ್ರಗಳು ಬಿಡುಗಡೆಯಾದಾಗ ಚಿತ್ರಮಂದಿರಗಳಲ್ಲಿ ಹೆಚ್ಚಿನ ಜನ ಇರುತ್ತಾರೆ. ಗುಣಮಟ್ಟ ಮತ್ತು ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಎಲ್ಲ ವರ್ಗದವರೂ ಇಷ್ಟಪಟ್ಟು ಸಿನಿಮಾ ನೋಡುವಂತಹ, ಆರಾಮದಾಯಕ ವಾತಾವರಣ ಕಲ್ಪಿಸಲಾಗಿದೆ’ ಎಂದು ಹುಬ್ಬಳ್ಳಿಯ ಲಕ್ಷ್ಮಿ ಮಾಲ್‌ನಲ್ಲಿರುವ ಪಿವಿಆರ್‌ನ
ನಿರ್ವಾಹಕ ರಾಜು ಕ್ರಿಸ್ಟೋಫರ್ ತಿಳಿಸಿದರು.

ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್‌ನಲ್ಲಿರುವ ಸಿನಿಪೊಲೀಸ್ ಚಿತ್ರಮಂದಿರದಲ್ಲಿ 5 ಸ್ಕ್ರೀನ್‌ಗಳು ಮತ್ತು ಅಂದಾಜು 2000 ಆಸನಗಳ ವ್ಯವಸ್ಥೆ ಇದೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ

ಧಾರವಾಡದ ಏಳು ಚಿತ್ರಮಂದಿರಗಳ ಪೈಕಿ ಮೂರು ಮುಚ್ಚಿವೆ. ನಾಲ್ಕು ಕಾರ್ಯನಿರ್ವಹಿಸುತ್ತಿವೆ. ಸಿನಿಮಾ ವೀಕ್ಷಣೆಗೆ ಜನರು ಚಿತ್ರಮಂದಿರಕ್ಕೆ ಹೋಗುವುದು ಕಡಿಮೆಯಾಗಿದೆ. ಹಾಗಾಗಿ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಟಿ.ವಿ ಮೊಬೈಲ್‌ಫೋನ್‌ ಹೋಂ ಥಿಯೇಟರ್‌ ಓಟಿಟಿ ಮೊದಲಾದವುಗಳಲ್ಲಿ ವೀಕ್ಷಿಸುವ ಪರಿಪಾಟ ಜಾಸ್ತಿಯಾಗಿದೆ. ನಗರದ ‘ರೀಗಲ್‌’ ‘ಮಾಡರ್ನ್‌’ ಹಾಗೂ ‘ಲಕ್ಷ್ಮಿ’ ಚಿತ್ರಮಂದಿರಗಳು ಮುಚ್ಚಿವೆ. ‘ರೀಗಲ್‌’ ಈಗ ಶಾಪಿಂಗ್‌ ಮಳಿಗೆಯಾಗಿದೆ.