ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 7:13 IST
Last Updated 18 ನವೆಂಬರ್ 2017, 7:13 IST

ರೋಣ:ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಬೇಕು ಎಂದು ಮಾದಿಗ ಸಮಾಜದ ಮುಖಂಡ ಅಂಬಣ್ಣ ಅರೋಳಿಕರ ಆಗ್ರಹಿಸಿದರು. ಪಟ್ಟಣದ ನೀರಾವರಿ ಪ್ರವಾಸಿಮಂದಿರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನ್ಯಾ.ಸದಾಶಿವ ಆಯೋಗ ಮಾದಿಗ ಸಮುದಾಯಕ್ಕೆ ಶೇ 6, ಚಲುವಾದಿ ಸಮುದಾಯಕ್ಕೆ ಶೇ 5 ಮತ್ತು ಇತರ ಉಪಜಾತಿಗಳಿಗೆ ಶೇ 3 ಮತ್ತು ಶೇ 1 ರಷ್ಟು ಒಳ ಮೀಸಲಾತಿ ನೀಡಬೇಕು ಎಂದು 2012ರಲ್ಲಿ ಶಿಫಾರಸು ಮಾಡಿದೆ. ಆದರೆ, ಇಂದಿಗೂ ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.

ಎರಡು ದಿನಗಳ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಈ ವಿಚಾರ ಕುರಿತು ಪ್ರಸ್ತಾಪಿಸಿದಾಗ ಶಾಸಕರಾದ ಪಿ. ನರೇಂದ್ರಸ್ವಾಮಿ, ಶಿವರಾಜ ತಂಗಡಗಿ ಮತ್ತಿತರ ಮೂವರು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಮಾದಿಗ ಸಮಾಜವನ್ನು ತುಳಿಯುವ ಕುತಂತ್ರವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ನ. 20ರಿಂದ ಡಿ. 11ರವರೆಗೆ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಹಾಳಕೇರಿ, ಮುರಳೀಧರ ಮೂಲಿಮನಿ, ಹನುಮಂತಪ್ಪ ನಾಗರಾಜ, ಶರಣು ಪೂಜಾರ, ಬಾಳಪ್ಪ ಬುರಡಿ, ಶಿವಪ್ಪ ಮಾದರ, ಮಂಜು ಬುರಡಿ, ನಿಂಗಪ್ಪ ಮುಂದಿನಮನಿ, ಶರಣಪ್ಪ ಕೊತಬಾಳ, ಬಸವರಾಜ ಹೊಸಮನಿ, ಪಕ್ಕೀರಪ್ಪ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.