ADVERTISEMENT

ಮೋಡ ಬಿತ್ತನೆ: ಗದಗ ಜಿಲ್ಲೆಯಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 4:53 IST
Last Updated 6 ಸೆಪ್ಟೆಂಬರ್ 2017, 4:53 IST
ಗದಗ ಜಿಲ್ಲೆ ಡಂಬಳ ಗ್ರಾಮದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ಸುರಿದ ಮಳೆಗೆ ಗ್ರಾಮದ ವಿಕ್ಟೋರಿಯಾ ಮಹಾರಾಣಿ ಕೆರೆ ಭರ್ತಿಯಾಗಿ ಹೆಚ್ಚಿನ ಪ್ರಮಾಣದ ನೀರು ಹಳ್ಳಕ್ಕೆ ಹರಿದುಹೋಯಿತು
ಗದಗ ಜಿಲ್ಲೆ ಡಂಬಳ ಗ್ರಾಮದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ಸುರಿದ ಮಳೆಗೆ ಗ್ರಾಮದ ವಿಕ್ಟೋರಿಯಾ ಮಹಾರಾಣಿ ಕೆರೆ ಭರ್ತಿಯಾಗಿ ಹೆಚ್ಚಿನ ಪ್ರಮಾಣದ ನೀರು ಹಳ್ಳಕ್ಕೆ ಹರಿದುಹೋಯಿತು   

ಗದಗ: ಮೋಡ ಬಿತ್ತನೆ ಹಿನ್ನೆಲೆಯಲ್ಲಿ ಜಿಲ್ಲೆಯ ಗದಗ–ಬೆಟಗೇರಿ ಅವಳಿ ನಗರ, ಮುಂಡರಗಿ, ಡಂಬಳ, ಮುಳಗುಂದ, ನರೇಗಲ್‌, ಡಂಬಳದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆ ಆಗಿದೆ. ಮುಂಡರಗಿ ತಾಲ್ಲೂಕಿನ ಬಿಡನಾಳ, ನಾಗರಹಾಳ ಗ್ರಾಮದಲ್ಲಿ ಜೋರಾಗಿ ಮಳೆಯಾಗಿದ್ದರಿಂದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಜನ ಜೀವನ ಅಸ್ತವ್ಯಸ್ತವಾಯಿತು.

ಮುಳಗುಂದ, ಚಿಂಚಲಿ, ನೀಲ ಗುಂದ, ಬಸಾಪುರದಲ್ಲಿ ಭರ್ಜರಿ ಮಳೆ ಆಗಿದ್ದರಿಂದ ಚಂಡಿಕನಹಳ್ಳ ತುಂಬಿ ಹರಿಯಿತು. ನರೇಗಲ್‌ ಸಮೀಪವಿರುವ ಗದ್ದಿಹಳ್ಳ ಉಕ್ಕಿ ಹರಿಯಿತು.
ಡಂಬಳ, ಪೆಟಾಲೂರು, ಅತ್ತಿಕಟ್ಟಿ, ಹಿರೇವಡ್ಡಟ್ಟಿ, ಮೇವುಂಡಿ ಗ್ರಾಮದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಮಳೆ ಆಗಿದೆ. ಗದುಗಿನಲ್ಲಿ ಸೋಮ ವಾರ 7.2 ಮಿ.ಮೀ. ಹಾಗೂ ಮಂಗಳವಾರ 9.6 ಮಿ.ಮೀ. ಮಳೆ ಸುರಿದಿದೆ. ರೈತ ಮುಖ ದಲ್ಲಿ ಮಂದಹಾಸ ಮೂಡಿದೆ.

ಉಂಡಾಡಿ ಹಳ್ಳದಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ: ಗದಗ ತಾಲ್ಲೂಕಿನ ಅಂತೂರ–ಬೆಂತೂರ ಗ್ರಾಮದ ಉಂಡಾಡಿ ಹಳ್ಳದಲ್ಲಿ ಸೋಮವಾರ ರಾತ್ರಿ ಬೈಕ್‌ ಸವಾರರೊಬ್ಬರು ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಮುಂಡರಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದ ನಿವಾಸಿ ಶಿವರಾಜ ಮುಂಡರಗಿ (22) ಮೃತ ಯುವಕ.

ADVERTISEMENT

ಭಾರಿ ಮಳೆಯಾಗಿದ್ದರಿಂದ ಹಳ್ಳ ತುಂಬಿ ಹರಿಯುತ್ತಿತ್ತು. ನೀರು ವೇಗ ವಾಗಿ ಹರಿಯುತ್ತಿರುವುದನ್ನು ಗಮನಿಸದ ಯುವಕ ಬೈಕ್‌ ಸಹಿತ ಹಳ್ಳ ದಾಟುವ ವೇಳೆ ಕೊಚ್ಚಿ ಹೋಗಿದ್ದು, ಮಂಗಳವಾರ ಬೆಳಿಗ್ಗೆ ಹಳ್ಳದ ಬ್ರಿಡ್ಜ್‌ನಿಂದ 500 ಮೀ. ದೂರದಲ್ಲಿ ಶವ ಪತ್ತೆ ಆಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಂಬಳದಲ್ಲೂ ಉತ್ತಮ ಮಳೆ
ಡಂಬಳ: ಹೋಬಳಿಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ  ಮೂರು ಗಂಟೆ ಉತ್ತಮವಾಗಿ ಮಳೆ ಸುರಿದಿದೆ. ಡಂಬಳ ಡೋಣಿ, ಪೇಠಾಲೂರ, ಚಿಕ್ಕವಡ್ಡಟ್ಟಿ ಹಿರೇವಡ್ಡಟ್ಟಿ,  ಡೋಣಿ ತಾಂಡ, ಅತ್ತಿಕಟ್ಟಿ  ಮೇವುಂಡಿ, ಹಳ್ಳಿ ಗುಡಿ. ಹೈತಾಪುರ, ಬರದೂರ, ಶಿಂಗಟ ರಾಯನಕೇರಿ ತಾಂಡಾ ಸೇರಿ ಹೋಬಳಿ ವ್ಯಾಪ್ತಿಯ ವಿವಿಧೆಡೆ ಉತ್ತಮ ಮಳೆ ಆಗಿದ್ದು ಜಮೀನುಗಳಲ್ಲಿನ ಕೃಷಿ ಹೊಂಡ, ಸಣ್ಣ ಕೆರೆಗಳು, ಹಳ್ಳಕೊಳ್ಳಗಳು ಭರ್ತಿಯಾಗಿ ಹರಿಯುತ್ತಿದ್ದು ಬದುಗಳಲ್ಲಿ ನೀರು ಸಂಗ್ರವಾಗಿದೆ.

ಈರುಳ್ಳಿ, ಸೂರ್ಯಕಾಂತಿ, ಹತ್ತಿ, ಶೇಂಗಾ ಬಿತ್ತಿದ್ದ ರೈತರಿಗೆ ಅನುಕೂಲ ಆಗಿದ್ದು ತೇವಾಂಶ ಕೊರತೆಯಿಂದ ನಾಶವಾಗುತ್ತಿದ್ದ ಬೆಳೆ ಗಳು ಬದುಕಿ ಉಳಿದವೆ. ಗ್ರಾಮದ ವಿಕ್ಟೋರಿಯಾ ಮಹಾರಾಣಿ ಕೆರೆ ಕೋಡಿ ಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.