‘ಮಾಡರ್ನ್‌’ ಈಗ ಕಲ್ಯಾಣ ಮಂಟಪವಾಗಿದೆ. ‘ಲಕ್ಷ್ಮಿ’ ಚಿತ್ರಮಂದಿರ ಜಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣದ ಹಂತದಲ್ಲಿದೆ. ‘ಶ್ರೀನಿವಾಸ’ ‘ಪದ್ಮ’ ‘ವಿಜಯ’ ಹಾಗೂ ‘ಸಂಗಮ್‌’ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಚಿತ್ರಮಂದಿರಗಳತ್ತ ವೀಕ್ಷಕರನ್ನು ಆಕರ್ಷಿಸುವುದು ಸವಾಲಾಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಸ್ವಚ್ಛತೆ ಕೊರತೆ ಆಸನಗಳು ಹಳತಾಗಿರುವುದು ಅತ್ಯಾಧುನಿಕ ಸ್ಕ್ರೀನ್‌ಗಳಿಲ್ಲ. ‘ಆಗಿನ ಕಾಲದಲ್ಲಿ ಸಿನಿಮಾ ಬಿಡುಗಡೆಯಾದ ಮೊದಲ ದಿನ ಮೊದಲ ಪ್ರದರ್ಶನ ನೋಡುವುದೇ ಪ್ರತಿಷ್ಠೆಯಾಗಿತ್ತು. ಸಿನಿಮಾ ವೀಕ್ಷಣೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಈಗ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದು ಕಡಿಮೆ. ಮೂರು ಗಂಟೆ ಕುಳಿತು ಚಲನಚಿತ್ರ ವೀಕ್ಷಿಸುವ ತಾಳ್ಮೆ ಬಹಳಷ್ಟು ಮಂದಿಗೆ ಇಲ್ಲ’ ಎಂದು ಧಾರವಾಡದ ಶ್ರೀನಿವಾಸ–ಪದ್ಮಾ ಚಿತ್ರಮಂದಿರದ ಪಾಲುದಾರ ಡಾ.ಕಿರಣಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟಿ.ವಿಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಸಿನಿಮಾಗಳನ್ನು ವೀಕ್ಷಿಸುವುದೇ ಹೆಚ್ಚು. ನೆಚ್ಚಿನ ನಾಯಕ ಅಥವಾ ನಾಯಕಿಯ ಸಿನಿಮಾ ಬಿಡುಗಡೆಯಾದಾಗ ಟಾಕೀಸ್‌ಗೆ ಹೋಗುತ್ತೇವೆ. ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದಾಗ ಸಿಗುವ ಆನಂದ ಮೊಬೈಲ್‌ಫೋನ್‌ ಕಂಪ್ಯೂಟರ್‌ ಟಿ.ವಿ ಪರದೆಯಲ್ಲಿ ವೀಕ್ಷಿಸಿದಾಗ ಸಿಗಲ್ಲ’ ಎಂದು ವಿದ್ಯಾರ್ಥಿನಿ ಅಶ್ವಿನಿ ಅಮ್ಮಿನಬಾವಿ ಹೇಳುತ್ತಾರೆ.

