ADVERTISEMENT

72 ವಿಷಯಗಳ ಅನುಮೋದನೆಗೆ 2 ನಿಮಿಷ!

ನಗರಸಭೆ ಸಾಮಾನ್ಯ ಸಭೆ; ಚರ್ಚೆ ಆರಂಭಕ್ಕೂ ಮುನ್ನ ಸಭೆ ಮುಕ್ತಾಯ; ಪ್ರತಿಪಕ್ಷ ಸದಸ್ಯರ ತೀವ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 10:52 IST
Last Updated 20 ಜುಲೈ 2017, 10:52 IST
ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸದನ ಮುಂಭಾಗದಲ್ಲಿ ಜಮಾಯಿಸಿ ವಾಗ್ವಾದ ನಡೆಸಿದರು. ನಗರಸಭೆ ಅಧ್ಯಕ್ಷ ಪೀರಸಾಬ್ ಕೌತಾಳ, ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಪೌರಾಯುಕ್ತ ಮನ್ಸೂರ್ ಅಲಿ ಇದ್ದಾರೆ (ಎಡಚಿತ್ರ). ಮಹಿಳಾ ಪೌರ ಕಾರ್ಮಿಕರನ್ನು ಸಭಾ ಭವನದ ಒಳಗೆ ಕರೆತಂದು, ಸದಸ್ಯ  ಕೃಷ್ಣಾ ಪರಾಪೂರ ಅವರು ವೇತನ ವಿಷಯ ಪ್ರಸ್ತಾಪಿಸಿದರು
ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸದನ ಮುಂಭಾಗದಲ್ಲಿ ಜಮಾಯಿಸಿ ವಾಗ್ವಾದ ನಡೆಸಿದರು. ನಗರಸಭೆ ಅಧ್ಯಕ್ಷ ಪೀರಸಾಬ್ ಕೌತಾಳ, ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಪೌರಾಯುಕ್ತ ಮನ್ಸೂರ್ ಅಲಿ ಇದ್ದಾರೆ (ಎಡಚಿತ್ರ). ಮಹಿಳಾ ಪೌರ ಕಾರ್ಮಿಕರನ್ನು ಸಭಾ ಭವನದ ಒಳಗೆ ಕರೆತಂದು, ಸದಸ್ಯ ಕೃಷ್ಣಾ ಪರಾಪೂರ ಅವರು ವೇತನ ವಿಷಯ ಪ್ರಸ್ತಾಪಿಸಿದರು   

ಗದಗ: ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವಿನ ಆರೋಪ– ಪ್ರತ್ಯಾರೋಪಗಳು ಬುಧವಾರ ನಡೆದ ನಗರ ಸಭೆ ಸಾಮಾನ್ಯ ಸಭೆಯನ್ನೇ ಬಲಿಪಡೆಯಿತು. ವಿಷಯಗಳ ಮೇಲಿನ ಚರ್ಚೆ ಆರಂಭಗೊಳ್ಳುವ ಮುನ್ನವೇ ಸಭೆ ಮುಕ್ತಾಯಗೊಂಡಿತು.

ವಿರೋಧ ಪಕ್ಷದ ಸದಸ್ಯರ ಧಿಕ್ಕಾರದ ಘೋಷಣೆಗಳ ನಡುವೆಯೇ ನಗರಸಭೆ ಅಧ್ಯಕ್ಷ ಪೀರಬ್ ಕೌತಾಳ ಅವರು, ‘ಇಂದಿನ ಸಭೆಯಲ್ಲಿ ಚರ್ಚೆಗೆ ಪಟ್ಟಿ ಮಾಡಿದ್ದ ಎಲ್ಲ 72 ವಿಷಯಗಳನ್ನೂ ಸರ್ವಾನುಮತದಿಂದ ಅಂಗೀಕರಿಸಲಾಗಿದೆ’ ಎಂದು ಘೋಷಿಸಿದರು. ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಚರ್ಚೆ ನಡೆಯದೆಯೇ 2 ನಿಮಿಷದಲ್ಲಿ ಎಲ್ಲ ವಿಷಯಗಳು ಅನುಮೋದನೆಗೊಂಡವು.

ಬುಧವಾರ ಬೆಳಿಗ್ಗೆ ಸಭೆ ಆರಂಭ ಆಗುತ್ತಿದ್ದಂತೆ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಒಳಚರಂಡಿ ಹಾಗೂ 24x7 ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರು ಎಲ್ಲಿ ಬೇಕೆಂದರಲ್ಲಿ ರಸ್ತೆ ಅಗೆದು ದುರಸ್ತಿಗೊಳಿಸದೆ ಬಿಟ್ಟಿದ್ದಾರೆ. ಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಒಳಚರಂಡಿ ಕಾಮಗಾರಿ ಗುತ್ತಿಗೆ ದಾರರನ್ನು ಕರೆಯಿಸಿ, ಸಭೆ ನಡೆಸಿ, ತಾಕೀತು ಮಾಡಲಾಗುವುದು ಎಂದು ಪೌರಾಯುಕ್ತರು ಸಭೆಗೆ ವಿವರಣೆ ನೀಡಿದರು. ಇನ್ನೇನು, ವಿಷಯಗಳ ಮೇಲಿನ ಚರ್ಚೆ ಆರಂಭವಾಗಬೇಕು ಎನ್ನುವಷ್ಟ ರಲ್ಲಿ ವಿರೋಧ ಪಕ್ಷದ ಸದಸ್ಯರು ನಗರಸಭೆ ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಹಿಂದಿನ ಸಭೆಯಲ್ಲಿ ತೆಗೆದು ಕೊಂಡ ನಿರ್ಣಯವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಹಿಂದಿನ ಸಭೆಯಲ್ಲಿ ಕೈ ಬಿಡಲಾಗಿದ್ದ ಈ ವಿಷಯವನ್ನು ಮತ್ತೆ ಸೇರಿಸಿದ್ದೇಕೆ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು.

