ADVERTISEMENT

ಅಜ್ಞಾನ ನಿರ್ಮೂಲನೆಗೆ ಶ್ರಮಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:21 IST
Last Updated 16 ಜನವರಿ 2017, 5:21 IST
ಅಜ್ಞಾನ ನಿರ್ಮೂಲನೆಗೆ ಶ್ರಮಿಸಲು ಸಲಹೆ
ಅಜ್ಞಾನ ನಿರ್ಮೂಲನೆಗೆ ಶ್ರಮಿಸಲು ಸಲಹೆ   

ಹಾಸನ: ವಚನ, ಕಾವ್ಯಗಳ ಮೂಲಕ ಜೀವನ ಅನುಭೂತಿ ಸಾರಿದ ಶರಣರ ಆದರ್ಶ ಚಿಂತನೆ ಅಳವಡಿಸಿಕೊಂಡ ವ್ಯಕ್ತಿ ಅತ್ಯುನ್ನತ ಸ್ಥಾನಕ್ಕೇರುತ್ತಾನೆ ಎಂದು ಅರಕಲಗೂಡು ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರ ದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮ ಜಯಂತಿಯಲ್ಲಿ ಮಾತನಾಡಿದರು.

ಮಹಾಪುರುಷರ ದಿನಾಚರಣೆ ಯಿಂದ ಯಾವುದೇ ಪ್ರಯೋಜನವಿಲ್ಲ. ಅವರ ತತ್ವ, ವಿಚಾರಗಳಿಗೆ ಮನ್ನಣೆ ದೊರೆಯಬೇಕೆಂದರೆ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಬೇಕು. ಎಲ್ಲರ ಜೀವನದಲ್ಲೂ ಒಳ್ಳೆಯದು ಹಾಗೂ ಕೆಟ್ಟದ್ದು ನಡೆಯುತ್ತದೆ. ಅದು ಪ್ರಕೃತಿ ನಿಯಮ. ಒಳ್ಳೆಯ ಅವಕಾಶ ದೊರೆತಾಗ ಸದುಪಯೋಗ ಮಾಡಿಕೊಳ್ಳದೆ ಕಣ್ಮುಚ್ಚಿ ಕುಳಿತರೆ ನಷ್ಟವಾಗುತ್ತದೆ ಎಂದರು.

ಇತರರಿಗೆ ನಮ್ಮಲ್ಲಿರುವ ಜ್ಞಾನ ತಿಳಿಸಿಕೊಟ್ಟರೆ ಅವರಲ್ಲಿನ ಅಜ್ಞಾನ ಮಾಯವಾಗುತ್ತದೆ. ಇದೇ ರೀತಿ ಜಗತ್ತಿನಲ್ಲಿರುವ ಅಜ್ಞಾನ ಹೋಗಲಾಡಿ ಸುವ ಜವಾಬ್ದಾರಿ ಎಲ್ಲರದ್ದಾಗಬೇಕು. ಸಮಾಜ ತಿದ್ದುವ ಕೆಲಸದಲ್ಲಿ ಅನೇಕರು ಕೆಲಸ ಮಾಡಿದ್ದಾರೆ. ವಚನ ಅಥವಾ ಕೀರ್ತನೆಗಳ ಮೂಲಕ ಅಂಧಕಾರ ಹೋಗಲಾಡಿಸಲು ಶಿವಯೋಗಿ ಸಿದ್ದ ರಾಮ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮ ಪ್ರಭು ಹೀಗೆ ಅನೇಕ ಸಂತರು ಶ್ರಮಿಸಿದ್ದಾರೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗಗಳಿಗೆ ಸಾಧು ಸಂತರ ತತ್ವಾದರ್ಶ ಪಸರಿಸುವ ಕೆಲಸ ಜಿಲ್ಲಾಡಳಿತದಿಂದ ಆಗಬೇಕು. ಉಪನ್ಯಾಸ, ಸಂಗೀತ, ಪುಸ್ತಕ ಪ್ರಕಟಣೆ ಮೂಲಕ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ,  ವಚನ ಸಾಹಿತ್ಯದ ಮೂಲಕ ದೇಶವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗ ಸ್ಥಾನಕ್ಕೇರಿಸಿದ ಕೀರ್ತಿ 12ನೇ ಶತಮಾನದ ಮಹನೀಯರಿಗೆ ಸಲ್ಲುತ್ತದೆ. ರಾಜಪ್ರಭುತ್ವ ಆಳ್ವಿಕೆ ದಿನಗಳಲ್ಲೂ ಸಾಮಾಜಿಕ ಅಸಮಾನತೆ ವಿರುದ್ಧ ಗುಡುಗಿದ ಮಹನೀಯರು ಸಮಾಜದ ಲ್ಲಿದ್ದಾರೆ. ಆತ್ಮಸಾಕ್ಷಾರಕ್ಕಾಗಿ ಅಧ್ಯಾತ್ಮ ಜೀವನವೇ ದಾರಿ ಎಂಬುದನ್ನು ಹಲವು ದಾರ್ಶನಿಕರು ತೋರಿಸಿಕೊಟ್ಟಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಯು. ಜಿತೇಂದ್ರನಾಥ್, ಐಸಾಮಿಗೌಡ, ರಾಜೇಶ್, ಬಸವರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.