ಬಾಗಿಲು ಹಾಕಿದ ಹುಬ್ಬಳ್ಳಿಯ ಚಿತ್ರಮಂದಿರಗಳು

ಸುಜಾತಾ, ಸಂಜೋತಾ, ಮೋಹನ, ಮಲ್ಲಿಕಾರ್ಜುನ, ಲಕ್ಷ್ಮಿ ನಾರಾಯಣ, ಲಕ್ಷ್ಮಿ- ಶಕ್ತಿ, ಶ್ರೀಲಕ್ಷ್ಮಿ, ಸುದರ್ಶನ, ಡೆಕ್ಕನ್, ಗಣೇಶ

ರೂಪಾಂತರಗೊಂಡ ಚಿತ್ರಮಂದಿರಗಳು

ಅಜಂತಾ, ಶಕ್ತಿ – ಪಿವಿಆರ್‌ ಸುದರ್ಶನ– ಕಾಂಪ್ಲೆಕ್ಸ್‌ ಪದ್ಮಾ– ಪದ್ಮಾ ಮೆಹೆಲ್‌ (ಕಾಂಪ್ಲೆಕ್ಸ್‌) ಸಂಗೀತ–  ಕಾರ್‌ ಶೋರೂಂ

ಅಸ್ತಿತ್ವ ಉಳಿಸಿಕೊಂಡಿರುವ ಚಿತ್ರಮಂದಿರಗಳು

ಅಪ್ಸರಾ, ಸುಧಾ, ಶೃಂಗಾರ, ರೂಪಂ

ಪೂರಕ ಮಾಹಿತಿ: ಬಿ.ಜೆ.ಧನ್ಯಪ್ರಸಾದ್‌, ರಾಜಶೇಖರ್‌ ಸುಣಗಾರ, ಜಗದೀಶ ಗಾಣಿಗೇರ, ರಮೇಶ ಓರಣಕರ್‌

ಬಾಗಿಲು ಹಾಕಿರುವ ಸುಜಾತಾ ಸಂಜೋತಾ ಚಿತ್ರಮಂದಿರಗಳು– ಪ್ರಜಾವಾಣಿ ಚಿತ್ರ/ ಗುರು ಹಬೀಬ
ಹುಬ್ಬಳ್ಳಿಯ ಅಪ‍್ಸರಾ ಚಿತ್ರಮಂದಿರದಲ್ಲಿ ಟಿಕೆಟ್‌ಗಾಗಿ ಸರತಿಯಲ್ಲಿ ನಿಂತಿರುವ ಜನ– ಪ್ರಜಾವಾಣಿ ಚಿತ್ರ/ ಗುರು ಹಬೀಬ
ಹುಬ್ಬಳ್ಳಿಯಲ್ಲಿ ಅಂಜತಾ– ಶಕ್ತಿ ಚಿತ್ರಮಂದಿವಿದ್ದ ಸ್ಥಳ ಮಾಲ್‌ ಆಗಿ ರೂಪುಗೊಂಡಿದ್ದು ಪಿವಿಆರ್‌ ಚಿತ್ರಮಂದಿರ ತಲೆ ಎತ್ತಿದೆ– ಪ್ರಜಾವಾಣಿ ಚಿತ್ರ/ ಗುರು ಹಬೀಬ
ಧಾರವಾಡದ ಮಾಡರ್ನ್ ಚಿತ್ರ ಮಂದಿರ ಈಗ ಮಾಡರ್ನ್ ಸಭಾಭವನವಾಗಿದೆ

Highlights - *ಬಾಗಿಲು ಹಾಕಿದ ಹುಬ್ಬಳ್ಳಿಯ ಚಿತ್ರಮಂದಿರಗಳು ಸುಜಾತಾ, ಸಂಜೋತಾ, ಮೋಹನ, ಮಲ್ಲಿಕಾರ್ಜುನ, ಲಕ್ಷ್ಮಿ ನಾರಾಯಣ, ಲಕ್ಷ್ಮಿ- ಶಕ್ತಿ, ಶ್ರೀಲಕ್ಷ್ಮಿ, ಸುದರ್ಶನ, ಡೆಕ್ಕನ್, ಗಣೇಶ *ರೂಪಾಂತರಗೊಂಡ ಚಿತ್ರಮಂದಿರಗಳು ಅಜಂತಾ, ಶಕ್ತಿ – ಪಿವಿಆರ್‌ ಸುದರ್ಶನ– ಕಾಂಪ್ಲೆಕ್ಸ್‌ ಪದ್ಮಾ– ಪದ್ಮಾ ಮೆಹೆಲ್‌ (ಕಾಂಪ್ಲೆಕ್ಸ್‌) ಸಂಗೀತ–  ಕಾರ್‌ ಶೋರೂಂ *ಅಸ್ತಿತ್ವ ಉಳಿಸಿಕೊಂಡಿರುವ ಚಿತ್ರಮಂದಿರಗಳು ಅಪ್ಸರಾ, ಸುಧಾ, ಶೃಂಗಾರ, ರೂಪಂ

