ADVERTISEMENT

6ರಿಂದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 8:50 IST
Last Updated 4 ಡಿಸೆಂಬರ್ 2017, 8:50 IST

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಡಿ.6, 7ರಂದು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಶಾಸಕ, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎನ್‌. ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಿಕ ಶಾಲಾ ಆವರಣದಲ್ಲಿ ಸಮ್ಮೇಳನ ನಡೆಯಲಿದೆ. 80 ಪುಸ್ತಕ ಮಳಿಗೆಗಳನ್ನು ತೆರೆಯಲಾಗುವುದು. ಚಿತ್ರಕಲಾ ಪ್ರದರ್ಶನವೂ ನಡೆಯಲಿದೆ ಎಂದರು.

ಹಾಸನದ ಹೆಣ್ಣು ಮಕ್ಕಳ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿನಿ ಎಚ್‌.ವಿ.ಚಂದನಾ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಸಹ ಅಧ್ಯಕ್ಷರನ್ನಾಗಿ ಜಿ.ಜೆ.ಯಶವಂತ್‌, ಬಿ.ಜಿ.ಸುಹಾಸ್‌, ಸಿ.ಎಚ್‌.ಕಾವ್ಯಶ್ರೀ, ಡಿ.ಎಸ್‌.ನಿಸರ್ಗಾ ಅವರನ್ನು ಆಯ್ಕೆಮಾಡಲಾಗಿದೆ. ಮಹಾದ್ವಾರಕ್ಕೆ ಬಾಹುಬಲಿ ಹೆಸರು, ಸಮಾರಂಭ ನಡೆಯುವ ವೇದಿಕೆಗೆ ಕುವೆಂಪು ವೇದಿಕೆ ಎಂದು ಹೆಸರಿಡಲಾಗಿದೆ ಎಂದು ಹೇಳಿದರು.

ADVERTISEMENT

ಆದಿಚುಂಚನಗಿರಿಯ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಡಾ.ಸಿದ್ದಲಿಂಗಯ್ಯ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷೆಯನ್ನು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯಲ್ಲಿ 10 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವದು ಎಂದು ವಿವರಿಸಿದರು.

ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಎನ್‌.ಅಶೋಕ್‌, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಕವಿ ಡಾ. ದೊಡ್ಡರಂಗೇಗೌಡ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಡಾ.ಆರ್‌.ಕೆ.ನಲ್ಲೂರು ಪ್ರಸಾದ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆಯಲ್ಲಿ ಶಿಕ್ಷಣ ಮತ್ತು ಯುವಜನತೆ, ಮಕ್ಕಳ ಸೃಜನಶೀಲತೆಯಲ್ಲಿ ಸಮೂಹಮಾಧ್ಯಮಗಳ ಮಹತ್ವ, ಮಕ್ಕಳಸಾಹಿತ್ಯ ಮತ್ತು ಮೌಲ್ಯಗಳು, ಭವ್ಯಭಾರತ ನಿರ್ಮಾಣ ಯುವಜನರಿಂದ ಮಾತ್ರ ಸಾದ್ಯ, ಬೌದ್ದಿಕ ವಿಕಸನದಲ್ಲಿ ಮಾತೃಭಾಷಾ ಶಿಕ್ಷಣ ಮಾಧ್ಯಮದ ಮಹತ್ವ, ಹಾಸನ ಜಿಲ್ಲೆಯ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ, ಮಕ್ಕಳ ಮನೋ– ದೈಹಿಕ ವಿಕಸನದಲ್ಲಿ ಗ್ರಾಮೀಣ ಕ್ರೀಡೆಗಳ ಮಹತ್ವ, ಮೌಡ್ಯತೆ ನಿವಾರಣೆಯಲ್ಲಿ ಸಾಮಾನ್ಯ ಶಿಕ್ಷಣ ಮತ್ತು ಯುವಜನತೆ, ಕನ್ನಡ ನೆಲ, ಜಲ ಮತ್ತು ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ... ಮೊದಲಾದ ವಿಷಯಗಳ ಕುರಿತು ಎರಡು ದಿನ ವಿಚಾರಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ 80 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಎರಡು ದಿನ ಸಂಜೆ ವೇಳೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 200 ಮಕ್ಕಳು ಕಾರ್ಯಕ್ರಮ ನೀಡಲಿದ್ದಾರೆ. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಹೆಚ್ಚಿಸುವುದು ಸಮ್ಮೇಳನದ ಮುಖ್ಯ ಉದ್ದೇಶ ಎಂದರು. ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ಉಪಾಧ್ಯಕ್ಷ ಪಟೇಲ್‌ಮಂಜುನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಕೆ.ಪುಷ್ಪಲತಾ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ಪ್ರಕಾಶ್‌ಜೈನ್‌, ಮಂಡ್ಯ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.