ADVERTISEMENT

ಎಸ್‌ಸಿ, ಎಸ್‌ಟಿ ಕಾಯ್ದೆ: ದಲಿತ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 11:02 IST
Last Updated 13 ಏಪ್ರಿಲ್ 2018, 11:02 IST

ನರೇಗಲ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಗುರುವಾರ ಅಬ್ಬಿಗೇರಿ ಗ್ರಾಮದಲ್ಲಿ ಮುಷ್ಟಿ ಧಾನ್ಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಗ್ರಾಮದ ಗಾಂಧಿ ಭವನದ ಮುಂದೆ ದಲಿತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿ, ಪಂಗಡಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿದರು.

ಪರಿಶಿಷ್ಟ ಜಾತಿ, ಪಂಗಡಗಳ ಜನರ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಿದ ಕೂಡಲೇ ಆರೋಪಿಗಳ ಬಂಧನ ಮತ್ತು ಪ್ರಕರಣ ದಾಖಲು ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ. ಮೋದಿ ಅವರು ಸಂವಿಧಾನದ ವಿರುದ್ಧ ನಡೆದುಕೊಳ್ಳುತ್ತಿರುವುದೇ ಅಚ್ಛೇ ದಿನ್‌’ ಎಂದು ದೂರಿದರು.

ADVERTISEMENT

‘ದಲಿತರ ವಿರುದ್ದ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಡಿಎಸ್‌ಎಸ್‌ ಸಂಚಾಲಕ ಶರಣಪ್ಪ ಪೂಜಾರ ಆಗ್ರಹಿಸಿದರು.

ಪ್ರಕಾಶ ಹೊಸಳ್ಳಿ, ಮಂಜುನಾಥ ಬುರಡಿ, ಮೌನೇಶ ಹಾದಿಮನಿ, ಹನಮಂತಪ್ಪ ದ್ವಾಸಲ, ಸಂಜಯ ದೊಡ್ಡಮನಿ, ಹನಮಂತ ಚಲವಾದಿ, ಬಾಳಪ್ಪ ಬುರಡಿ, ಆನಂದ ಹಿರೇಮನಿ, ಮಹಾದೇವಪ್ಪ ಮುಂದಿನಮನಿ, ನಿಂಗಪ್ಪ ಮಾದರ, ಬಸವರಾಜ ಹೊಸಮನಿ, ಶ್ರೀಧರ ತಳ್ಳಿಹಾಳ, ಸಂತೋಷ ದೊಡ್ಡಮನಿ ಇದ್ದರು.

ಸಿಪಿಐ ಕೆ.ಸಿ.ಪ್ರಕಾಶ, ಪಿಎಸ್‌ಐ ವೈ.ಜಲಗೇರಿ ಅವರು ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.