ADVERTISEMENT

ಸಚಿವರ ತವರಿಗೆ 15ನೇ ಸ್ಥಾನ!

ವಸತಿ ಯೋಜನೆ ಹಾಗೂ ಸ್ವಚ್ಛ ಭಾರತ ಮಿಷನ್ ಕುರಿತ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:11 IST
Last Updated 21 ಫೆಬ್ರುವರಿ 2017, 5:11 IST
ಮುಂಡರಗಿ: ರಾಜ್ಯವನ್ನು ಬಯಲು ಶೌಚ ಮುಕ್ತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಹಲವು ಯೋಜನೆ ಹಾಕಿ ಕೊಂಡಿದೆ. ಆದರೆ ಗ್ರಾಮೀಣಾಭಿವೃದ್ಧಿ ಸಚಿವರ ತವರು ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆಗಳಲ್ಲಿ ರಾಜ್ಯದಲ್ಲಿ 15ನೇ ಸ್ಥಾನದಲ್ಲಿರುವುದು ತುಂಬಾ ಬೇಸರದ ಸಂಗತಿ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಅಸಮಾಧಾನ ವ್ಯಕ್ತಪಡಿಸಿದರು.
 
ಸ್ಥಳೀಯ ಪುರಸಭೆ ಗಾಂಧೀ ಭವನದಲ್ಲಿ ವಸತಿ ಯೋಜನೆ ಹಾಗೂ ಸ್ವಚ್ಚಭಾರತ ಮಿಷನ್ ಕುರಿತು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸೋಮವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
 
 ತಾಲ್ಲೂಕಿನ 19 ಗ್ರಾಮ ಪಂಚಾಯ್ತಿಗಳಲ್ಲಿ 13,332 ಶೌಚಗೃಹ ಹೊಂದದೆ ಇರುವ ಕುಟುಂಬಗಳಿದ್ದು, ಕೇವಲ ಕುಟುಂಬದವರು ಮಾತ್ರ ಶೌಚಗೃಹ ನಿರ್ಮಿಸಿಕೊಳ್ಳುತ್ತಿದ್ದಾರೆ, ಇನ್ನು 12,679 ಕುಟುಂಬದವರು ಶೌಚಗೃಹ ನಿರ್ಮಿಸಿಕೊಳ್ಳಬೇಕಾಗಿದೆ. ಶೌಚಗೃಹ ನಿರ್ಮಿಸಿಕೊಳ್ಳುವ ಕುರಿತಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಸ್ಥರಿಗೆ ತಿಳವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
 
 ಜಿಲ್ಲಾ ಪಂಚಾಯ್ತಿ ಸದಸ್ಯ ಈರಣ್ಣ ನಾಡಗೌಡ್ರ ಮಾತನಾಡಿ, ಬಯಲು ಶೌಚದಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಜನರು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಶೌಚಗೃಹ ನಿರ್ಮಿಸಿಕೊಂಡು ಗ್ರಾಮೀಣಾಭಿವೃದಗೆ ಮುಂದಾಗಬೇಕು ಎಂದರು.
 
ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ಮೇಟಿ ಮಾತನಾಡಿ, ಶೌಚಗೃಹ ನಿರ್ಮಾಣಕ್ಕಾಗಿ ಮಹಿಳೆಯರು ಮುಂದೆ ಬರಬೇಕು. ಸರ್ಕಾರದ ಸಹಾಯಧನ ಪಡೆದು ಶೌಚಗೃಹ ನಿರ್ಮಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಟಿ.ದಿನೇಶ ಮಾತನಾಡಿದರು. 
 
ತಮ್ಮ ಗ್ರಾಮಗಳಲ್ಲಿ ಹೆಚ್ಚು ಶೌಚಗೃಹ ನಿರ್ಮಿಸಿಕೊಡಲು ಶ್ರಮಿಸಿದ ಗ್ರಾಮ ಪಂಚಾಯ್ತಿ ಸದಸ್ಯರಾದ ದೇವಪ್ಪ ಹಡಪದ, ಗೀತಾ ಚವಾಣ, ಗಿರಿಜವ್ವ ಮುಳಗುಂದ, ಯಲ್ಲಪ್ಪ ಬಿಸನಳ್ಳಿ ಅವರನ್ನು ಜಿಲ್ಲಾ ಪಂಚಾಯ್ತಿಯಿಂದ  ಸನ್ಮಾನಿಸಲಾಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. 
 
ಸಿಇಓ ಮಂಜುನಾಥ ಚವಾಣ, ತಾಲ್ಲೂಕು ಪಂಚಾಯ್ತಿಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಸದಸ್ಯರಾದ ರುದ್ರಪ್ಪ ಬಡಿಗೇರ, ಭರಮಪ್ಪ ನಾಗ ನೂರ, ಪುಸ್ಪಾ ಪಾಟೀಲ, ರುದ್ರಗೌಡ  ಪಾಟೀಲ, ಲಲಿತಾ ಎಲಿಗಾರ, ತಿಪ್ಪವ್ವ ಕಾರಬಾರಿ, ಇಓ  ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.