ADVERTISEMENT

ದಶಕ ಕಳೆದರೂ ಇಲ್ಲ ವಸತಿ ಭಾಗ್ಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 6:20 IST
Last Updated 9 ನವೆಂಬರ್ 2017, 6:20 IST
ಕಳಸಾಪುರದ ಕೆಎಚ್‌ಬಿ ಬಡಾವಣೆಯ ಮಾದರಿ ಮನೆಗಳು
ಕಳಸಾಪುರದ ಕೆಎಚ್‌ಬಿ ಬಡಾವಣೆಯ ಮಾದರಿ ಮನೆಗಳು   

ಗದಗ: ಮುಳಗುಂದ ರಸ್ತೆಯ ಕಳಸಾಪುರದಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ನಿರ್ಮಿಸಿದ ಮಾದರಿ ಮನೆಗಳನ್ನು ಖರೀದಿಸಿದವರಿಗೆ ಒಂದು ದಶಕ ಕಳೆದರೂ ಅದರಲ್ಲಿ ವಾಸಿಸುವ ಭಾಗ್ಯ ಲಭಿಸಿಲ್ಲ. ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಸೇರಿದಂತೆ ಪ್ರಾಥಮಿಕ ಸೌಲಭ್ಯಗಳು ಇಲ್ಲವಾದ್ದರಿಂದ, ಈ ಮನೆಗಳಲ್ಲಿ ವಾಸಿಸಲು ಫಲಾನುಭವಿಗಳು ಹಿಂದೇಟು ಹಾಕಿದ್ದಾರೆ. ಸದ್ಯ ಇಡೀ ಬಡಾವಣೆಯ ತುಂಬ ಜಾಲಿ ಮುಳ್ಳಿನ ಗಿಡಗಳು ಬೆಳೆದಿದ್ದು ವಾಸಯೋಗ್ಯವಲ್ಲದ ಸ್ಥಳವಾಗಿ ಬದಲಾಗಿದೆ.

ಬಡಾವಣೆಯನ್ನು ಸ್ವಚ್ಚಗೊಳಿಸಿ, ಮೂಲಸೌಕರ್ಯ ಒದಗಿಸಿಕೊಡಿ ಎಂದು ಇಲ್ಲಿನ 40 ಮಾದರಿ ಮನೆಗಳ ಮಾಲೀಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಕಳ್ಳರ ಪಾಲಾದ ಕಿಟಕಿ, ಬಾಗಿಲು: ಪೂರ್ಣ ಬೆಲೆ ಆಧಾರದಲ್ಲಿ 2006ರಲ್ಲಿ ‘ಕೆಎಚ್‌ಬಿ’ ಈ ಮನೆಗಳನ್ನು ಹಂಚಿಕೆ ಮಾಡಿತ್ತು. ಆರಂಭದಲ್ಲಿ ನಾಲ್ಕೈದು ಕುಟುಂಬಗಳು ಇಲ್ಲಿ ವಾಸವಿದ್ದವು. ಆದರೆ, ನಂತರ ಮೂಲ ಸೌಕರ್ಯದ ಕೊರತೆಯಿಂದಾಗಿ ಎಲ್ಲರೂ ದೂರ ಉಳಿದರು. ಸದ್ಯ ಇಲ್ಲಿನ ಬಹುತೇಕ ಮನೆಗಳ ಕಿಟಕಿ, ಬಾಗಿಲು, ಕಬ್ಬಿಣದ ಸರಳು, ಚಪ್ಪಡಿ ಕಲ್ಲು, ಅಡುಗೆ ಮನೆಯ ಸಿಂಕ್‌, ಫ್ಯಾನ್‌, ಶೌಚಾಲಯದಲ್ಲಿ ಅಳವಡಿಸಿದ್ದ ಪೈಪ್‌ ಸೇರಿ ಎಲ್ಲ ವಸ್ತುಗಳು ಕಳ್ಳರ ಪಾಲಾಗಿವೆ. ಕೆಲ ಮನೆಗಳ ಗೋಡೆಗಳು ಮಾತ್ರ ಉಳಿದಿವೆ.

