ADVERTISEMENT

ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಕಾಂಗ್ರೆಸ್ ಕುಮ್ಮಕ್ಕು

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 9:52 IST
Last Updated 5 ಜನವರಿ 2018, 9:52 IST

ಮುಂಡರಗಿ: ‘ಮಹದಾಯಿ ನದಿ ನೀರು ಹರಿಸಲು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ವಿನಾಕಾರಣ ಯಡಿಯೂರಪ್ಪ ಅವರ ಮೇಲೆ ಗೂಬೆ ಕೂರಿಸಿ ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಮಹದಾಯಿ ನದಿಗೆ ಸಂಬಂಧಿಸಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮೂರೂ ರಾಜ್ಯಗಳಿಗೆ ಹಕ್ಕು ಇದ್ದು, ಕರ್ನಾಟಕದೊಂದಿಗೆ ನದಿ ನೀರು ಹಂಚಿಕೊಳ್ಳುವುದು ಅನಿವಾರ್ಯ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಸ್ಪಷ್ಟವಾಗಿ ತಿಳಿಸಿದ್ದಾರೆ’ ಎಂದರು.

‘ಮಹದಾಯಿ ನೀರನ್ನು ಕರ್ನಾಟಕಕ್ಕೆ ನೀಡದಿರುವಂತೆ ಗೋವಾ ರಾಜ್ಯದ ಕಾಂಗ್ರೆಸ್ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಮತ್ತಿತರ ಕಾಂಗ್ರೆಸ್ ವರಿಷ್ಠರು ಅದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಕಾಂಗ್ರೆಸ್ ವರಿಷ್ಠರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಸರ್ಕಾರದ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿ ಮಹದಾಯಿ ನೀರು ಹರಿಸುವ ಕುರಿತಂತೆ ಅವರ ಮೇಲೆ ಒತ್ತಡ ಹೇರಬೇಕು. ನೀರು ನೀಡಲು ಗೋವಾ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು, ಈ ವಿಷಯದಲ್ಲಿ ಪ್ರಧಾನಮಂತ್ರಿ ಮಧ್ಯಸ್ಥಿಕೆ ಅನಗತ್ಯ’ ಎಂದು ತಿಳಿಸಿದರು.

‘2007ರ ಸಮ್ಮಿಶ್ರ ಸರ್ಕಾರದಲ್ಲಿ ಮಹದಾಯಿ ನೀರು ಹರಿಸಲು ಯಡಿಯೂರಪ್ಪ ₹ 100 ಕೋಟಿ ವೆಚ್ಚದ ಕಾಮಗಾರಿ ಆರಂಭಿಸಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಾಮಗಾರಿ ಸ್ಥಗಿತಗೊಳಿಸಿ ಕಾಲುವೆಗೆ ಅಡ್ಡಗೋಡೆ ನಿರ್ಮಿಸಿದರು’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರ ಹಿಂದೂಗಳ ಹತ್ಯೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಒಂದು ವರ್ಗದ ಜನರನ್ನು ಓಲೈಸುವ ಉದ್ದೇಶದಿಂದ ಕೊಲೆಗಡುಕರಿಗೆ ರಾಜ್ಯ ಸರ್ಕಾರ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ. ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ದೀಪಕ್ ರಾವ್ ಅವರ ಕುಟುಂಬಕ್ಕೆ ಸರ್ಕಾರ ₹ 50 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಮುಸ್ಲಿಂ ಮಹಿಳೆಯರು ಸ್ವಾಗತಿಸಿದ್ದು, ಕಾಂಗ್ರೆಸ್ ಮುಖಂಡರು ಆ ವಿಷಯದಲ್ಲೂ ರಾಜಕಾರಣ ಮಾಡುದ್ದಾರೆ. ಈ ಕುರಿತು ಕಾಂಗ್ರೆಸ್ ವರಿಷ್ಠರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

’ಚುನಾವಣೆ ಹತ್ತಿರವಿರುವಾಗ ಕಾಂಗ್ರೆಸ್ ಸರ್ಕಾರ ನೂತನ ತಾಲ್ಲೂಕು ಘೋಷಣೆ ಮಾಡಿ ಜನರ ಮೂಗಿಗೆ ತುಪ್ಪ ಸವರಿದೆ. ನೂತನ ತಾಲ್ಲೂಕು ಕೇಂದ್ರಗಳಲ್ಲಿ ಯಾವ ಸೌಲಭ್ಯಗಳನ್ನೂ ನೀಡದೇ ಬಾಯಿ ಮಾತಿನಲ್ಲಿ ನೂತನ ತಾಲ್ಲೂಕುಗಳ ಘೋಷಣೆ ಮಾಡಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.