ADVERTISEMENT

‘ಮಹಾದಾಯಿ ವಿವಾದ: ಜನಪ್ರತಿನಿಧಿಗಳಿಂದ ನಿರ್ಲಕ್ಷ’

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 7:27 IST
Last Updated 29 ಏಪ್ರಿಲ್ 2017, 7:27 IST

ನರಗುಂದ: ‘ಮಹಾದಾಯಿ ಹೋರಾಟಕ್ಕೆ ಶಾಸಕರಿಂದ, ಸಂಸದರಿಂದ ನಿರಂತರ ನಿರ್ಲಕ್ಷ ಉಂಟಾಗುತ್ತಿದೆ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಎಳ್ಳಷ್ಟೂ  ಕಾಳಜಿ ತೋರುತ್ತಿಲ್ಲ.  ಇದರಿಂದ ನಮಗೆ ನೀರು ದೊರೆಯುತ್ತಿಲ್ಲ, ಮಹಾದಾಯಿಗೆ ನಮ್ಮವರಿಂದಲೇ ಸಂಪೂರ್ಣ ನಿರ್ಲಕ್ಷ ಉಂಟಾಗಿದೆ’ ಎಂದು ಮಹಾದಾಯಿ ಹೋರಾಟ ಸಮಿತಿ ಉಪಾಧ್ಯಕ್ಷ ಪರಶುರಾಮ ಜಂಬಗಿ ಆರೋಪಿಸಿದರು.

ಪಟ್ಟಣದಲ್ಲಿ  ನಡೆಯುತ್ತಿರುವ ಮಹಾದಾಯಿ ಧರಣಿಯ 653ನೇ ದಿನವಾದ ಶುಕ್ರವಾರ  ಮಾತನಾಡಿದರು.‘ಈಗಾಗಲೇ ಕಳೆದ ಮೂರು ವರ್ಷಗಳಿಂದ ಈ ಭಾಗದ ನಾಲ್ಕು ಜಿಲ್ಲೆಗಳು ನಿರಂತರ ಬರಗಾಲಕ್ಕೆ ತುತ್ತಾಗಿವೆ. ನವಿಲು ತೀರ್ಥದ  ಜಲಾಶಯ ತುಂಬುತ್ತಿಲ್ಲ. ಹೆಸರಿಗೆ ಕಾಲುವೆಗಳಿದ್ದು, ಜನ ತತ್ತರಿಸುತ್ತಿದೆ. ಇದಕ್ಕೆ ಮಹಾದಾಯಿಯೇ ಅಂತಿಮ ಪರಿಹಾರ. ಈಗಾಗಲೇ ನ್ಯಾಯಮಂಡಳಿ ಮಾತುಕತೆ ನಡೆಸಲು ಸೂಚಿಸಿದೆ. ಆದರೂ  ಇದಕ್ಕೆ ಸಂಬಂಧಿಸಿದ ಮುಖ್ಯಮಂತ್ರಿಗಳು ಚಕಾರ ಎತ್ತುತ್ತಿಲ್ಲ. ಹಿಗಾದರೆ ನಮ್ಮ ಸಂಕಷ್ಟ ಕೇಳುವವರಾರು? ಕಾವೇರಿ ಎಂದಾಕ್ಷಣ ದಕ್ಷಿಣ ಕರ್ನಾಟಕದ ಎಲ್ಲ ಜನಪ್ರತಿನಿಧಿಗಳು ಒಂದಾಗಿದ್ದಾರೆ. ಈ ಒಗ್ಗಟ್ಟು ಮಹಾದಾಯಿಗೇಕೇ ಇಲ್ಲ? ಈ  ರೀತಿ ತಾತ್ಸಾರಕ್ಕೆ ಒಳಗಾಗಲು   ನಮ್ಮ ಜನಪ್ರತಿನಿಧಿಗಳು ವಿಧಾನಸೌಧದಲ್ಲಿ, ಲೋಕಸಭೆಯಲ್ಲಿ ಇದರ ಬಗ್ಗೆ ಮಾತನಾಡುತ್ತಿಲ್ಲ, ಅವರಿಗೆ ಈ ಯೋಜನೆ ಬೇಕಾಗಿಲ್ಲ’ ಎಂದು ಕಿಡಿ ಕಾರಿದರು.

ಮಹಾದಾಯಿ ಹೋರಾಟ ಸಮಿತಿ ಸದಸ್ಯ ರಮೇಶ ನಾಯ್ಕರ ಮಾತನಾಡಿ, ‘ನಾವು ನಿರಂತರವಾಗಿ ನಮ್ಮ ಪಾಲಿನ ನೀರನ್ನು  ಕೇಳುತ್ತಿದ್ದೇವೆ. ಆದರೆ ಇದಕ್ಕೆ ಕೇಂದ್ರ  ಸರ್ಕಾರ ಮೌನದ ಮೂಲಕ ನಿರ್ಲಕ್ಷ ವಹಿಸಿದರೆ, ಗೋವಾ ಇಲ್ಲ ಸಲ್ಲದ ಸಬೂಬು ಹೇಳಿ ನೀರು ದೊರೆಯದಂತೆ ಮಾಡುತ್ತಿದೆ. ಇದನ್ನು ಉತ್ತರ ಕರ್ನಾಟಕದ ಎಲ್ಲ ರೈತರ ಸಮುದಾಯ ಅರಿಯಬೇಕಿದೆ.  ನಮ್ಮ  ನೀರು ಹರಿಸಿಕೊಳ್ಳಲು ನಿತ್ಯ ಜಾಗೃತರಾಗಬೇಕಿದೆ.. ಹೋರಾಟಕ್ಕೆ ಅಡ್ಡಿ ಉಂಟು ಮಾಡುವವರ ವಿರುದ್ಧ ಸಮರ ಸಾರಬೇಕಿದೆ’ ಎಂದರು.

ADVERTISEMENT

ಧರಣಿಯಲ್ಲಿ ಶ್ರೀಶೈಲ ಮೇಟಿ, ವೆಂಕಪ್ಪ ಹುಜರತ್ತಿ,  ವಾಸು ಚವ್ಹಾಣ,  ಸೋಮಲಿಂಗಪ್ಪ ಆಯಟ್ಟಿ,  ಚಂದ್ರಪ್ಪ ಮುದಕನ್ನವರ, ಚನ್ನಬಸು ಹುಲಜೋಗಿ, ಬಸಪ್ಪ ತೆಗ್ಗಿನಮನಿ,ಯಲ್ಲಪ್ಪ ಗುಡದೇರಿ, ಸಿದ್ದಪ್ಪ ಚಂದ್ರತ್ನವರ, ಚನ್ನಪ್ಪಗೌಡ ಪಾಟೀಲ ಸೇರಿದಂತೆ ಮೊದ ಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.