ADVERTISEMENT

ಗಟಾರ ಸೇರಿದ ಕುಡಿಯವ ನೀರು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:21 IST
Last Updated 16 ಏಪ್ರಿಲ್ 2017, 10:21 IST

ರೋಣ: ಜನ ಜಾನುವಾರುಗಳಿಗೆ ಕುಡಿಯುವ ಉದ್ದೇಶದಿಂದ ಮಲಪ್ರಭಾ ಜಲಾಶಯದಿಂದ ಹರಿಸಿದ ನೀರು ಕೆರೆ ತುಂಬುವ ಬದಲಾಗಿ ಕಾಲುವೆಗೆ ಹರಿದು ವ್ಯರ್ಥವಾಯಿತು.
ಕಳೆದ 7ರಿಂದ ಪ್ರತಿದಿನ 200 ಕ್ಯೂಸೆಕ್‌ ನೀರನ್ನು ಕಾಲುವೆಗೆ ಹರಿ ಬಿಡಲಾಗಿತ್ತು. ಪಟ್ಟಣದ ಹೊಸ ಸಂತೆ ಬಜಾರ್ ಬಳಿಯ ಕೆರೆ ತುಂಬಿಸಲು ಶನಿವಾರ ಬೆಳಿಗ್ಗೆ ಸಿದ್ಧತೆ ನಡೆದಿತ್ತು. ಕಾಲುವೆ ನೀರು ದೊಡ್ಡ ಗಟಾರ ಮೂಲಕ ಕೆರೆ ಸೇರಬೇಕಿತ್ತು. ಅದಕ್ಕೆ ಪೂರಕವಾಗಿ ಕಾಲುವೆ ಸ್ವಚ್ಛಗೊಳಿಸಲು ಪುರಸಭೆ ಮುಖ್ಯಾಧಿಕಾರಿಗೆ ತಹಶೀಲ್ದಾರ್ ಶಿವಲಿಂಗ ಪ್ರಭುವಾಲಿ ಸೂಚನೆ ನೀಡಿದ್ದರು. ಆದರೆ ಪುರಸಭೆ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೃಷ್ಣಾಪುರ ಬಳಿಯ ಕಾಲುವೆಯಿಂದ ನೀರು ಗಟಾರ ಸೇರಿ ವ್ಯರ್ಥವಾಯಿತು.

ಮಧ್ಯಾಹ್ನದ ಹೊತ್ತಿಗೆ ವಿಷಯ ತಿಳಿದ ಮುಖ್ಯಾಧಿಕಾರಿ, ತಕ್ಷಣವೇ ಗಟಾರ್ ಸ್ವಚ್ಛಗೊಳಿಸಲು ಕ್ರಮ ಕೈಗೊಂಡರು.ಸತತ ಬರಗಾಲದ ಪರಿಸ್ಥಿತಿಯಿಂದ ತತ್ತರಿಸಿರುವ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ನೀರಿಲ್ಲದೆ ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ. ಸನ್ನಿವೇಶದ ಅರಿವಿದ್ದರೂ ಪುರಸಭೆ ಅಧಿಕಾರಿಗಳ ನಿರಾಸಕ್ತಿಯಿಂದ ನೀರು ವ್ಯರ್ಥವಾಯಿತು ಎಂದು ಸ್ಥಳೀಯರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT