ADVERTISEMENT

‘ಚಿನ್ನ, ಕಬ್ಬಿಣ ತಿಂದರೆ ಹೊಟ್ಟೆ ತುಂಬುವುದಿಲ್ಲ’

ಕಪ್ಪತಗುಡ್ಡ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಗಳಿಂದ ಬೆಂಬಲ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:55 IST
Last Updated 21 ಜನವರಿ 2017, 5:55 IST
ಗದುಗಿನ ತೋಂಟದಾರ್ಯ ಮಠದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಮಾತನಾಡಿದರು. ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಇದ್ದಾರೆ
ಗದುಗಿನ ತೋಂಟದಾರ್ಯ ಮಠದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಮಾತನಾಡಿದರು. ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಇದ್ದಾರೆ   

ಗದಗ: ಕೋಲಾರದಲ್ಲಿ ಗಣಿಗಾರಿಕೆ ಬಂದಾದ ನಂತರ ಸರ್ಕಾರ, ಗದುಗಿನ ಕಪ್ಪತಗುಡ್ಡದಲ್ಲಿ ಚಿನ್ನ, ಕಬ್ಬಿಣ ಅದಿರು ಸೇರಿದಂತೆ ಅಪಾರ ಪ್ರಮಾಣದ     ಖನಿಜ ಸಂಪತ್ತು ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸ್ಥಾನಮಾನವನ್ನು ವಾಪಸ್‌ ಪಡೆದಿರುವುದು ಸರಿಯಾದ ನಿರ್ಧಾರವಲ್ಲ. ಚಿನ್ನ, ಕಬ್ಬಿಣ ತಿಂದರೆ ಹೊಟ್ಟೆ ತುಂಬುವುದಿಲ್ಲ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ಸರ್ಕಾರ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ನಾಶದಿಂದ ಮಳೆ ಕೊರತೆ ಉಂಟಾಗಿದೆ. ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ಗಿಡಗಳನ್ನು ನಡೆಲು ಖರ್ಚು ಮಾಡುತ್ತಿದೆ. ಆದರೆ ಸಾವಿರಾರು ಅಮೂಲ್ಯವಾದ ಸಸಿಗಳನ್ನು ಹೊಂದಿರುವ ಕಪ್ಪತಗುಡ್ಡ ಸಂರಕ್ಷಣೆ ಮಾಡುವ ವಿಚಾರದಲ್ಲಿ ತಾರಮ್ಯ ಮಾಡುತ್ತಿರುವುದು ಸರಿಯಲ್ಲ. ಪರಿಸರವನ್ನು ದುರ್ಬಳಕೆ ಮಾಡುವ ಉದ್ದೇಶದಿಂದ ಕಪ್ಪತಗುಡ್ಡಕ್ಕೆ ನೀಡಿದ್ದ ಸ್ಥಾನಮಾನವನ್ನು ಹಿಂಪಡೆದಿರುವುದು ದುರ್ದೈವದ ಸಂಗತಿ.

ಕೂಡಲೇ ಸರ್ಕಾರ ಜೀವ ವೈದ್ಯತೆ ಉಳಿಸಲು, ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಹಾಗೂ ಪರಿಸರ ಸಮತೋನದ ದೃಷ್ಟಿಯಿಂದ ಕಪ್ಪತಗುಡ್ಡಕ್ಕೆ ಈ ಹಿಂದೆ ನೀಡಿದ್ದ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸ್ಥಾನಮಾನವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ ಅವರು, ಈಗಾಗಲೇ ಕಪ್ಪತಗುಡ್ಡ ಸಂರಕ್ಷಣೆಗಾಗಿ ಅನೇಕ ಹೋರಾಟಗಳು ನಡೆದಿವೆ. ಈ ನಿಟ್ಟಿನಲ್ಲಿ ಸಿದ್ಧಲಿಂಗ ಸ್ವಾಮೀಜಿ ಆರಂಭಿಸಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಶೇ 33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಶೇ 7 ರಷ್ಟು ಮಾತ್ರ ಅರಣ್ಯ ಇದೆ. ಪ್ರತಿಕೃತಿಯನ್ನು ಕೆಟ್ಟ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬಾರದು. ಜೀವ ವೈದ್ಯತೆ ಉಳಿಯದಿದ್ದರೆ, ಜನ ಜೀವನ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಎಲ್ಲರು ಪರಸರ ಸ್ನೇಹಿ ಜೀವನ ನಡೆಸಬೇಕು. ಜತೆಗೆ ಪರಿಸರ ಸಂರಕ್ಷಣೆ ಕುರಿತು ಸರ್ಕಾರ ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.

ರಾಮಾಯಣ ದರ್ಶನಂ, ಕಾನೂನು ಹೆಗ್ಗಡತಿ ಸೇರಿದ ವಿವಿಧ ಕೃತಿಗಳನ್ನು ಬರೆದಿರುವ ಕುವೆಂಪು ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ. ಅವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ನೋಬೆಲ್‌ ಪ್ರಶಸ್ತಿ ನೀಡಬೇಕಾಗಿತ್ತು ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

‘ಕಪ್ಪತಗುಡ್ಡವನ್ನು ಮೀಸಲು ಅರಣ್ಯ ಮಾಡಿ’
ಲಕ್ಷ್ಮೇಶ್ವರ: ಅನೇಕ ಉಪಯುಕ್ತ ಗಿಡಮೂಲಿಕೆ ಔಷಧ ಸಸ್ಯ ಹಾಗೂ ಪ್ರಾಣಿ ಪಕ್ಷಿಗಳಿಂದ ಶ್ರೀಮಂತವಾಗಿರುವ ಜಿಲ್ಲೆಯ ಕಪ್ಪತಗುಡ್ಡವನ್ನು ಮೀಸಲು ಅರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡಬೇಕು ಎಂದು ರಾಜ್ಯ ಮಾದರ ಹರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ನಂದೆಣ್ಣವರ ಆಗ್ರಹಿಸಿದರು.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಕಪ್ಪತಗುಡ್ಡ ಈ ಭಾಗದ ಸಹ್ಯಾದ್ರಿ ಪರ್ವತ ಶ್ರೇಣಿ ಇದ್ದಂತೆ. ಅದು ಇಲ್ಲಿ ಇರುವುದರಿಂದ ಈ ಭಾಗದಲ್ಲಿ ಸ್ವಲ್ಪವಾದರೂ ಮಳೆ ಆಗುತ್ತದೆ.

ಅಲ್ಲದೆ ಗುಡ್ಡದಲ್ಲಿ ನೂರಾರು ಜಾತಿಯ ಆಯುರ್ವೇದ ಸಸ್ಯಗಳು ಇವೆ. ಇವುಗಳಿಂದ ಮನುಷ್ಯನ ಪ್ರಾಣ ಉಳಿಸಬಹುದು. ಹೀಗಾಗಿ ಸರ್ಕಾರ ಕಪ್ಪತಗುಡ್ಡವನ್ನು ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.