ADVERTISEMENT

ಹಳೇ ಬಸ್‌ ನಿಲ್ದಾಣಕ್ಕೆ ಹೊಸ ಕಟ್ಟಡ ಭಾಗ್ಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 6:39 IST
Last Updated 6 ನವೆಂಬರ್ 2017, 6:39 IST
ನಗರದ ಮಾಳಶೆಟ್ಟಿ ವೃತ್ತದಲ್ಲಿರುವ ಹಳೆಯ ಬಸ್‌ ನಿಲ್ದಾಣ
ನಗರದ ಮಾಳಶೆಟ್ಟಿ ವೃತ್ತದಲ್ಲಿರುವ ಹಳೆಯ ಬಸ್‌ ನಿಲ್ದಾಣ   

ಗದಗ: ನಗರದ ಹೃದಯ ಭಾಗದಲ್ಲಿ ಕಳೆದ ಐದೂವರೆ ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಹಳೆಯ ಬಸ್‌ ನಿಲ್ದಾಣದ ಕಟ್ಟಡ ನೆಲಸಮಗೊಳಿಸಿ, ಅದೇ ಸ್ಥಳದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಿಸಲು ನೀಲನಕ್ಷೆ ಸಿದ್ಧಗೊಂಡಿದೆ.

ಎರಡೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಈ ಬಸ್‌ ನಿಲ್ದಾಣದ ಕಟ್ಟಡ ಈಗ ಶಿಥಿಲಾವಸ್ಥೆಗೆ ತಲುಪಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನೆರಡು ದಿನಗಳಲ್ಲಿ ಜೆಸಿಬಿ ಯಂತ್ರಗಳು ಹಳೆಯ ಕಟ್ಟಡವನ್ನು ನೆಲಕ್ಕುರುಳಿಸಲಿವೆ. ಇಲ್ಲಿನ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ಈಗಾಗಲೇ ಅಂಗಡಿ ತೆರವುಗೊಳಿಸಲು ನೋಟಿಸ್‌ ನೀಡಲಾಗಿದ್ದು, ಕೆಲವರು ಸರಕು– ಸಾಮಗ್ರಿಗಳನ್ನು ಸಾಗಿಸಿದ್ದಾರೆ.

ಗದಗ ಜಿಲ್ಲಾ ಕೇಂದ್ರವಾಗಿದ್ದು, ಇಲ್ಲಿನ ಸ್ಥಳೀಯ ಪ್ರವಾಸಿ ತಾಣಗಳಾದ ವೀರನಾರಾಯಣ ಗುಡಿ, ತ್ರಿಕೂಟೇಶ್ವರ ದೇವಸ್ಥಾನ, ತೋಂಟದಾರ್ಯ ಮಠ, ವೀರೇಶ್ವರ ಪುಣ್ಯಾಶ್ರಮಕ್ಕೆ ನಿತ್ಯ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡು ತ್ತಾರೆ. ಅಲ್ಲದೇ, ಲಕ್ಕುಂಡಿ, ಬಾದಾಮಿ, ಬನಶಂಕರಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಹಂಪಿ ಸೇರಿ ಪ್ರಮುಖ ತಾಣಗಳಿಗೆ ಗದಗ ಮೂಲಕವೇ ಪ್ರವಾಸಿಗರು ಸಂಚರಿಸುತ್ತಾರೆ.

ADVERTISEMENT

ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಈ ಬಸ್‌ನಿಲ್ದಾಣ ಸಂಪೂರ್ಣ ಹಾಳಾಗಿತ್ತು. ಮಳೆಗಾಲದಲ್ಲಿ ಕಟ್ಟಡ ಸೋರುತ್ತಿತ್ತು. ಪ್ರಾಂಗಣದಲ್ಲಿನ ಸಿಮೆಂಟ್‌ ಕಾಂಕ್ರೀಟ್‌
ಕಿತ್ತುಹೋಗಿತ್ತು. ನಿಲ್ದಾಣದೊಳಗೆ ಪ್ರಯಾಣಿಕರಿಗೆ ಕೂರಲು ಸಮರ್ಪಕಆಸನ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಹಳೆಯ ಕಟ್ಟಡ ಕೆಡವಿ, ಇಲ್ಲಿ ಅತ್ಯಾಧುನಿಕ ಬಸ್‌ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವುದು ಸಾರ್ವಜನಿಕರ ದಶಕದ ಬೇಡಿಕೆಯಾಗಿತ್ತು.

ಹೊಸ ಕಟ್ಟಡ ನಿರ್ಮಾಣಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗೀಯ ಅಧಿಕಾರಿಗಳು ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ‘₹ 5 ಕೋಟಿವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ. ಗುತ್ತಿಗೆದಾರರೇ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಅದರ ತ್ಯಾಜ್ಯವನ್ನೂ ಹೊರಗೆ ಸಾಗಿಸಬೇಕು. ಬಳಿಕ ನೂತನ ಕಟ್ಟಡದ ಕಾಮಗಾರಿ ಆರಂಭಿಸಬೇಕು’ ಎಂದು ಸಾರಿಗೆ ಸಂಸ್ಥೆಯ ಗದಗ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಎಲ್.ಇಂಗಳಳ್ಳಿ ಹೇಳಿದರು.

ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆ, ಈ ನಿಲ್ದಾಣಕ್ಕೆ ಬರುತ್ತಿದ್ದ ಎಲ್ಲ ಬಸ್‌ಗಳನ್ನು ಹೊಸ ಬಸ್‌ ನಿಲ್ದಾಣಕ್ಕೆ ತಿರುಗಿಸಲಾಗುವುದು. ಇದರಿಂದ ಬಸ್‌ ನಿಲುಗಡೆ ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ’ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು. ಸದ್ಯ ಹೊಸ ಬಸ್‌ ನಿಲ್ದಾಣದ ಆವರಣದಲ್ಲಿ ಕಾಂಕ್ರೀಟ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಸದ್ಯದಲ್ಲಿ ಅದು ಕೂಡ ಪೂರ್ಣಗೊಳ್ಳಲಿದೆ. ಬಳಿಕ ಎಲ್ಲ ಬಸ್‌ಗಳ ನಿಲುಗಡೆಯನ್ನು ಅಲ್ಲೇ ಮಾಡಲಾಗುವುದು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ವಾರದ ಹಿಂದೆ ಮಳಿಗೆ ತೆರವು ಮಾಡುವಂತೆ ನೋಟಿಸ್‌ ನೀಡಿದ್ದಾರೆ. ಆದರೆ, ಮಳಿಗೆಗಾಗಿ ಠೇವಣಿ ಇರಿಸಿದ್ದ ಹಣವನ್ನು ಇದುವರೆಗೆ ನೀಡಿಲ್ಲ. ಸರಕು, ಸಾಮಗ್ರಿಗಳನ್ನು ಹಂತ ಹಂತವಾಗಿ ಸಾಗಿಸುತ್ತಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಹಳೆಯ ಬಸ್‌ ನಿಲ್ದಾಣದ ವ್ಯಾಪಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.