ADVERTISEMENT

ಸೋಮನಾಥನ ಸನ್ನಿಧಿಯಲ್ಲಿ ಸಂಭ್ರಮ

ಜೋಮನ್ ವರ್ಗಿಸ್
Published 6 ಜನವರಿ 2018, 9:16 IST
Last Updated 6 ಜನವರಿ 2018, 9:16 IST
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸೋಮನಾಥೇಶ್ವರ ಪಲ್ಲಕ್ಕಿಗೆ ಪೂಜೆ ಸಲ್ಲಿಸುವ ಮೂಲಕ ಇನ್ಫೋಸಿಸ್‌ನ ಸಂಗ್ರಹಣ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್‌.ಎನ್‌. ಕೌಶಿಕ್‌ ಪುಲಿಗೆರೆ ಉತ್ಸವಕ್ಕೆ ಚಾಲನೆ ನೀಡಿದರು. ಕ್ಷೇತ್ರಪಾಲ ಬರಿಗಾಲಿ, ಸೇವಾ ಸಮಿತಿ ಅಧ್ಯಕ್ಷ ಶಿವಣ್ಣ ನೆಲವಗಿ, ಭಾರತೀಯ ವಿದ್ಯಾಭವನದ ಅಶೋಕಕುಮಾರ, ರಾಜಶೇಖರ ಇದ್ದಾರೆ
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸೋಮನಾಥೇಶ್ವರ ಪಲ್ಲಕ್ಕಿಗೆ ಪೂಜೆ ಸಲ್ಲಿಸುವ ಮೂಲಕ ಇನ್ಫೋಸಿಸ್‌ನ ಸಂಗ್ರಹಣ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್‌.ಎನ್‌. ಕೌಶಿಕ್‌ ಪುಲಿಗೆರೆ ಉತ್ಸವಕ್ಕೆ ಚಾಲನೆ ನೀಡಿದರು. ಕ್ಷೇತ್ರಪಾಲ ಬರಿಗಾಲಿ, ಸೇವಾ ಸಮಿತಿ ಅಧ್ಯಕ್ಷ ಶಿವಣ್ಣ ನೆಲವಗಿ, ಭಾರತೀಯ ವಿದ್ಯಾಭವನದ ಅಶೋಕಕುಮಾರ, ರಾಜಶೇಖರ ಇದ್ದಾರೆ   

ಲಕ್ಷ್ಮೇಶ್ವರ: ಆಗಷ್ಟೇ ಮಂಜಿನ ಪರದೆ ಸರಿದು ಹರಿಯುತ್ತಿರುವ ಬೆಳಕು. ಮೂಡಣದಲ್ಲಿ ಇನ್ನೇನು ಹೊಂಬಣ್ಣ ಚೆಲ್ಲುತ್ತಾ ಸೂರ್ಯ ಮೂಡುವ ಹೊತ್ತು. ಆನಂದದಿ ಆಗಸದಲ್ಲಿ ಹಾರಾಟ ಆರಂಭಿಸಿದ ಬಾನಾಡಿಗಳ ಕಲರವ. ಇದರ ಮಧ್ಯೆ ಶಹನಾಯಿ ಮಂಗಳ ವಾದ್ಯ. ಉದಯ ರಾಗದಲ್ಲಿ ಸಂಗೀತ ಸುಧೆ ಹರಿಯುವ ಹೊತ್ತಿನಲ್ಲಿ ಸಂಗೀತ, ನೃತ್ಯ, ಚಿತ್ರ ಸಂಭ್ರಮ ಸಾರುವ ಮೂರು ದಿನಗಳ ಪುಲಿಗೆರೆ ಉತ್ಸವಕ್ಕೆ ಶುಕ್ರವಾರ ಬೆಳಿಗ್ಗೆ ಇಲ್ಲಿ ಸಾಂಪ್ರದಾಯಿಕ ಚಾಲನೆ ಸಿಕ್ಕಿತು.

ವಾಸ್ತುಶಿಲ್ಪ ವೈಭವದೊಂದಿಗೆ ಕಣ್ಮನ ಸೆಳೆಯುತ್ತಿರುವ ಸೋಮನಾಥೇಶ್ವರ ದೇವಸ್ಥಾನ ಆವರಣದಲ್ಲಿ ಇನ್ಫೊಸಿಸ್‌ನ ಸಂಗ್ರಹಣ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್‌.ಎನ್‌. ಕೌಶಿಕ್‌ ಸೋಮನಾಥೇಶ್ವರ ಪಲ್ಲಕ್ಕಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

‌ಬೆಳಿಗ್ಗೆ 5:30ರ ಸುಮಾರಿಗೆ ಚುಮು ಚಳಿಯಲ್ಲೇ ಮಫ್ಲರ್‌ ಸುತ್ತಿಕೊಂಡು ದೇವಸ್ಥಾನ ಆವರಣಕ್ಕೆ ಒಬ್ಬೊಬ್ಬರಾಗಿ ಬರತೊಡಗಿದ ಸ್ಥಳೀಯರು, ಸಂಗೀತ ಪ್ರೇಮಿಗಳು ಉದಯರಾಗ ಆರಂಭವಾಗುವ ಹೊತ್ತಿಗೆ ಕಿಕ್ಕಿರಿದು ಸೇರಿದರು. 6:30ಕ್ಕೆ ಪ್ರಾರಂಭವಾದ ಬಸವರಾಜ ಭಜಂತ್ರಿ ಅವರ ಶಹನಾಯಿ ವಾದನ ಶಶಿಕಾಂತ ಕುಲಕರ್ಣಿ ಅವರ ತಬಲಾ ಸಾಥ್‌ನೊಂದಿಗೆ ಒಂದು ಗಂಟೆಗಳ ಕಾಲ ಮುಂದುವರಿದು ಸಂಗೀತ ಸುಧೆ ಉಕ್ಕಿ ಹರಿಯಿತು. ರಾಗಗಳ ಆಲಾಪದ ಅಲೆಯಲ್ಲಿ ಶ್ರೋತೃಗಳು ತೇಲಿದರು.

