ADVERTISEMENT

‘ಅಣಿ ಮಾಂಡವ್ಯ’ ಕೃತಿ ಲೋಕಾರ್ಪಣೆ

ಮಕ್ಕಳ ಕವನ ಸಂಕಲನ: ಪುರಾಣ ಪುಣ್ಯಕಥೆಗಳಲ್ಲಿನ 63 ಪಾತ್ರಗಳ ಚಿತ್ರಣ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 7:23 IST
Last Updated 7 ಮಾರ್ಚ್ 2017, 7:23 IST
ಹಾಸನ: ಪುರಾಣ ಪುಣ್ಯ ಕಥೆಗಳಲ್ಲಿನ 63 ಪಾತ್ರಗಳನ್ನು ಶ್ರೀವಿಜಯ ಹಾಸನ ಅವರು ಅರ್ಥಗರ್ಭಿತವಾಗಿ ‘ಅಣಿ ಮಾಂಡವ್ಯ’ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಸಾಹಿತಿ ಚಂದ್ರಕಾಂತ ಪಡೆಸೂರ ಅಭಿಪ್ರಾಯಪಟ್ಟರು.
 
ಜಿಲ್ಲಾ ಸಾಹಿತ್ಯ ಸಂಘಟನೆಯಿಂದ ಸಂಸ್ಕೃತ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮನೆಮನೆ ಕವಿಗೋಷ್ಠಿಯ ದ್ವಿದಶಮಾನೋತ್ಸವ ಎರಡು ದಿನಗಳ ಕಾವ್ಯ ಕಮ್ಮಟದಲ್ಲಿ ಶ್ರೀವಿಜಯ ಹಾಸನ ಅವರ ಅಣಿಮಾಂಡವ್ಯ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಅಣಿಮಾಂಡವ್ಯ’ ಕೃತಿ ಮಕ್ಕಳಿಗಾಗಿ ಇರುವ ಕವನ ಸಂಕಲನವಾದರೂ, ಮಕ್ಕಳಿಗೆ ಸೀಮಿತವಾಗದೇ ಹಿರಿಯರಿಗೂ ಉಪಯುಕ್ತವಾಗಿದೆ ಎಂದರು.
 
ಸುರೇಶ್ ಗುರೂಜಿ ಮಾತನಾಡಿ, ದೇಶಿ ಪರಂಪರೆ ಸಾರುವ ರಾಮಾಯಣ, ಮಹಾಭಾರತದಂತಹ ವಿಶೇಷ ಗ್ರಂಥಗಳಲ್ಲಿನ ಹಲವು ಪಾತ್ರಗಳನ್ನು ಅತ್ಯಂತ ಸೂಕ್ಷ್ಮ ಹಾಗೂ ಸರಳವಾಗಿ ಓದುಗರಿಗೆ ಅರ್ಥವಾಗುವಂತೆ ರಚಿಸಿದ್ದಾರೆ. ಪಾತ್ರಗಳ ಗುಣಾವಗುಣ ಮತ್ತು ಪಾತ್ರಗಳ ನೈತಿಕತೆ ಅನುಸರಿಸುವುದರಿಂದ ನಮ್ಮಲ್ಲಿ ಮಾತ್ರವಲ್ಲದೆ, ಮಕ್ಕಳ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಜೀವನದಲ್ಲಿ ಸತ್ಯ, ಧರ್ಮಗಳನ್ನು ಬಾಳಿನ ಕಣ್ಣಾಗಿ ಅಳವಡಿಸಿಕೊಂಡು ಆರೋಗ್ಯವಂತ ಬದುಕು ಕಟ್ಟಿಕೊಡುತ್ತವೆ ಎಂದು ತಿಳಿಸಿದರು.  
 
ಮನೆ ಮನೆ ಕವಿಗೋಷ್ಠಿ ಸಂಚಾಲಕ ಕೊಟ್ರೇಶ್ ಎಸ್.ಉಪ್ಪಾರ್, ಬಿ.ಎಂ.ಭಾರತಿ ಹಾದಿಗೆ, ಜಯಂತಿ ಚಂದ್ರಶೇಖರ್, ಪಿ.ಕೆ.ಶರತ್, ಎಸ್.ಲಲಿತಾ, ಸಿ.ಎನ್.ತಿಮ್ಮೇಗೌಡ, ಎಂ.ಆರ್.ಕುಮುದಾ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.