ADVERTISEMENT

ಜಿಲ್ಲೆಯಲ್ಲಿ ಮೂರು ಯಾತ್ರಿ ನಿವಾಸ

ಪ್ರವಾಸಿ ತಾಣ ಅಭಿವೃದ್ಧಿಗೆ ₨ 1.75 ಕೋಟಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 6:12 IST
Last Updated 28 ನವೆಂಬರ್ 2014, 6:12 IST

ಗದಗ: ಪ್ರಸಿದ್ಧ ಪ್ರವಾಸಿ ಸ್ಥಳ ಡಾ.ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದ ಸೇರಿದಂತೆ ಜಿಲ್ಲೆಯ ಮೂರು ಕಡೆ ಯಾತ್ರಿನಿವಾಸ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

2014–15ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ₨ 1.75 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಿತು. ಮೊದಲ ಹಂತವಾಗಿ ₨ 1 ಕೋಟಿ ಬಿಡುಗಡೆಗೆ ಒಪ್ಪಿಗೆ ದೊರೆತಿದೆ.

ರೋಣ ತಾಲ್ಲೂಕಿನ ಗಜೇಂದ್ರಗಡ ಪಟ್ಟಣಕ್ಕೆ 4 ಕಿ.ಮೀ. ದೂರದಲ್ಲಿರುವ ಕಾಲಕಾಲೇಶ್ವರ ದೇವಸ್ಥಾನದ ಬಳಿ ಪ್ರವಾಸಿಗರ ಮೂಲಸೌಲಭ್ಯಕ್ಕೆ ₨ 35 ಲಕ್ಷ , ರೋಣ ತಾಲ್ಲೂಕಿನ ಕಾಳಿಕಾದೇವಿ ದೇವಸ್ಥಾನ, ಗಜೇಂದ್ರಗಡದ ವಿಜಯ ಮಹಾಂತ ಸ್ವಾಮೀಜಿ ಮಠ ಹಾಗೂ ವೀರೇಶ್ವರ ಪುಣ್ಯಾಶ್ರಮದ ಸಮೀಪ ತಲಾ ₨ 35 ಲಕ್ಷ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುವುದು. ಗದಗ ತಾಲ್ಲೂಕಿನ ಕುಮಾರವ್ಯಾಸನ ಜನ್ಮಸ್ಥಳ ಕೋಳಿವಾಡ ಹಾಗೂ ವೀರ ನಾರಾಯಣ ದೇವಾಲಯ ಪ್ರದೇಶದಲ್ಲಿ ₨ 20 ಲಕ್ಷ ವೆಚ್ಚದಲ್ಲಿ ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ.

ಅದೇ ರೀತಿ ಗಜೇಂದ್ರಗಡದ ಸುಮಾರು 300 ಅಡಿ ಎತ್ತರದ ಗುಡ್ಡದಲ್ಲಿ ಇರುವ ಕಾಲಕಾಲೇಶ್ವರ ದೇವಸ್ಥಾನದ ಜಾತ್ರೆ, ಅಮಾವಾಸ್ಯೆ, ಹುಣ್ಣಿಮೆ ಹಾಗೂ ವಿಶೇಷ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ  ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗಾಗಿ ₨ 35 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲಾಗುವುದು.

ಈಗಾಗಲೇ ₨ 1.98 ಕೋಟಿ ವೆಚ್ಚದಲ್ಲಿ ಐತಿಹಾಸಿಕ ಲಕ್ಕುಂಡಿ ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೇ ‘ಗದುಗಿನ ಮಹಾಭಾರತ’ ಬರೆಯಲು ಕವಿ ಕುಮಾರವ್ಯಾಸನಿಗೆ ಸ್ಪೂರ್ತಿ ನೀಡಿದ ವೀರನಾರಾಯಣ ಗುಡಿಗೆ ಇಲಾಖೆ ವತಿಯಿಂದ ಕುಡಿಯುವ ನೀರಿನ ಸೌಲಭ್ಯ ಹಾಗೂ ಶೌಚಾಲಯ ನಿರ್ಮಿಸಿ ದೇವಸ್ಥಾನದ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ ಪ್ರಭಾರ ಪ್ರವಾಸಿ ಅಧಿಕಾರಿ ಪಿ.ಸಿ.ಕಲಾಲ, ‘ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಯಾದ ಬಳಿಕ ನಿರ್ಮಿತಿ ಕೇಂದ್ರದವರು ಕಾಮಗಾರಿ ಆರಂಭಿಸಲಿದ್ದಾರೆ’ ಎಂದು ತಿಳಿಸಿದರು.

‘ಪ್ರವಾಸಿ ಸ್ಥಳಗಳ ಬಳಿ ಕಾಮಗಾರಿ ಆರಂಭಿಸುವ ಮುನ್ನ ಸಂಬಂಧಪಟ್ಟ ಸಮಿತಿ ಸದಸ್ಯರ ಜತೆ ಚರ್ಚಿಸಿ ಸದಸ್ಯರ ಸಲಹೆ ಮತ್ತು ಸೂಚನೆ ಪಡೆದು ಪ್ಲಾನ್‌ ಸಿದ್ದಪಡಿಸಲಾಗುವುದು. ಅಂದಾಜು ಪಟ್ಟಿ ಸಲ್ಲಿಸಿ ಒಪ್ಪಿಗೆ ಪಡೆದು ಕೊಳ್ಳ ಲಾಗುವುದು’ ಎಂದು ಗದಗ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ  ಜಿ.ವಿ.ಶಿರೋಳ, ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.