ADVERTISEMENT

ಮರಳು ದಂಧೆ; ಶಾಸಕರ ಸಂಬಂಧಿಗಳು ಭಾಗಿ

ಗದುಗಿನಲ್ಲಿ ಫೆ.20ಕ್ಕೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ; ಮಾಜಿ ಸಚಿವ ಕಳಕಪ್ಪ ಬಂಡಿ ಆರೋಪ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:08 IST
Last Updated 18 ಫೆಬ್ರುವರಿ 2017, 10:08 IST
ಗದಗ: ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಮೂಲಕ ಮರಳು ತೆಗೆದು ಕೊಂಡು ಹೋಗುವವರನ್ನು ತಡೆಯುವ ಪೊಲೀಸರು, ಲಾರಿ ಮೂಲಕ ಪ್ರತಿನಿತ್ಯ 100ರಿಂದ 200 ಟ್ರಿಪ್‌ಗಳವರೆಗೆ ಹುಬ್ಬಳ್ಳಿಗೆ ಸಾಗಿಸುತ್ತಿದ್ದರೂ, ಅದನ್ನು ಈವರೆಗೂ ತಡೆಯಲು ಆಗುತ್ತಿಲ್ಲ. ಅಕ್ರಮ ಮರಳು ದಂಧೆಯಲ್ಲಿ ಆಡಳಿತದಲ್ಲಿರುವ ಜಿಲ್ಲೆಯ ಶಾಸಕರ ಕೆಲ ಸಂಬಂಧಿಗಳು ಹಾಗೂ ಅವರ ಮಕ್ಕಳು ಭಾಗಿ ಆಗಿದ್ದಾರೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಆರೋಪಿಸಿದರು.
 
ನಗರದಲ್ಲಿ ಶುಕ್ರವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪೊಲೀಸ್ ಠಾಣೆಗಳು, ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಪಕ್ಷದ ಏಜೆಂಟ ರಿಂದಲೇ ತುಂಬಿರುತ್ತವೆ. ಹೀಗಾಗಿ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿ ಗಳಾಗಿವೆ ಎಂದರು.
 
ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಹೋಬಳಿಗೊಂದು ಗೋಶಾಲೆ ತೆರೆಯುವ ಬಗ್ಗೆ ಸಚಿವರು ಮಾತನಾಡುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಇದುವರೆಗೆ ಒಂದೂ ಗೋಶಾಲೆಯನ್ನು ತೆರೆದಿಲ್ಲ. ಕೃಷಿ ಕಾರ್ಮಿಕರು ಕೆಲಸವಿಲ್ಲದೇ ಗುಳೆ ಹೋಗುತ್ತಿದ್ದಾರೆ. ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸಿದ ಈರುಳ್ಳಿಗೆ ನೀಡಬೇಕಾದ ಹಣ ಇನ್ನೂ ಕೊಟ್ಟಿಲ್ಲ. ಅದಕ್ಕಾಗಿ ರೈತರು ಅಲೆದಾಡುತ್ತಿದ್ದಾರೆ. ಈ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು, ಗದಗ–-ಬೆಟಗೇರಿ ಅವಳಿ ನಗರದಲ್ಲಿ ಸಮರ್ಪಕ ವಾಗಿ ಕುಡಿಯುವ ನೀರು ಪೂರೈಸದೇ ನೀರಿನ ದರ ಏರಿಕೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
 
ಗದಗ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರೇ ನೇರ ಹೊಣೆಯಾಗಿದ್ದಾರೆ. ಎಪಿಎಂಸಿ ಫಲಿತಾಂಶದ ಬಳಿಕ ಕುರ್ತಕೋಟಿ ಹಾಗೂ ಸೊರಟೂರು ಹಲ್ಲೆ ಪ್ರಕರಣಗಳೇ ಸಾಕ್ಷಿಯಾಗಿವೆ. ಶಿರಹಟ್ಟಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಮರಳು ದಂಧೆ ಬಗ್ಗೆ ಕೆಡಿಪಿ ಸಭೆಗಳಲ್ಲೂ ಪ್ರಸ್ತಾಪಿಸಲಾಗಿದೆ. ಅದಕ್ಕೂ ಮುಂಚೆಯೇ ಸೂಕ್ತ ಕ್ರಮ ಕೈಗೊಂಡಿದ್ದರೆ ಲಾರಿ ಚಾಲಕ ಸಾಯುತ್ತಿರಲಿಲ್ಲ ಹಾಗೂ ಲಕ್ಷ್ಮೇಶ್ವರ ಠಾಣೆಗೂ ಬೆಂಕಿ ಹಚ್ಚುವ ಘಟನೆಗಳು ನಡೆಯುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
 
ಫೆ.20ಕ್ಕೆ ಸರ್ಕಾರದ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್‌ನ ಭ್ರಷ್ಟಾಚಾರ ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಫೆ.20ರಂದು ಗದುಗಿನಲ್ಲಿ ಪ್ರತಿ ಭಟನೆ ನಡೆಸಲಾಗುವುದು ಎಂದು ತಿಳಿಸಿದರು.
 
ಗದಗ– ಬೆಟಗೇರಿ ಅವಳಿ ನಗರದಲ್ಲಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಟೆಂಡರ್ ಕರೆದು, 18 ತಿಂಗಳಲ್ಲಿ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಹೇಳಲಾಗಿತ್ತು. ಯೋಜನೆಗೆ ₹ 92 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಪೂರ್ಣಗೊಳಿಸಲು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ದೂರಿದರು.
 
ಮಾಜಿ ಶಾಸಕ ರಾಮಣ್ಣ ಲಮಾಣಿ, ಬಿಜೆಪಿಯ ಕಾಂತಿಲಾಲ್ ಬನ್ಸಾಲಿ, ರಾಜು ಕುರಡಗಿ, ಜಗನ್ನಾಥಸಾ ಭಾಂಡಗೆ, ಅಶ್ವಿನಿ ಜಗತಾಪ ಇದ್ದರು.
 
* ಶಿರಹಟ್ಟಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಅಲ್ಲಿನ ಕೆಲ ಪೊಲೀಸ್ ಅಧಿಕಾರಿಗಳೂ ಕುಮ್ಮಕ್ಕು ನೀಡಿದ್ದಾರೆ.  ಇದರಿಂದಲೇ ತಾಲ್ಲೂಕಿನಲ್ಲಿ ಅವಘಡಗಳು ನಡೆದಿವೆ
- ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.