ADVERTISEMENT

ಬ್ಯಾಂಕ್ ರಸ್ತೆಯಲ್ಲಿ ತೆರವು ಕಾರ್ಯಾಚರಣೆ

ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ; ಪೊಲೀಸರಿಂದ ಕ್ರಮ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 10:18 IST
Last Updated 18 ಜನವರಿ 2018, 10:18 IST

ಗದಗ: ನಗರದಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಐದು ದಿನಗಳ ಹಿಂದೆ ನಡೆದ ಗುಂಪು ಘರ್ಷಣೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಕಳೆದ ಮೂರು ದಿನಗಳಿಂದ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಸ್ಟೇಶನ್ ರಸ್ತೆ, ನಾಮಜೋಶಿ ರಸ್ತೆ, ಹತ್ತಿಕಾಳ ಕೂಟ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿರುವ ವಾಹನಗಳು ಅಥವಾ ನಿಲುಗಡೆ ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸಲಾಗಿರುವ ದ್ವಿಚಕ್ರ ವಾಹನಗಳನ್ನು ತೆರವುಗೊಳಿಸಿ, ಸವಾರರಿಗೆ ದಂಡ ವಿಧಿಸಲಾಗುತ್ತಿದೆ.

ಬುಧವಾರ ಬ್ಯಾಂಕ್ ರಸ್ತೆಯಲ್ಲಿ ಮಳಿಗೆಗಳ ಮುಂದೆ ಅಳವಡಿಸಲಾಗಿದ್ದ ತಗಡಿನ ಮೇಲ್ಛಾವಣಿಯನ್ನು ಪೊಲೀಸರು ಜೆಸಿಬಿ ಮೂಲಕ ತೆರವುಗೊಳಿಸಿದರು. ಹಳೆ ಬಸ್ ನಿಲ್ದಾಣ ಬಳಿಯ ಮಾಳಶೆಟ್ಟಿ ವೃತ್ತ, ಜನತಾ ಬಜಾರಿನಲ್ಲಿ ಕಾರ್ಯಾಚರಣೆ ನಡೆಯಿತು. ಕೆಲವು ಮಳಿಗೆಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ತಾವೆ ಮೇಲ್ಛಾವಣಿ ತೆರವುಗೊಳಿಸಿದರು.

ಡಿವೈಎಸ್‍ಪಿ ವಿಜಯಕುಮಾರ ಟಿ, ಗದಗ ಸಿಪಿಐ ದೌಲತ್ ಕುರಿ, ಶಹರ ಠಾಣೆಯ ಪಿಎಸ್‍ಐ ಬಿ.ಜಿ.ಸುಬ್ಬಾಪೂರಮಠ, ಬಡಾವಣೆ ಠಾಣೆಯ ಪಿಎಸ್‍ಐ ಪಾಟೀಲ ಸ್ಥಳದಲ್ಲೇ ಇದ್ದು, ಮೇಲ್ವಿಚಾರಣೆ ವಹಿಸಿದರು. ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ಸ್ಥಗಿತಗೊಳಿಸಿ, ತೆರವಿಗೆ ಅನುಕೂಲ ಮಾಡಿಕೊಟ್ಟರು.

ADVERTISEMENT

‘ನಮ್ಮ ಅಂಗಡಿಗೆ ಬರುವ ಜನರಿಗೆ ನೆರಳು ಒದಗಿಸಲು ತಗಡಿನ ಶೀಟ್ ಹಾಕಿದ್ದೆವು. ಸದ್ಯ ಪೊಲೀಸರು ಇದನ್ನು ತೆಗೆಯಲು ಸೂಚಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ತೆರವು ಮಾಡಿದ್ದೇವೆ’ ಎಂದು ಬ್ಯಾಂಕ್‌ ರಸ್ತೆಯ ವ್ಯಾಪಾರಿಗಳಾದ ಮುಕ್ತಮ್‌ ನಾಲಬಂದ, ಸುಲೆಮಾನ ಬಳ್ಳಾರಿ, ಮಂಜುನಾಥ ಚನ್ನಪ್ಪನವರ ಹೇಳಿದರು.
**
ಕಳೆದ ಎರಡು ದಿನಗಳಿಂದ ತೆರವು ಕಾರ್ಯಾಚರಣೆ ಆರಂಭಿಸಿದ್ದೇವೆ. ನಗರಸಭೆ ಕೈಗೊಳ್ಳಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ.
–ದೌಲತ್ ಕುರಿ, ಗದಗ ಸಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.