ADVERTISEMENT

‘ನೀರು ಬಿಡಿಸ್ತಾರ, ಪರಿಹಾರ ಕೊಡಸೊಲ್ಲ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 7:41 IST
Last Updated 28 ನವೆಂಬರ್ 2017, 7:41 IST
ಭೂ ಪರಿಹಾರಕ್ಕೆ ಆಗ್ರಹಿಸಿ ಮುಂಡರಗಿ ತಾಲ್ಲೂಕು ಡಂಬಳದ ರೈತರು ಹೂವಿನ ಹಡಗಲಿ ಸಿಂಗಟಾಲೂರು ಏತ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಭೂ ಪರಿಹಾರಕ್ಕೆ ಆಗ್ರಹಿಸಿ ಮುಂಡರಗಿ ತಾಲ್ಲೂಕು ಡಂಬಳದ ರೈತರು ಹೂವಿನ ಹಡಗಲಿ ಸಿಂಗಟಾಲೂರು ಏತ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಎಡದಂಡೆ ಭಾಗದಲ್ಲಿ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಭೂ ಪರಿಹಾರ ನೀಡುವಂತೆ ಆಗ್ರಹಿಸಿ ಮುಂಡರಗಿ ತಾಲ್ಲೂಕು ಡಂಬಳ ಗ್ರಾಮದ ರೈತರು ಸೋಮವಾರ ಇಲ್ಲಿನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಟ್ಟಣದ ಸಿಂಗಟಾಲೂರು ಯೋಜನೆ ವಿಭಾಗೀಯ ಕಚೇರಿಗೆ ಕೆಲಕಾಲ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ರೈತರು, ಉಪ ವಿಭಾಗ ಕಚೇರಿಯಲ್ಲಿದ್ದ ಎಂಜಿನಿಯರ್ ಸದಾಶಿವ ನಾಯ್ಕ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಐದು ವರ್ಷದಿಂದ ನಿಮ್ಮ ಕಚೇರಿಗೆ ಅಲೆದು ಚಪ್ಪಲಿ ಹರಿದು ಹೊಗ್ಯಾವು. ನಾವೇನು ನಿಮ್ಮ ಬಳಿ ಸಾಲ ಕೇಳ್ತಾ ಇಲ್ಲ. ನೀರಾವರಿ ಯೋಜನೆಗೆ ಉಳಮೆ ಮಾಡೋ ಹೊಲ ಕಳೆದುಕೊಂಡೀವಿ ಪರಿಹಾರ ಕೊಡಿ’ ಎಂದು ಆಗ್ರಹಿಸಿದರು.

ADVERTISEMENT

‘ದೋಣಿ, ವಡ್ಡಟ್ಟಿ, ಮೇವುಂಡಿ ಭಾಗದ ರೈತರಿಗೆ ಆಗಲೇ ಪರಿಹಾರ ವಿತರಿಸಲಾಗಿದೆ. ಡಂಬಳ ಗ್ರಾಮದ 85 ರೈತರ 74 ಎಕರೆಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಕಚೇರಿಗೆ ಬಂದಾಗಲೆಲ್ಲಾ ಬರೀ ಸಬೂಬು ಹೇಳುತ್ತಿದ್ದಾರೆ’ ಎಂದು ರೈತರು ದೂರಿದರು.

‘ರಾಜಕಾರಣಿಗಳು ಓಟಿನ ಆಸೆಕ್ಕಾ ನಮ್ಮ ಹೊಲ್ದಾಗಿನ ಕಾಲುವೆಯಿಂದ ಕೆರೆ, ಬಾಂದಾರಗಳಿಗೆ ನೀರು ಹರಿಸ್ಲಿಕ್ಕೆ ಶುರು ಮಾಡ್ಯಾರ. ಆದ್ರ, ಕಾಲುವೆಗಾಗಿ ಹೊಲ ಕಳ್ಕಂಡ ರೈತರ ಗೋಳು ಯಾರೂ ಕೇಳುವಳ್ರು. ಸಚಿವ ಎಚ್.ಕೆ.ಪಾಟೀಲ, ಶಾಸಕರಾದ ಜಿ.ಎಸ್.ಪಾಟೀಲ, ರಾಮಕೃಷ್ಣ ದೊಡ್ಡಮನಿ ತಮ್ಮ ಪ್ರತಿಷ್ಠೆಗಾಗಿ ಹಠಕ್ಕೆ ಬಿದ್ದು ನೀರು ಹರಿಸ್ತಾ ಇದ್ದಾರ. ಈ ಯೋಜನೆ ನಾವೇ ಮಾಡೀವಿ ಅಂತಾ ಭಾಷಣ ಕೂಡ ಮಾಡ್ತಾರ. ಹೊಲ ಕಳ್ಕಂಡವರಿಗೆ ಪರಿಹಾರ ಕೊಡಿಸ್ಲಿಕ್ಕೆ ಅವರು ಮುಂದೆ ಬರ್‍ತಾ ಇಲ್ಲ’ ಎಂದು ರೈತ ದೊಡ್ಡಪ್ಪ ಕಾಶಿಬೋವಿ ಆಕ್ರೋಶ ವ್ಯಕ್ತಪಡಿಸಿದರು.

