ADVERTISEMENT

ಪರಿವರ್ತನಾ ಯಾತ್ರೆಗೆ ಮುನ್ನ ನಿಲುವು ತಿಳಿಸಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 6:31 IST
Last Updated 6 ನವೆಂಬರ್ 2017, 6:31 IST

ನರಗುಂದ: ‘ಮಹದಾಯಿ ಕುರಿತು ಬಿಜೆಪಿ ನಾಯಕರಿಂದ ಬರಿ ಭರವಸೆ ಮಾತುಗಳೇ ಹೊರಬೀಳುತ್ತಿವೆ. ಈಗ ಹಮ್ಮಿಕೊಂಡಿರುವ ಪರಿವರ್ತನೆ ಯಾತ್ರೆ ನರಗುಂದ ನೆಲಕ್ಕೆ ಕಾಲಿರಿಸುವ ಮುನ್ನಬಿಜೆಪಿ ಮಹದಾಯಿ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು’ ಎಂದು ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್‌.ಬಿ.ಜೋಗಣ್ಣವರ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 844ನೇ ದಿನ ಭಾನುವಾರ ಅವರು ಮಾತನಾಡಿದರು. ‘ರಾಜ್ಯದ ಬಿಜೆಪಿ ಮುಖಂಡರಿಗೆ ಪ್ರಧಾನಿ ಮತ್ತು ಗೋವಾ ಮುಖ್ಯಮಂತ್ರಿ ಮನವೊಲಿಸಲು ಸಾಧ್ಯವಾಗುತ್ತಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ಇದ್ದರೆ, ಬಿಜೆಪಿ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದರು.

‘ಮಹದಾಯಿ ಹೋರಾಟ ರಾಜಕೀಯ ಪಕ್ಷಗಳಿಗೆ ಬೇಕಿಲ್ಲ. ಅವರು ಚುನಾವಣಾ ರಾಜಕೀಯದಲ್ಲಿ ಮುಳುಗಿದ್ದಾರೆ. ಜನರ ತೆರಿಗೆ ಹಣದಿಂದಯಾತ್ರೆ, ಸಮಾವೇಶ ಮಾಡುತ್ತಾ ಹೊರಟಿದ್ದಾರೆ. ರೈತರು ಈ ಕುತಂತ್ರವನ್ನುಅರಿಯಬೇಕು. ಚುನಾವಣೆಯಲ್ಲಿ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ಈರಣ್ಣ ಗಡಗಿಶೆಟ್ಟರ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪರಶುರಾಮ ಜಂಬಗಿ, ವೀರಬಸಪ್ಪ ಹೂಗಾರ, ಟಿ.ಬಿ.ತೆಗ್ಗಿನಮನಿ, ಮಗ್ದುಮ್‌ಸಾಬ್ ಸವಟಗಿ ಚನ್ನಬಸವ್ವ ಆಯಟ್ಟಿ, ಈರಣ್ಣ ಗಡಗಿಶೆಟ್ಟರ, ಹನಮಂತ ಸರನಾಯ್ಜರ, ಇಸ್ಮಾಯಿಲ್ ನಾಲಬಂದ, ಪುಂಡಲೀಕಪ್ಪ ಯಾದವ, ವೀರಣ್ಣ ಸೊಪ್ಪಿನ, ಎಂ.ಎಂ.ನಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.