ADVERTISEMENT

'ಮಾನವತ್ವ ಇಲ್ಲವಾದರೆ ದೈವತ್ವ ಕನಸಿನ ಮಾತು'

ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 13:17 IST
Last Updated 10 ಜುಲೈ 2018, 13:17 IST
ಹುಬ್ಬಳ್ಳಿಯಲ್ಲಿ ನಡೆದ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನೃಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ನಡೆದ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನೃಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ:ಮಾನವತ್ವ ಇಲ್ಲದಿದ್ದರೆ ದೈವತ್ವ ಕನಸಿ ಮಾತು. ಸಮಾಜದ ಹಿತವೇ ಗುರಿಯಾದಾಗ ಮಾತ್ರ ಕರ್ಮ ಎಂಬುದು ಕರ್ಮಯೋಗವಾಗುತ್ತದೆ ಎಂದು ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನೃಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ವರ್ಧಂತಿ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ಜೀವನಕ್ಕೆ ಸಾತ್ವಿಕ ಗುರಿ ಇರಬೇಕು. ನಿತ್ಯ ಮಾಡುವ ಎಲ್ಲ ಕರ್ಮಗಳು ಬದುಕನ್ನು ನಿರ್ಧರಿಸುತ್ತವೆ. ಕರ್ಮಕ್ಕೆ ಅನುಗುಣವಾಗಿ ಜನ್ಮ ಸಿಗುತ್ತದೆ. ವ್ಯಕ್ತಿಯಿಂದ ವ್ಯಕ್ತಿ ವೈವಿಧ್ಯ ಇರುವುದನ್ನು ಗಮನಿಸಬಹುದು, ಇದಕ್ಕೆ ಕಾರಣ ಪೂರ್ವ ಜನ್ಮದ ಕರ್ಮ. ಇಂತಹ ವಿಷಯವನ್ನು ಹೇಳುವ ಸನಾತನ ಹಿಂದೂ ಧರ್ಮ ವೈಜ್ಞಾನಿಕ ಧರ್ಮವಾಗಿದೆ ಎಂದು ಹೇಳಿದರು.

ಮಾನವತ್ವದ ಚೌಕಟ್ಟಿನಾಚೆಗೆ ಧರ್ಮವನ್ನು ಆಚರಣೆ ಮಾಡಲು ಹೋದರೆ ಹಿಂಸೆ– ರಕ್ತಪಾತವಾಗುತ್ತದೆ. ಮೊದಲು ಮಾನವತ್ವ ಬೆಳೆಸಿಕೊಳ್ಳಬೇಕು. ಜಗತ್ತಿನ ಎಲ್ಲ ಮಾನವರು ಸಮಾನರು ಹಾಗೂ ಮಂಗಳ ಸ್ವರೂಪರು ಎಂದು ಆದಿಶಂಕರಾಚಾರ್ಯರು ಹೇಳಿದರು. ಜಗತ್ತಿನ ಮಾನವತೆ ಒಂದೇ ಹೇಳಿದ್ದು ಅವರು ಮಾತ್ರ. ಎಲ್ಲ ಜನರನ್ನು ಒಂದು ಸೂತ್ರದಡಿ ತರುವ ಸೂತ್ರ ಅದ್ವೈತವಾಗಿದೆ. ಅದ್ವೈತ ಒಂದು ಕಡೆಯಾದರೆ ಬೇರೆಲ್ಲ ಮತಗಳು ಇನ್ನೊಂದು ಕಡೆ ಎಂದರು.

ADVERTISEMENT

ಸಾಧನೆ ಮಾತನಾಡಬೇಕೇ ಹೊರತು ಮಾತನಾಡುವುದೇ ಸಾಧನೆಯಾಗಬಾರದು. ಮಾನವ ಜನ್ಮ ಬಹಳ ಪವಿತ್ರವಾಗಿದ್ದು, ಅದನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪೀಠದ ಆಡಳಿತಾಧಿಕಾರಿ ಬಿ.ಎಸ್. ರವಿಶಂಕರ್ ಮಾತನಾಡಿ, ಜಾತಿ, ಮತ, ಪಂಥದ ಭೇದ ಇಲ್ಲದೆ ಶುದ್ಧ ಅಂತಃಕರಣದಿಂದ ಶಿವನ ಧ್ಯಾನ ಮಾಡುವ ಎಲ್ಲರಿಗೂ ಸ್ವಾಮೀಜಿ ಶಿವ ದೀಕ್ಷೆ ನೀಡುತ್ತಿದ್ದಾರೆ. ಇಲ್ಲಿಯ ವರೆಗೆ 13 ಲಕ್ಷ ಜನರಿಗೆ ದೀಕ್ಷೆ ನೀಡಿದ್ದಾರೆ. 4 ಲಕ್ಷ ಮಾತೆಯರಿಗೆ ಪೂಜಾ ವಿಧಾನ ಹೇಳಿಕೊಟ್ಟು ಅನುಗ್ರಹಿಸಿದ್ದಾರೆ ಎಂದರು. ಸಂಸದ ಪ್ರಹ್ಲಾದ್ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.