ADVERTISEMENT

‘ನಾಡು ನುಡಿಗೆ ಕಸಾಪ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 17 ಮೇ 2017, 8:32 IST
Last Updated 17 ಮೇ 2017, 8:32 IST

ಗಜೇಂದ್ರಗಡ:‘ಕನ್ನಡ ಭಾಷೆ  ಮತ್ತು ಅದರ ಸರ್ವತೋಮುಖ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರ’ ಎಂದು ನಿವೃತ್ತ ಉಪನ್ಯಾಸಕ ಬಿ.ಎ.ಕೆಂಚರೆಡ್ಡಿ ಹೇಳಿದರು. ಪಟ್ಟಣದ ಮೈಸೂರುಮಠದಲ್ಲಿ ಕಸಾಪ ತಾಲ್ಲೂಕ ಘಟಕ ಹಾಗೂ ನಗರ ಘಟಕಗಳ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕಸಾಪ 102 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘1915 ರಲ್ಲಿ ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪಿತ­ಗೊಂಡಿತು. 1938ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ­ಗೊಂಡಿತು. ಇಂದಿನವರೆಗೂ  ಕನ್ನಡದ ನಾಡು, ನುಡಿ ಸಂರಕ್ಷಣೆ ಮಾಡುತ್ತಾ ಬಂದಿದೆ’ ಎಂದರು.

ಕಸಾಪ ತಾಲ್ಲೂಕ ಅಧ್ಯಕ್ಷ ಐ. ಎ. ರೇವಡಿ, ಕೆ.ಎಸ್. ಗಾರವಾಡ ಹಿರೇಮಠ ಮಾತನಾಡಿದರು. ಶರಣಮ್ಮ ಅಂಗಡಿ, ಬಿ.ಟಿ.ಹೊಸಮನಿ, ಎಸ್ ಎಂ. ಬದಾಮಿ, ದಾವಲಸಾಬ ತಾಳಿಕೋಟಿ, ಎಸ್. ಎಂ. ಅಗಸಿಬಾಗಿಲ, ಶಂಕರ ಕಲ್ಲಿಗನೂರು, ಬಸವರಾಜ ಬಸನ ಗೌಡರ, ಎಸ್. ಎಸ್. ನರೇಗಲ್ಲ ಇದ್ದರು.

ADVERTISEMENT

2017ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಶಾಹೀನತಾಜ್ ರೋಣದ, ನಿವೇದಿತಾ ಗಡಾದ, ಮಣಿಕಂಠ ದಾಸರ, ಐಶ್ವರ್ಯ ಕಡಬಲಕಟ್ಟಿ, ವಿಶ್ವನಾಥ ಲಮಾಣಿ, ಮುಶಿದಾ ಚಿಕೆನಕೊಪ್ಪ, ಜಯಶ್ರೀ ಗಡ­ದಪ್ಪನವರ, ಸಿಂಧು ಜೂಚನಿ, ಸಿಮ್ರಾನ್ ದಲಬಂಜನ, ಸಾಗರ ಕರಮುಡಿ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಅಧ್ಯಕ್ಷರ ವಿರುದ್ಧ ಅಸಮಾಧಾನ

‘ರೋಣ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕ ಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ನಗರ ಘಟಕದ ಅಧ್ಯಕ್ಷ ಗುರಪ್ಪ ವಡ್ಡರ ಆರೋಪಿಸಿದ್ದಾರೆ.

‘ಕಸಾಪ ಸಂಸ್ಥಾಪನಾ ದಿನಾಚರಣೆಯ ಬಗ್ಗೆ ಪಟ್ಟಣದ ಕಸಾಪ ಸದಸ್ಯರ ಗಮನಕ್ಕೆ ತರದೆ ತಮಗೆ ತಿಳಿದಂತೆ ತಾವೇ ಅಧ್ಯಕ್ಷತೆ ವಹಿಸಿಕೊಳ್ಳುತ್ತಾರೆ. ಆಮಂತ್ರಣ ಪತ್ರಿಕೆಯಲ್ಲಿ ನಗರ ಘಟಕವನ್ನಾಗಲಿ, ಮಹಿಳಾ ಘಟಕವನ್ನಾಗಲಿ ಗಣನೆಗೆ ತೆಗೆದುಕೊಂಡಿಲ್ಲ’ ಎಂದು ಗುರಪ್ಪ ದೂರಿದ್ದಾರೆ. ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.