ADVERTISEMENT

ಸೋಮನಾಥೇಶ್ವರ ದೇವಸ್ಥಾನದ ಹಿನ್ನೆಲೆಯಲ್ಲಿ ಹೊಂಬಣ್ಣ ಚೆಲ್ಲುತ್ತಾ ನೇಸರ ಮೂಡುತ್ತಿದ್ದರೆ, ಇತ್ತ ಶಹನಾಯಿಯಿಂದ ಹೊಮ್ಮುತ್ತಿದ್ದ ಭೈರವಿ ರಾಗಕ್ಕೆ ಶೋತೃಗಳು ತಲೆದೂಗುತ್ತಿದ್ದರು. ಭೈರವಿ ರಾಗದ ಗುಂಗು ಇಳಿಯುವ ಮುನ್ನವೇ ಮಿಶ್ರ ಪಿಲೋದಲ್ಲಿ ಧೂನ್‌ ನುಡಿಸಿ ಬಸವರಾಜ ಅವರು ರಾಗ ರಸಿರಕನ್ನು ರಂಜಿಸಿ, ಶ್ರೋತೃಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಶಶಿಧರ ಭಜಂತ್ರಿ ಮತ್ತು ಮಂಜುನಾಥ ಭಜಂತ್ರಿ ಅವರಿಗೆ ಸಾಥ್ ನೀಡಿದರು. ತಬಲಾ ಸಾಥ್‌ ನೀಡಿದ ಶಶಿಕಾಂತ ಕುಲಕರ್ಣಿ ಅವರ ಕೈ ಚಳಕ ನೋಡುಗರನ್ನು ಪುಳಕಿತಗೊಳಿಸಿತು.

ಸಂಗೀತದ ರಸಗಳಿಗೆ ಸಾಕ್ಷಿಯಾದ ಇಲ್ಲಿನ ಚಿಕ್ಕ–ಚೊಕ್ಕ ವೇದಿಕೆ, ರಾಗಾಲಾಪನೆ, ವಾದ್ಯಗಳ ಅನುರಣನದ ಮೂಲಕ ಸಂಗೀತದ ಮಾಂತ್ರಿಕ ಲೋಕವನ್ನೇ ಸೃಷ್ಟಿಸಿತ್ತು. ಸೋಮೇಶ್ವರ ಸೇವಾ ಸಮಿತಿ ಅಧ್ಯಕ್ಷ ಶಿವಣ್ಣ ನೆಲವಗಿ, ಮಾಜಿ ಶಾಸಕ ಜಿ.ಎಸ್‌. ಗಡ್ಡದೇವರಮಠ, ಸೋಮಣ್ಣ ಮುಳಗುಂದ, ಕಾರ್ಯದರ್ಶಿ ಪಿ.ಬಿ. ಖರಾಟೆ, ಸುರೇಶ ರಾಚನಾಯ್ಕರ, ಭಾರತೀಯ ವಿದ್ಯಾಭವನದ ಅಶೋಕಕುಮಾರ, ರಾಜಶೇಖರ ಇದ್ದರು.

ಸಾಂಸ್ಕೃತಿಕ ಪರಂಪರೆ ಅನಾವರಣ

ಸೋಮನಾಥೇಶ್ವರ ದೇವಸ್ಥಾನದ ಜೀಣೊದ್ಧಾರಕ್ಕೆ ಶ್ರಮಿಸಿರುವ ಇನೋಸಿಸ್ ಪ್ರತಿಷ್ಠಾನ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಸಾಂಸ್ಕೃತಿಕ ಪರಂಪರೆ ಉತ್ಥಾನದ ಸಂಕಲ್ಪದೊಂದಿಗೆ ಮೂರು ವರ್ಷಗಳಿಂದ ‘ಪುಲಿಗೆರೆ ಉತ್ಸವ’ ಹಮ್ಮಿಕೊಂಡು ಬರುತ್ತಿದೆ. ಇದಕ್ಕೆ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಸಹಕಾರ ನೀಡುತ್ತದೆ. ಸಂಗೀತ, ನೃತ್ಯ ಮತ್ತು ಚಿತ್ರಸಂಭ್ರಮ ಈ ಉತ್ಸವದ ಭಾಗವಾಗಿದೆ. ಉತ್ಸವದ ಅಂಗವಾಗಿ ಸೋಮೇಶ್ವರ ದೇವಸ್ಥಾನ ಸೇರಿ ಪಟ್ಟಣದ ವಿವಿಧ ಐತಿಹಾಸಿಕ ದೇವಸ್ಥಾನಗಳ ವಾಸ್ತುಶಿಲ್ಪ ವೈಭವವನ್ನು ಕಲಾವಿದರು ಕುಂಚದಲ್ಲಿ ಮೂಡಿಸುತ್ತಾರೆ.

* * 

ಉತ್ಸವದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಈ ಭಾಗದ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಜನರಿಗೆ ತಲುಪಿಸಬೇಕು
ಆರ್‌.ಎನ್‌. ಕೌಶಿಕ್‌
ಇನ್ಫೋಸಿಸ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.