ADVERTISEMENT

ರೈತರ ಹೆಸರು ದುರ್ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:50 IST
Last Updated 21 ಜನವರಿ 2017, 5:50 IST
ರೈತರ ಹೆಸರು ದುರ್ಬಳಕೆ: ಆರೋಪ
ರೈತರ ಹೆಸರು ದುರ್ಬಳಕೆ: ಆರೋಪ   

ನರಗುಂದ:  ಮಹಾದಾಯಿ ಹೆಸರಲ್ಲಿ ರಾಜಕೀಯ ಕೆಸರೆರಚಾಟ ನಿಲ್ಲಬೇಕು. ಚುನಾವಣೆ ನೆಪ ಒಡ್ಡದೇ  ಪ್ರಮುಖ ಪಕ್ಷಗಳ ರಾಜಕೀಯ ನಾಯಕರು  ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮಹಾದಾಯಿ ಹೋರಾಟ ಸಮಿತಿ ವಕ್ತಾರ ಶ್ರೀಶೈಲ ಮೇಟಿ  ಆಗ್ರಹಿಸಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 555 ನೇ ದಿನವಾದ  ಶುಕ್ರವಾರ  ಮಾತನಾಡಿದರು.

ಮಹಾದಾಯಿ ಯೋಜನೆ ಕೇವಲ ಚುನಾವಣೆ ಬಂದಾಗ ನೆನಪಾಗಬಾರದು. ಇದು ಬಹುದಿನಗಳ ಬೇಡಿಕೆ. ಇದರ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಮುತುವರ್ಜಿ ವಹಿಸಬೇಕು,  ರೈತರ ಹೆಸರು ದುರ್ಬಳಕೆ ಮಾಡಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದು ದೂರಿದರು.

ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ಸಂಧಾನ ಸಭೆ ನಡೆಯದೇ ಇರುವುದು ತುಂಬ ಬೇಸರ   ತಂದಿದೆ. ಆದರೆ ಇದರಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆಸಕ್ತಿ ವಹಿಸಬೇಕು. ಇದರ ಯಶಸ್ಸಿಗೆ ಶ್ರಮಿಸಬೇಕು. ಸಭೆ ನಡೆಯಲು  ಈ ಭಾಗದ ಶಾಸಕರು, ಸಂಸದರು ಪ್ರಯತ್ನಿಸಬೇಕು.  ಇದು ಮಾಡದಿದ್ದರೆ ಅವರಿಗೆ ರೈತರ ಬಗ್ಗೆ  ಕಾಳಜಿ ಇಲ್ಲವೆಂದು ಸಾಬೀತಾಗುವುದು ನಿಶ್ಚಿತ. ಎಲ್ಲರೂ ಸಂಧಾನ ಸಭೆಯತ್ತ ಚಿತ್ತ ಹರಿಸಿದ್ದಾರೆ. ಒಂದು ವೇಳೆ ರಾಜಕೀಯ ಪಕ್ಷಗಳು ಆಸಕ್ತಿ ತೋರದಿದ್ದರೆ  ಕಾವೇರಿಗಿಂತಲೂ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್‌.ಬಿ.ಕೊಣ್ಣೂರು ಮಾತನಾಡಿ ನಮ್ಮ ಪಾಲಿನ  ನೀರು ಪಡೆಯಲು ಸಾಕಷ್ಟು  ಹರಸಾಹಸ ಪಡುತ್ತಿದ್ದೇವೆ. ಆದರೆ ನಮ್ಮ ಜನಪ್ರತಿನಿಧಿಗಳು  ಗೋವಾ ಹಾಗೂ ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳ ಮನವೊಲಿಸಿ ನಮ್ಮ ಪಾಲಿನ ನೀರನ್ನು ಪಡೆಯುವಂತೆ ಒತ್ತಾಯಿಸಿದರು. ಜೊತೆಗೆ ಸಿಎಂ ಸಿದ್ದರಾಮಯ್ಯನವರು ವಾಸ್ತವ ಸ್ಥಿತಿ ಅರಿತು ಪ್ರಧಾನಿಗಳ ಮೇಲೆ ಒತ್ತಡ ಹೇರಲು ಮುಂದಾಗಬೇಕೆಂದರು.

ಧರಣಿಯಲ್ಲಿ ವೀರಬಸಪ್ಪ ಹೂಗಾರ, ಎಸ್‌.ಬಿ.ಜೋಗಣ್ಣವರ, ಎಸ್‌.ಕೆ.ಗಿರಿಯಣ್ಣವರ,  ಹನಮಂತ ಪಡೆಸೂರ,  ಹುಸೇನಸಾಬ ಶೇಋಖಾನ, ಬಸಮ್ಮ ಐನಾಪೂರ, ಎಂ.ಎಂ.ನಂದಿ, ಬಿ.ಎಸ್‌.ಹಡಪದ, ಜಗನ್ನಾಥ ಮುಧೋಳೆ, ಪುಂಡಲೀಕ ಯಾದವ, ವಾಸು ಚಹ್ವಾನ, ಎಸ್.ಆರ್.ಕೊಡ್ಲಿವಾಡ, ಪ್ರಕಾಶ ಕರಿಯಪ್ಪನವರ, ಯಲ್ಲಪ್ಪ ಗುಡದರಿ, ಈರಣ್ಣ ಗಡಗಿಶೆಟ್ಟರ, ಚನ್ನಪ್ಪಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.