ADVERTISEMENT

‘ಕುಡಿಯುವ ನೀರಿನ ಋಣ ತೀರಿಸಿ’

​ಪ್ರಜಾವಾಣಿ ವಾರ್ತೆ
Published 10 ಮೇ 2017, 6:43 IST
Last Updated 10 ಮೇ 2017, 6:43 IST

ನರಗುಂದ: ‘ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ಶಾಸಕರು, ಸಂಸದರು ಕುಡಿಯುವುದು ಬಿಸ್ಲೇರಿ ನೀರಲ್ಲ, ತಾಯಿ ಮಲಪ್ರಭೆ ನೀರು. ಹರಿಯುವ ರಕ್ತದಲ್ಲೂ ಶೇ 80ರಷ್ಟು ಅದೇ ನೀರಿದೆ. ಅದರ ಋಣ ತೀರಿಸಲಾದರೂ ಮಹಾದಾಯಿ ಅನುಷ್ಠಾನಕ್ಕೆ ಮುಂದಾಗಬೇಕು’ ಎಂದು  ಮಹಾದಾಯಿ ಹೋರಾಟ ಸಮಿತಿ ಸದಸ್ಯ ರಮೇಶ ನಾಯ್ಕರ ಆಗ್ರಹಿಸಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 664ನೇ ದಿನವಾದ ಮಂಗಳವಾರ  ಮಾತನಾಡಿದರು.

ತಮ್ಮ ಬದುಕಿಗೆ ಆಸರೆಯಾದ ಮಲಪ್ರಭೆಗಾದರೂ ಬೆಲೆ ನೀಡಬೇಕು. ಸರ್ಕಾರಗಳು, ಜಿಲ್ಲಾ ಉಸ್ತುವಾರಿ ಸಚಿವರು ಮಲಪ್ರಭೆ ನೆಚ್ಚಿಕೊಂಡು ಸಹಸ್ರಾರು ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಗದಗ ಜಿಲ್ಲೆಯಲ್ಲಿ ಆರಂಭಿಸಿದೆ. ಆದರೆ, ಆ ಯೋಜನೆಗೆ ಈಗಿರುವ ಮಲಪ್ರಭೆ ಒಡಲು ಸಾಲದು. ಆದ್ದರಿಂದ ಮಹಾದಾಯಿ ಅನುಷ್ಠಾನ ಮಾಡಿ ಮಲಪ್ರಭೆ ಒಡಲು ತುಂಬಿಸಲು ಪ್ರಾಮಾಣಿಕ ಪ್ರಯತ್ನ ಅಗತ್ಯವಾಗಿದೆ ಎಂದು ನಾಯ್ಕರ ಪ್ರತಿಪಾದಿಸಿದರು.

ಮಹಾದಾಯಿ ಹೋರಾಟ ಸಮಿತಿ ಸದಸ್ಯೆ ಅನಸವ್ವ ಶಿಂಧೆ, ನಮಗೆ ಬೆಲೆ ಇಲ್ಲವೋ, ನಾವು ನೀಡಿದ ಮತಕ್ಕೆ ಬೆಲೆ ಇಲ್ಲವೋ ಒಂದು ತಿಳಿಯದಾಗಿದೆ. 700 ದಿನಗಳು ಸಮೀಪಿಸಿ ದಾಖಲೆ ಬರೆದ ಹೋರಾಟವನ್ನು ತೀವ್ರ ಅಸಡ್ಡೆಯಿಂದ ನೋಡುವ ಉಭಯ ಸರ್ಕಾರಗಳಿಗೆ ರೈತರ ಉದ್ದಾರ ಬೇಕಿಲ್ಲ. ಅವರಿಗೆ ಅಧಿಕಾರ, ಖುರ್ಚಿಯೊಂದೆ ಬೇಕಾಗಿದೆ. ರಾಜಕೀಯ ಸ್ವಾರ್ಥ ಹೇಳತೀರದಾಗಿದೆ. ಇದೇ ಧೋರಣೆ ಮುಂದುವರೆದರೆ ಚುನಾವಣೆಯಲ್ಲಿ ತಕ್ಕ ಪಾಠ ನಿಶ್ಚಿತ ಎಂದರು.

ADVERTISEMENT

ಸದಸ್ಯೆ ಚಂದ್ರಗೌಡ ಪಾಟೀಲ ಮಾತನಾಡಿ ಮಹಾದಾಯಿ ಜಾರಿ ಮಾಡದಿದ್ದರೆ  ಮುಂದಿನ ದಿನಗಳು ಬಹಳ ಸಂಕಷ್ಟವಾಗುತ್ತಿವೆ.  ರೈತರು ಮಲಪ್ರಭೆ, ಮಹಾದಾಯಿ ನಂಬಿದ್ದಾರೆ. ಇದನ್ನರಿತು ಮಹಾದಾಯಿ ಜಾರಿಗೆ ಮುಂದಾಗುವಂತೆ ಸಂಸದರಿಗೆ ಒತ್ತಾಯಿಸಿದರು.

ರಾಘವೇಂದ್ರ ಗುಜಮಾಗಡಿ,  ವೀರಣ್ಣ ಸೊಪ್ಪಿನ, ವಾಸು ಚವ್ಹಾಣ, ಎಸ್‌.ಕೆ.ಗಿರಿಯಣ್ಣವರ, ಕೆ.ಎಚ್‌.ಮೊರಬದ, ಎಲ್.ಬಿ.ಮುನೇನಕೊಪ್ಪ, ಜಗನ್ನಾಥ ಮುಧೋಳೆ, ಚನ್ನಬಸವ್ವ ಆಯಟ್ಟಿ, ರತ್ನವ್ವ  ಸವಳಭಾವಿ, ಚನ್ನಪ್ಪಗೌಡ ಪಾಟೀಲ, ಯಲ್ಲಪ್ಪ ಚಲುವಣ್ಣವರ, ರಾಯವ್ವ ಕಟಗಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.