ADVERTISEMENT

ರೈತರ ಖಾತೆಗೆ ಬರಲಿಲ್ಲ ಹಣ

ಈರುಳ್ಳಿ ಗ್ರೇಡಿಂಗ್ ಮಾಡಿ ಮೂರು ತಿಂಗಳು; ಕಂಗಾಲಾದ ರೈತರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:32 IST
Last Updated 3 ಫೆಬ್ರುವರಿ 2017, 6:32 IST
ರೈತರ ಖಾತೆಗೆ ಬರಲಿಲ್ಲ ಹಣ
ರೈತರ ಖಾತೆಗೆ ಬರಲಿಲ್ಲ ಹಣ   

ಡಂಬಳ: ಭೀಕರ ಬರಗಾಲದ ಮಧ್ಯೆಯೂ ಈರುಳ್ಳಿಯನ್ನು ಬೆಳೆದ ರೈತರು  ಸರ್ಕಾರ ಬೆಂಬಲ ಬೆಲೆಗೆ  ಖರೀದಿ ಮಾಡಬೇಕು ಎಂದು ಹಲವು ಪ್ರತಿಭಟನೆಗಳನ್ನು ಮಾಡಿದ ನಂತರ  ಸರ್ಕಾರ ಬೆಂಬಲ ಘೋಷಿಸಿ ಪ್ರತಿ ಕ್ವಿಂಟಲ್‌ಗೆ ₹ 624 ರೂನಂತೆ ಖರೀದಿ­ಸಿತು. ಆದರೆ ಖರೀದಿ ಮಾಡಿ ಮೂರು ತಿಂಗಳು ಕಳೆದರೂ ರೈತರ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಿಲ್ಲ. ಹೀಗಾಗಿ ಬರಗಾಲಕ್ಕೆ ತತ್ತರಿಸಿ ಹೋಗಿರುವ ರೈತ ಸಮುದಾಯ ನಿತ್ಯ  ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುವಂತಾಗಿದೆ.

ಕಳೆದ ನವೆಂಬರ್‌ ತಿಂಗಳಲ್ಲಿ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಲಾಗಿತ್ತು, ಈರುಳ್ಳಿ ಬೆಲೆ ಕುಸಿದ ಪರಿಣಾಮ ಸರ್ಕಾರ ಈರುಳ್ಳಿ ಖರೀದಿ ಕೇಂದ್ರ ಸ್ಥಾಪನೆ ಮಾಡಿರುವುದನ್ನು ರೈತರು ಸ್ವಾಗತಿಸಿದರು. ಆದರೆ ರೈತರ ಈರುಳ್ಳಿಯನ್ನು ಗ್ರೇಡಿಂಗ್ ಮಾಡಿ ಮೂರು ತಿಂಗಳು ಕಳೆದರೂ ನಮ್ಮ ಬ್ಯಾಂಕ್‌ ಖಾತಗೆ ಹಣ ಜಮಾ ಆಗಿಲ್ಲ. ಈರುಳ್ಳಿ ಖರೀದಿ ಮಾಡುವ ಸಂದರ್ಭಲ್ಲಿ ಒಂದು ತಿಂಗಳಲ್ಲಿ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಅಧಿಕಾರಿಗಳು ಆಶ್ವಾನೆ ನೀಡಿದ್ದರು. ತೋಟಗಾರಿಕೆ ಹಾಗೂ ಎಪಿಎಂಸಿ ಅಧಿಕಾರಿಗಳನ್ನು ಕೇಳಿದರೆ ಇವತ್ತ ಆಗತೈತಿ ನಾಳೆ ಆಗುತೈತಿ ಎಂದು ನಪ ಹೇಳುತ್ತಾರೆ. ನಾವು ಜೀವನ ಕಳೆಯುವುದಾದರೂ ಹ್ಯಾಂಗ ಎಂದು ನೊಂದುಕೊಳ್ಳುತ್ತಾರೆ ರೈತ ಜಾಕೀರ್‌ ಮೂಲಿಮನಿ ಹಾಗು ಯಲ್ಲಪ್ಪ ಗುಡಿ.