Cut-off box - ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಧಾರವಾಡ:  ಧಾರವಾಡದ ಏಳು ಚಿತ್ರಮಂದಿರಗಳ ಪೈಕಿ ಮೂರು ಮುಚ್ಚಿವೆ. ನಾಲ್ಕು ಕಾರ್ಯನಿರ್ವಹಿಸುತ್ತಿವೆ. ಸಿನಿಮಾ ವೀಕ್ಷಣೆಗೆ ಜನರು ಚಿತ್ರಮಂದಿರಕ್ಕೆ ಹೋಗುವುದು ಕಡಿಮೆಯಾಗಿದೆ. ಹಾಗಾಗಿ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಟಿ.ವಿ ಮೊಬೈಲ್‌ಫೋನ್‌ ಹೋಂ ಥಿಯೇಟರ್‌ ಓಟಿಟಿ ಮೊದಲಾದವುಗಳಲ್ಲಿ ವೀಕ್ಷಿಸುವ ಪರಿಪಾಟ ಜಾಸ್ತಿಯಾಗಿದೆ. ನಗರದ ‘ರೀಗಲ್‌’ ‘ಮಾಡರ್ನ್‌’ ಹಾಗೂ ‘ಲಕ್ಷ್ಮಿ’ ಚಿತ್ರಮಂದಿರಗಳು ಮುಚ್ಚಿವೆ. ‘ರೀಗಲ್‌’ ಈಗ ಶಾಪಿಂಗ್‌ ಮಳಿಗೆಯಾಗಿದೆ. ‘ಮಾಡರ್ನ್‌’ ಈಗ ಕಲ್ಯಾಣ ಮಂಟಪವಾಗಿದೆ. ‘ಲಕ್ಷ್ಮಿ’ ಚಿತ್ರಮಂದಿರ ಜಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣದ ಹಂತದಲ್ಲಿದೆ. ‘ಶ್ರೀನಿವಾಸ’ ‘ಪದ್ಮ’ ‘ವಿಜಯ’ ಹಾಗೂ ‘ಸಂಗಮ್‌’ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಚಿತ್ರಮಂದಿರಗಳತ್ತ ವೀಕ್ಷಕರನ್ನು ಆಕರ್ಷಿಸುವುದು ಸವಾಲಾಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಸ್ವಚ್ಛತೆ ಕೊರತೆ ಆಸನಗಳು ಹಳತಾಗಿರುವುದು ಅತ್ಯಾಧುನಿಕ ಸ್ಕ್ರೀನ್‌ಗಳಿಲ್ಲ. ‘ಆಗಿನ ಕಾಲದಲ್ಲಿ ಸಿನಿಮಾ ಬಿಡುಗಡೆಯಾದ ಮೊದಲ ದಿನ ಮೊದಲ ಪ್ರದರ್ಶನ ನೋಡುವುದೇ ಪ್ರತಿಷ್ಠೆಯಾಗಿತ್ತು. ಸಿನಿಮಾ ವೀಕ್ಷಣೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಈಗ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದು ಕಡಿಮೆ. ಮೂರು ಗಂಟೆ ಕುಳಿತು ಚಲನಚಿತ್ರ ವೀಕ್ಷಿಸುವ ತಾಳ್ಮೆ ಬಹಳಷ್ಟು ಮಂದಿಗೆ ಇಲ್ಲ’ ಎಂದು ಧಾರವಾಡದ ಶ್ರೀನಿವಾಸ–ಪದ್ಮಾ ಚಿತ್ರಮಂದಿರದ ಪಾಲುದಾರ ಡಾ.ಕಿರಣಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಟಿ.ವಿಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಸಿನಿಮಾಗಳನ್ನು ವೀಕ್ಷಿಸುವುದೇ ಹೆಚ್ಚು. ನೆಚ್ಚಿನ ನಾಯಕ ಅಥವಾ ನಾಯಕಿಯ ಸಿನಿಮಾ ಬಿಡುಗಡೆಯಾದಾಗ ಟಾಕೀಸ್‌ಗೆ ಹೋಗುತ್ತೇವೆ. ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದಾಗ ಸಿಗುವ ಆನಂದ ಮೊಬೈಲ್‌ಫೋನ್‌ ಕಂಪ್ಯೂಟರ್‌ ಟಿ.ವಿ ಪರದೆಯಲ್ಲಿ ವೀಕ್ಷಿಸಿದಾಗ ಸಿಗಲ್ಲ’ ಎಂದು ವಿದ್ಯಾರ್ಥಿನಿ ಅಶ್ವಿನಿ ಅಮ್ಮಿನಬಾವಿ ಹೇಳುತ್ತಾರೆ.

