ADVERTISEMENT

ಅತಿಸಾರ, ಭೇದಿ ನಿಯಂತ್ರಣಕ್ಕೆ ಮುಂಜಾಗ್ರತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 9:25 IST
Last Updated 14 ಜೂನ್ 2017, 9:25 IST

ಹಾಸನ: ‘ಅತಿಸಾರ ಭೇದಿ ಸಮಸ್ಯೆಗೆ ಸ್ವಚ್ಛತೆ ಇರದಿರುವುದೇ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಪ್ರತಿಯೊಬ್ಬನೂ ಮುಂಜಾಗ್ರತೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ವಿ.ಚೈತ್ರಾ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಹರಳಹಳ್ಳಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಸಾರ ಭೇದಿ ಚಿಕ್ಕಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಇದರ ನಿಯಂತ್ರಣಕ್ಕೆ ಸುಲಭ ಮಾರ್ಗೊಪಾಯಗಳಿವೆ. ಅವುಗಳನ್ನು ಪೋಷಕರು, ಶಿಕ್ಷಕರು ಹಾಗೂ ಮಕ್ಕಳು ಅನುಸರಿಸಬೇಕು ಎಂದು ಹೇಳಿದರು.

ಆಹಾರ ಪದ್ಧತಿಗಳು ಉತ್ತಮವಾಗಿರಬೇಕು.  ಸೇವಿಸುವ ಆಹಾರ, ನೀರು ಶುದ್ಧವಾಗಿರಬೇಕು. ಪ್ರತಿಯೊಬ್ಬರು ಆಹಾರ ಸೇವನೆ ಮಾಡುವ ಮೊದಲು ಮತ್ತು ನಂತರ ಕೈತೊಳೆಯುವ ಅಭ್ಯಾಸ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಆಹಾರ ಬಿಸಿಯಾಗಿದ್ದರೆ ಕಾಯಿಲೆ ಹರಡುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಿಗೆ ಹೆಚ್ಚಿನ ಹರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಮಕ್ಕಳ ಆರೋಗ್ಯ ಯೋಜನೆಗಳ ಅನುಷ್ಠಾನಾಧಿಕಾರಿ ಡಾ.ಜನಾರ್ದನ್ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕದ ಉದ್ದೇಶ ವಿವರಿಸಿ, ‘ಈ ಕಾಯಿಲೆ ಬಂದಾಗ ಒ.ಆರ್.ಎಸ್ ಪುಡಿ ಬಳಸುವುದರಿಂದ ನಿರ್ಜಲೀಕರಣ ತಪ್ಪಿಸಬಹುದು. ಪ್ರತಿಯೊಂದು ಊರಿನ ಆಶಾ ಕಾರ್ಯಕರ್ತರ ಬಳಿ, ಸ್ಥಳೀಯ ಆಸ್ಪತ್ರೆಗಳಲ್ಲಿ, ಔಷಧ ಅಂಗಡಿಗಳಲ್ಲಿ ಈ ಪುಡಿ ಲಭ್ಯವಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ಕೈತೊಳೆಯುವ ಅಭ್ಯಾಸದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಸಂತೆಪೇಟೆ ಸರ್ಕಾರಿ ಶಾಲೆಯ ಮಕ್ಕಳು ರೂಪಕ ಪ್ರದರ್ಶಿಸಿದರು. ಹರಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಎ.ಪರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಹಿರಿಯಣ್ಣ, ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್, ವಾರ್ತಾಧಿಕಾರಿ ವಿನೋದ್‌ಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.