ಸ್ಥಳೀಯ ಎಪಿಎಂಸಿ ಮಾರುಕಟ್ಟೆ­ಯಲ್ಲಿ ಪೇಠಾಲೂರ, ಹಿರೇವಡ್ಡಟ್ಟಿ, ಮೇವುಂಡಿ, ಡೋಣಿ, ಚಿಕ್ಕವಡ್ಡಟ್ಟಿ, ಹಮ್ಮಿಗಿ, ಹಾರೂಗೇರಿ ಸೇರಿದಂತೆ  ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ತೋಟಗಾರಿಕಾ ಅಧಿಕಾರಿಗಳ ಅಂಕಿ ಅಂಶಗಳ ಪ್ರಕಾರ 40,126 ಈರುಳ್ಳಿ ಚೀಲವನ್ನು ಖರೀದಿ ಮಾಡಲಾಗಿದ್ದು, ₹ 1 ಕೋಟಿಗೂ ಅಧಿಕ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ನೀಡಬೇಕಾಗಿದೆ. ಫೆಡರೇಶನ್‌ ಅಧಿಕಾರಿಗಳನ್ನು ಕೇಳಿದರೆ ನಾವು ಒಂದು ಕೋಟಿಯ ಚೆಕ್‌ ಕೊಟ್ಟು ಒಂದು ತಿಂಗಳು ಕಳೆದಿದೆ. ಇನ್ನೂ ಎರಡು ಮೂರು ದಿನದಲ್ಲಿ ಜಮಾ ಆಗುತ್ತದೆ ಎನ್ನುತ್ತಾರೆ.

ಲಕ್ಷಾಂತರ ರೂಪಾಯಿ ಸಾಲ ಮಾಡಿ ಈರುಳ್ಳಿ ಬೆಳೆದಿದ್ದು ಬರಗಾಲ ಬೇರೆ. ಅಧಿಕಾರಿಗಳು ಪ್ರತಿ ತಿಂಗಳು ತಪ್ಪದೇ ಸಂಬಳ ಪಡೆಯುತ್ತಾರೆ. ರೈತರು ಎಂದರೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಯಾಕೆ ಇಷ್ಟು ನಿರ್ಲಕ್ಷ್ಯ ಮಾಡುತ್ತಾರೆ. ನಮಗೂ  ಒಂದು ಜೀವನವಿದೆ ಎಂದು ಅಸಹಾಯಕರಾಗಿ ನುಡಿದರು.
ಒಟ್ಟಿನಲ್ಲಿ ಅಂಗೈಯಲ್ಲಿ ಇಡೀ ವಿಶ್ವವನ್ನು ನೋಡುವಷ್ಟು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಹೊಂದಿದರೂ ಸರ್ಕಾರ ಹಾಗೂ ಅಧಿಕಾರಿಗಳು ಈಗಾ­ಗಲೇ ಬರಗಾಲಕ್ಕೆ ತತ್ತರಿಸಿ ಹೋಗಿರುವ ರೈತರೊಂದಿಗೆ ಚೆಲ್ಲಾಟವಾಡುತ್ತಿ­ದ್ದಾರೆಯೇ ಎನ್ನುವ ಸಂಶಯ ಕಾಡು­ತ್ತಿದ್ದು, ಇನ್ನಾದರೂ ಎಚ್ಚೆತ್ತುಕೊಂಡು 2–3 ದಿನದಲ್ಲಿ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಬೇಕು ಎಂದು ರೈತ ಮುಖಂಡರು ಹೇಳಿದರು.

***

-ಲಕ್ಷ್ಮಣ ಎಚ್ ದೊಡ್ಡಮನಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.