Cut-off box - ಆಟಕ್ಕುಂಟು ಲೆಕ್ಕಕ್ಕಿಲ್ಲ ಅಣ್ಣಿಗೇರಿ: ಪಟ್ಟಣದ ಮಧ್ಯಭಾಗದಲ್ಲಿರುವ ‘ಜನತಾ’ ಚಿತ್ರಮಂದಿರ ಈಗ ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ತುಂಬಾ ಹಿನ್ನಡೆಯಾಗುತ್ತಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬಾರದ ಹಿನ್ನಲೆಯಲ್ಲಿ ಚಿತ್ರಪ್ರದರ್ಶನ ತಿಂಗಳಲ್ಲಿ ಬೆರಳೆಣಿಕೆಯಷ್ಟು ದಿನ ಮಾತ್ರ ನಡೆಯುತ್ತದೆ. ಇಲ್ಲಿನ ದೇಸಾಯಿ ಮನೆತನಕ್ಕೆ ಸೇರಿದ ತಾಲ್ಲೂಕಿನ ಏಕೈಕ ಚಿತ್ರಮಂದಿರ ‘ಜನತಾ’. ಒಟ್ಟು 370 ಆಸನಗಳ ವ್ಯವಸ್ಥೆಯನ್ನು ಒಳಗೊಂಡಿದೆ. ಸುಸಜ್ಜಿತ ವಾತಾವರಣ ಸ್ತ್ರೀ ಪುರುಷರಿಗೆ ಪ್ರತ್ಯೇಕ ಶೌಚಾಲಯ ಶುದ್ಧ ಕುಡಿಯುವ ನೀರು ಸೇರಿದಂತೆ ಮೊದಲಾದ ಮೂಲಸೌಕರ್ಯಗಳನ್ನು ಹೊಂದಿದೆ. ‘ಗ್ರಾಮೀಣ ಭಾಗದ ಜನರು ಚಲನಚಿತ್ರ ನೋಡಲು ಸಾಕಷ್ಟು ಹಣ ಖರ್ಚು ಮಾಡಿ ನಗರ ಪ್ರದೇಶಗಳಿಗೆ ಹೋಗಬಾರದು ಎಂಬ ಉದ್ದೇಶದಿಂದ ಇಲ್ಲಿಯೇ ಕಡಿಮೆ ವೆಚ್ಚದಲ್ಲಿ ಚಿತ್ರಪ್ರದರ್ಶನ ಮಾಡುತ್ತಿದ್ದರೂ ಪ್ರೇಕ್ಷಕರ ಸಂಖ್ಯೆ ವಿರಳವಾಗಿದೆ. ಚಿತ್ರಮಂದಿರ ನಷ್ಟದಲ್ಲಿದ್ದರೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ’ ಎನ್ನುತ್ತಾರೆ ಜನತಾ ಚಿತ್ರಮಂದಿರದ ಮಾಲೀಕ ಶರಣಬಸಪ್ಪನವರು ದೇಶಮುಖ. ಬಾಗಿಲು ಮುಚ್ಚಿದ ಚಿತ್ರಮಂದಿರ ಅಳ್ನಾವರ: ದಟ್ಟವಾದ ಕಾಡಂಚಿನ ಮಲೆನಾಡಿನ ಭಾಗದ ಜನರಿಗೆ ಮನರಂಜನೆ ನೀಡುವ ಉದ್ದೇಶ ಹೊತ್ತು ದಿವಂಗತ ಬಿ.ಬಿ. ತೇಗೂರ ಮತ್ತು ಕಂಪನಿ ಸನ್ 1968ರಲ್ಲಿ ಸುಸಜ್ಜಿತ ‘ವನಶ್ರೀ’ ಚಿತ್ರಮಂದಿರ ಆರಂಭಿಸಿದ್ದರು. ‘ಆರಂಭದಲ್ಲಿ ಚೆನ್ನಾಗಿಯೇ ನಡೆಯಿತು. ಸುತ್ತಮುತ್ತಲಿನ ಜನರೂ ಅಧಿಕ ಸಂಖ್ಯೆಯಲ್ಲಿ ಬಂದು ಚಿತ್ರ ನೋಡುತ್ತಿದ್ದರು. ಆಧುನಿಕ ಮಾರುಕಟ್ಟೆ ಪ್ರಭಾವದಿಂದ ಥೇಟರ್‌ಗೆ ಹೋಗಿ ಸಿನಿಮಾ ನೋಡುವ ಪರಿಪಾಟ ದೂರ ಸರಿದ ಪರಿಣಾಮ ಕಳೆದ ಒಂದು