ಕೆಎಚ್‌ಬಿ’ ಅಭಿವೃದ್ಧಿಪಡಿಸಿರುವ ರಾಜ್ಯದ ದೊಡ್ಡ ವಸತಿ ಬಡಾವಣೆಗಳಲ್ಲಿ ಇದೂ ಒಂದು. 360 ಏಕರೆ ವಿಸ್ತೀರ್ಣದ ಈ ಬಡಾವಣೆಯಲ್ಲಿ 4,500ಕ್ಕೂ ಹೆಚ್ಚು ನಿವೇಶನಗಳಿವೆ. ‘ಮಧ್ಯಮ ವರ್ಗದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟು, ಆ ಮೂಲಕ ರಾಜ್ಯಕ್ಕೆ ಮಾದರಿ ಆಗಬೇಕಿದ್ದ ಈ ಬಡಾವಣೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಸಯೋಗ್ಯವಲ್ಲದ ಸ್ಥಳವಾಗಿ ಬದಲಾಗಿದೆ. ಆಭರಣ ಒತ್ತೆ ಇಟ್ಟು, ಬ್ಯಾಂಕ್‌ ಸಾಲ, ಕೈ ಸಾಲ ಮಾಡಿ, ಪೂರ್ಣ ಬೆಲೆ ಆಧಾರದ ಮೇಲೆ ಇಲ್ಲಿ ಮನೆಗಳನ್ನು ಖರೀದಿಸಿದ ನಾವು ಈಗ ತೊಂದರೆಗೆ ಸಿಲುಕಿದ್ದೇವೆ’ ಎಂದು ಮನೆ ಮಾಲೀಕರು ಅಳಲು ತೋಡಿಕೊಂಡರು.

ADVERTISEMENT

‘ಗ್ರಾಹಕರಿಂದ ಸಂಪೂರ್ಣ ಹಣ ಪಡೆದ ನಂತರ ‘ಕೆಎಚ್‌ಬಿ’ದವರು ಒಮ್ಮೆಯೂ ಇತ್ತ ತಿರುಗಿ ನೋಡಿಲ್ಲ. ಮೂಲಸೌಕರ್ಯ ಕಲ್ಪಿಸಿ ಎಂದು ಕಳೆದೊಂದು ದಶಕದಿಂದ ನಿರಂತರವಾಗಿ ‘ಕೆಎಚ್‌ಬಿ’ಗೆ ಮನವಿ ಮಾಡುತ್ತಿದ್ದೇವೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈಗ ಅಂತಿಮವಾಗಿ ಜಿಲ್ಲಾಡಳಿತದ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದೇವೆ’ ಎಂದು ಇಲ್ಲಿನ ಮಾದರಿ ಮನೆಗಳ ಮಾಲೀಕರ ಸಂಘದ ಮಾರುತಿ ಸಿದ್ದಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೀವಮಾನದ ದುಡಿಮೆಯ ಹಣವನ್ನೆಲ್ಲಾ ಸೇರಿಸಿ ಇಲ್ಲಿ ಮನೆ ಖರೀದಿಸಿದೆವು. ಇದಕ್ಕಾಗಿ ಬ್ಯಾಂಕ್ ಸಾಲ ಮಾಡಿಕೊಂಡಿದ್ದೇವೆ. ಬಡ್ಡಿ ತುಂಬಿದ್ದೇವೆ. ಆದರೆ, ಖರೀದಿಸಿದ ಮನೆಯಲ್ಲಿ ಒಂದು ದಿನವೂ ವಾಸಿಸಲು ಆಗದೆ, ಈಗಲೂ ಬಾಡಿಗೆ ಮನೆಗಳಲ್ಲೇ ವಾಸಿಸುತ್ತಿದ್ದೇವೆ. ಇಲ್ಲಿ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಮನೆ ಮಾಲೀಕರಾದ ಎಚ್‌.ಆರ್‌ ಪಾಟೀಲ, ಎಂ.ಎಸ್‌. ಚಳಗೇರಿ, ಜಿ.ಬಿ ವಾಲ್ಮೀಕಿ, ವಿ.ಎನ್‌ ಹಿರೇಗೌಡರ, ಎಂ.ಎಸ್‌. ಕೆಂಬಾವಿಮಠ, ರಮೇಶ ಬಸಪ್ಪ ಭಜಂತ್ರಿ ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ‘ಕೆಎಚ್‌ಬಿ’ ಗದಗನ ಕಾರ್ಯನಿರ್ವಾಹಕ ಎಂಜಿನಿಯರ್‌ ಮೆಣಸಗಿ, ‘ಬಡಾವಣೆಯಲ್ಲಿ ಈಗಾಗಲೇ ಮೂಲಸೌಕರ್ಯ ಒದಗಿಸಿ, ಕಳಸಾಪುರ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗಿದೆ. ಮನೆ ಖರೀದಿಸಿದವರಲ್ಲಿ ಹೆಚ್ಚಿನವರು ಜಿಲ್ಲೆಯ ಹೊರಗಿನವರು. ಜನ ವಸತಿ ಇಲ್ಲದೇ ಬಡಾವಣೆ ಪಾಳುಬಿದ್ದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.