‘ಇರುವ ಮೂರು ಎಕರೆ ಜಮೀನನ್ನು ಮಧ್ಯ ಸೀಳಿ ಕಾಲುವೆ ಮಾಡ್ಯಾರ. ಅಳಿದುಳಿದ ಭೂಮಿಯಲ್ಲಿ ವ್ಯವಸಾಯ ಮಾಡ್ಲಿಕ್ಕೆ ಆಗ್ತಾಯಿಲ್ಲ. ಇತ್ತ ಪರಿಹಾರವೂ ಇಲ್ಲ, ಅತ್ತ ಉಳುಮೆಗೆ ಹೊಲವೂ ಇಲ್ಲದೇ ಅತಂತ್ರರಾಗಿದ್ದೇವೆ’ ಎಂದು ಸುರೇಶ ಹಡಪದ ಅಳಲು ತೋಡಿಕೊಂಡರು.

‘ಭೂ ಪರಿಹಾರ ಕೊಡ್ಲಿಕ್ಕೆ ಹಣ ಇಲ್ಲ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಶಾಸಕರ ಮೃಷ್ಟಾನ್ನ ಭೋಜನಕ್ಕೆ ಕೋಟ್ಯಂತರ ಹಣ ಖರ್ಚು ಮಾಡಿರುವ ಸರ್ಕಾರಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಲು ಹಣ ಇಲ್ಲವೇ?’ ಎಂದು ರಾಜಶೇಖರ ಪಟ್ಟಣಶೆಟ್ಟಿ ಪ್ರಶ್ನಿಸಿದರು.

ಬುತ್ತಿಯೊಂದಿಗೆ ಬಂದಿದ್ದ ರೈತರು, ಪರಿಹಾರ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಕುಳಿತರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸದಾಶಿವ ನಾಯ್ಕ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ‘ಇಲ್ಲಿನ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಕಡತಗಳನ್ನು ಕಳಿಸಿಕೊಟ್ಟಿದ್ದೇವೆ. ಪರಿಹಾರ ಹಣ ಬಿಡುಗಡೆ ಮಾಡುವುದು ಮೇಲಧಿಕಾರಿಗಳ ಹಂತದಲ್ಲಿದೆ. ಕಾರ್ಯನಿರ್ವಾಹಕ ಎಂಜಿನಿಯರ್ ಮೇಲಧಿಕಾರಿಯ ಜತೆ ಮಾತನಾ ಡಿದ್ದಾರೆ. ತಿಂಗಳೊಳಗೆ ಪರಿಹಾರ ಹಣ ಬಿಡುಗಡೆ ಮಾಡುವುದಾಗಿ ಒಪ್ಪಿದ್ದಾರೆ’ ಎಂದು ಹೇಳಿದರು.

‘ಎಲ್ಲ ಸಂತ್ರಸ್ತ ರೈತರಿಗೆ ಭೂ ಪರಿಹಾರ ನೀಡಲು 15 ದಿನ ಗಡುವು ನೀಡುತ್ತೇವೆ. ವಿಳಂಬ ಮಾಡಿದರೆ ಕಾಲುವೆಗಳನ್ನು ಕಿತ್ತು ಹಾಕಿ ಜಮೀನನ್ನು ಉಳುಮೆಗೆ ಸಜ್ಜುಗೊಳಿಸುತ್ತೇವೆ’ ಎಂದು ಎಚ್ಚರಿಸಿ, ರೈತರು ಪ್ರತಿಭಟನೆಯನ್ನು ಕೈಬಿಟ್ಟರು.

ಡಂಬಳ ಗ್ರಾಮದ ರೈತರಾದ ಬಸಪ್ಪ ಹೊಸ್ಕೇರಿ, ತಿಪ್ಪಣ್ಣ ಹೊಸ್ಕೇರಿ, ಬೀರಪ್ಪ, ಸೋಮಪ್ಪ, ಗುರುಸಿದ್ದಪ್ಪ, ರೇವಣಪ್ಪ, ಯಲ್ಲಪ್ಪ, ಮಂಜುನಾಥ, ಮರಿಯಪ್ಪ ಹಳ್ಳಿಕೇರಿ, ದೇವಕ್ಕ ಬಿಸರಳ್ಳಿ, ಹನುಮವ್ವ ಬಾಚೇನಹಳ್ಳಿ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.