ದಶಕದ ಹಿಂದೆ ಚಿತ್ರಮಂದಿರ ಬಂದ್‌ ಆಗಿದೆ’ ಎಂದು ತೇಗೂರ ಕುಟುಂಬದ ಪರಮೇಶ್ವರ ತೇಗೂರ ಹೇಳುತ್ತಾರೆ. ಈಚೆಗೆ ಇದನ್ನು ಕಲ್ಯಾಣ ಮಂಟಪವಾಗಿ ಪರಿವರ್ತಿಸಲಾಗಿದೆ. ಆದರೆ ಅದು ಕೂಡಾ ಸರಿಯಾಗಿ ನಡೆಯುತ್ತಿಲ್ಲ. ಒಂದು ಕಾಲದಲ್ಲಿ ರಾಜ್ಯದ ಉತ್ತಮ ಚಿತ್ರ ಮಂದಿರದಲ್ಲಿ ಒಂದು ಎಂದು ಗುರ್ತಿಸಲ್ಪಟ್ಟ ಸಿನಿಮಾಮಂದಿರ ಜನರಿಂದ ದೂರ ಸರಿದಿದೆ. ಹಾರ್ಡ್‌ವೇರ್ ಅಂಗಡಿಯಾಗಿ ಬದಲಾದ ಥೇಟರ್‌ ಉಪ್ಪಿನಬೆಟಗೇರಿ: ಗ್ರಾಮದ ಹೊಸ ಬಸ್ ನಿಲ್ದಾಣದ ಹಿಂಬದಿಯ ‘ಗೀತಾ’ ಚಿತ್ರಮಂದಿರವು 21 ವರ್ಷ ಪ್ರೇಕ್ಷಕರಿಗೆ ನಿರಂತರ ಮನರಂಜನೆ ನೀಡಿತು. ‌ ಗ್ರಾಮೀಣ ಭಾಗದಲ್ಲಿ 1978ರಲ್ಲಿ ಆರಂಭವಾದ ಚಿತ್ರಮಂದಿರ ಸುಮಾರು ಎರಡು ದಶಕಗಳ ಕಾಲ ದಿವಂಗತ ಎಂ.ಸಿ.ಕಡಗದ ಅವರ ಮಾಲೀಕತ್ವದಲ್ಲಿ ನಡೆಯಿತು. ‘ಉಪ್ಪಿನಬೆಟಗೇರಿ ಸುತ್ತಮುತ್ತಲಿನ ಸುಮಾರು 25 ಹಳ್ಳಿಯ ಜನರು ಎತ್ತಿನಬಂಡಿ ಟ್ರ್ಯಾಕ್ಟರ್‌ ವಾಹನಗಳ ಮೂಲಕ ಕುಟುಂಬ ಸಮೇತರಾಗಿ ಸಿನಿಮಾ ನೋಡಲು ಬರುತ್ತಿದ್ದರು. ಅಂದಿನ ದಿನಗಳಲ್ಲಿ ಒಳ್ಳೆಯ ಕಲೆಕ್ಷನ್‌ ಸಹ ಮಾಡಿತ್ತು. ವೀಕ್ಷಕರ ಸಂಖ್ಯೆ ಕಡಿಮೆಯಾಗಿದ್ದರಿಂದ 24 ವರ್ಷಗಳಿಂದ ಚಿತ್ರಮಂದಿರವನ್ನು ಬಂದ ಮಾಡಲಾಗಿದ್ದು ಆ ಸ್ಥಳದಲ್ಲಿ ಹಾರ್ಡ್‌ವೇರ್ ಅಂಗಡಿ ತೆರೆಯಲಾಗಿದೆ’ ಎನ್ನುತ್ತಾರೆ ಎಂ.ಸಿ.ಕಡಗದ ಅವರ ಪುತ್ರ ಚಂದ್ರಶೇಖರ ಕಡಗದ. ‘ಇತ್ತೀಚಿನ ವರ್ಷಗಳಲ್ಲಿ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾದ ನೆಚ್ಚಿನ ನಟನ ಚಿತ್ರಗಳನ್ನು ನೋಡಲು ಧಾರವಾಡದ ಥಿಯೇಟರ್‌ಗೆ ಹೋಗಬೇಕು ಎನ್ನುವಷ್ಟರಲ್ಲಿ ಪ್ರೇಕ್ಷಕರ ಕೊರತೆಯಿಂದ ಚಿತ್ರಮಂದಿರದ ಮಾಲೀಕರು ಎರಡು ಇಲ್ಲವೇ ಮೂರು ವಾರಕ್ಕೆ ಸಿನಿಮಾವನ್ನು ತೆಗೆದು ಬಿಡುತ್ತಾರೆ. ಇದರಿಂದಾಗಿ ಸಿನೆಮಾ ನೋಡಲು ಆಗುತ್ತಿಲ್ಲ’ ಎಂದು ಪ್ರೇಕ್ಷಕ ಶಿವಾನಂದ ನಿಲಗಾರ (ಮೊರಬ) ಹೇಳಿದರು.