ಇದಕ್ಕೆ ನಗರಸಭೆ ಅಧ್ಯಕ್ಷರು ವಿವರಣೆ ನೀಡಲು ಪ್ರಾರಂಭಿಸಿದರು. ಆದರೆ, ಇದನ್ನು ತಡೆದ ವಿರೋಧ ಪಕ್ಷದ ಸದಸ್ಯರು ಪೌರಾಯುಕ್ತರೇ ಉತ್ತರ ನೀಡಲಿ ಎಂದು ಪಟ್ಟು ಹಿಡಿದರು. ನಗರಸಭೆ ಆಸ್ತಿ ಮಾರಾಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ  ಅವರ ಹೆಸರನ್ನು ಪ್ರಸ್ತಾಪಿಸಿದರು.

‘ಕಾನೂನುಬಾಹಿರ ಕೆಲಸ ಮಾಡಿದವರ ಮೇಲೆ ಕ್ರಿಮಿನಲ್ ಕೇಸ್ ಬರುತ್ತೆ. ಇದನ್ನು ತೀರ್ಮಾನಿಸಲು ಮೇಲಧಿಕಾರಿಗಳು ಇದ್ದಾರೆ, ನ್ಯಾಯಾಲಯ ಇದೆ. ನಿಮಗ್ಯಾಕೆ ಈ ಬಗ್ಗೆ ಚಿಂತೆ, ಇದರಲ್ಲಿ ತಲೆ ಹಾಕದೇ ನಿಮ್ಮ ಕೆಲಸ ನೀವು ಮಾಡಿ’ ಎಂದು ನಗರಸಭೆ ಅಧ್ಯಕ್ಷ ಪೀರಸಾಬ್ ಕೌತಾಳ ಅವರು ತಿರುಗೇಟು ನೀಡಿ, ಸಭೆ ಮುಂದುವರಿಸಲು ಪ್ರಯತ್ನಿಸಿದರು.

ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಸಭಾಭವನದ ಮುಂಭಾಕ್ಕೆ ತೆರಳಿ, ಧರಣಿ ಕುಳಿತರು. ನಗರಾಡಳಿತದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿ ಸಿದರು. ಮಾತನಾಡಲು ಹಲವು ಬಾರಿ ಅವಕಾಶ ಕೋರಿದ ಪೀರಸಾಬ್ ಕೌತಾಳ ಅವರು, ಕೊನೆಗೆ ದಿಕ್ಕಾರ ಘೋಷಣೆಗಳ ನಡುವೆಯೇ ಎಲ್ಲ ವಿಷಯಗಳನ್ನೂ ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿ ಎದ್ದು ಹೋದರು.  

ಮಹಿಳಾ ಸದಸ್ಯರಾದ ಖಮರ್ ಸುಲ್ತಾನಾ ನಮಾಜಿ, ಕಮಲಾ ಹಾದಿ ಮನಿ, ಮೇಘಾ ಮುದಗಲ್ಲ ಅವರು ಒಳ ಚರಂಡಿ ಯೋಜನೆ ಗುತ್ತಿಗೆದಾರರ ವಿರುದ್ಧ ಕಿಡಿಕಾರಿದರು. ವಾರ್ಡ್‌ಗಳಲ್ಲಿ ಕಾಮಗಾರಿ ಆರಂಭಿಸುವಾಗ ಸದಸ್ಯರ ಗಮನಕ್ಕೆ ತರುತ್ತಿಲ್ಲ ಎಂದು ಆರೋಪಿ ಸಿದರು. ನಾಳೆಯಿಂದಲೇ ಪೌರಾಯು ಕ್ತರು ಅಧಿಕಾರಿಗಳನ್ನು ಕರೆದುಕೊಂಡು  ಪ್ರತಿ ವಾರ್ಡ್‌ಗೆ ಭೇಟಿ ನೀಡಿ, ಕಾಮಗಾರಿ ಗಳ ವಾಸ್ತವ ಪರಿಸ್ಥಿತಿ ಪರಿಶೀಲಿಸಬೇಕು ಎಂದು ಆಡಳಿತ ಪಕ್ಷದ ಎಲ್.ಡಿ. ಚಂದಾವರಿ ಅವರು ಆಗ್ರಹಿಸಿದರು.

ಸದಸ್ಯರಾದ ಬಿ.ಬಿ. ಅಸೂಟಿ, ಪ್ರಕಾಶ ಬಾಕಳೆ, ಬಿ.ಎ. ಮುಲ್ಲಾ, ಕಮಲಾ ಹಾದಿ ಮನಿ, ಮೇಘಾ ಮುದಗಲ್ಲ, ಸಂತೋಷ ಮೇಲಗಿರಿ, ಅನೀಲ ಅಬ್ಬಿಗೇರಿ, ಮಂಜು ನಾಥ ಮುಳಗುಂದ, ರಾಘವೇಂದ್ರ ಯಳವತ್ತಿ, ನಾಗಲಿಂಗ ಐಲಿ, ಜಯಶ್ರೀ ಭೈರವಾಡೆ, ಚಿನ್ನಮ್ಮ ಮುಳಗುಂದ, ಪಾರ್ವತಿ ಪತ್ತಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.