Cut-off box - ‘ಆದಾಯವಿಲ್ಲದೇ ತೆರಿಗೆ ಕಟ್ಟುವುದಾದರೂ ಹೇಗೆ?’ ಚಿತ್ರಮಂದಿರಗಳಿಗೆ ನೀಡುವ ಪರವಾನಗಿ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳೀಕರಣಗೊಳಿಸಿ ಶುಲ್ಕವನ್ನು ಕಡಿಮೆ ಮಾಡಬೇಕು. ಆಸ್ತಿ ತೆರಿಗೆಯನ್ನು ಆಗಾಗ ಬದಲಾವಣೆ ಮಾಡುತ್ತಿರುವುದರಿಂದ ಚಿತ್ರ ಮಂದಿರಗಳ ಮಾಲೀಕರಿಗೆ ಹೊರೆ ಹೆಚ್ಚಾಗುತ್ತಿದೆ. ಸದ್ಯ ವಿದ್ಯುತ್ ದರವೂ ಹೆಚ್ಚಾಗಿದೆ.‌ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರದೆ ಖಜಾನೆ ಭರ್ತಿಯಾಗದು. ಸಿಬ್ಬಂದಿಗೂ ಸಂಬಳ ಕೊಡುವುದು ಕಷ್ಟವಾಗಿದೆ. ಜಿಎಸ್‌ಟಿ ಹೊರೆಯೂ ಹೆಚ್ಚಾಗಿದೆ. ಹೀಗಿರುವಾಗ ತೆರಿಗೆ ಕಟ್ಟುವುದಾದರೂ ಹೇಗೆ? ಇಂತಹ ಆರ್ಥಿಕ ಹೊರೆಯಿಂದಲೇ ಬಹುತೇಕ ಚಿತ್ರಮಂದಿರಗಳು ಬಾಗಿಲು ಹಾಕುತ್ತಿವೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಅನುಕೂಲ ಕಲ್ಪಿಸಬೇಕು- ಆರ್.ಆರ್. ಓದುಗೌಡರ ಅಧ್ಯಕ್ಷ ಸಿನಿಮಾ ಪ್ರದರ್ಶಕರ ಮಹಾಮಂಡಳಿ ಹುಬ್ಬಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.