ADVERTISEMENT

ಅನಾಥ ಮಕ್ಕಳ ರಕ್ಷಣೆಗೆ ‘ಮಮತೆಯ ತೊಟ್ಟಿಲು’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 6:56 IST
Last Updated 10 ನವೆಂಬರ್ 2017, 6:56 IST

ಹಳೇಬೀಡು: ‘ಅನಾಥ ಶಿಶುಗಳ ರಕ್ಷಣೆಗೆ ‘ಮಮತೆಯ ತೊಟ್ಟಿಲು’ ಯೋಜನೆ ಜಾರಿಗೆ ಬಂದಿದ್ದು, ಬೇಡದ ಮಕ್ಕಳನ್ನು ನಿರ್ಲಕ್ಷ್ಯಿಸುವ ಇಲ್ಲಿಗೆ ಒಪ್ಪಿಸುವ ಮೂಲಕ ಶಿಶುಗಳ ರಕ್ಷಿಸಬೇಕು’ ಎಂದು ಮಕ್ಕಳ ರಕ್ಷಣಾಧಿಕಾರಿ ಕಾಂತರಾಜು ಕರೆ ನೀಡಿದರು.

ಪಟ್ಟಣದ ಕಲ್ಪತರು ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ಆಯೋಜಿಸಿದ್ದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ವಿವಿಧ ಕಾರಣಗಳಿಗೆ ಬೀದಿ ಪಾಲಾಗುವ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಹೊರಬಂದ ಮಕ್ಕಳಿಗೆ ಪುನರ್ವಸತಿ ಕಲ್ಲಿಸುವುದು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ADVERTISEMENT

‘ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕಂದಾಯ, ಪೊಲೀಸ್‌ ಇಲಾಖೆ ಕೂಡಾ ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆಗೆ ಕೈಜೋಡಿಸಬೇಕು. ಯೋಜನೆಗೆ ಪೂರಕವಾಗಿ ಇಲಾಖೆಯು ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಮಾನವ ಕಳ್ಳ ಸಾಗಣೆ ಪ್ರಪಂಚದ ಎರಡನೇ ದೊಡ್ಡ ದಂಧೆಯಾಗಿದೆ. ಹಾಸನ ಜಿಲ್ಲೆಯಲ್ಲಿ 607 ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿವೆ. ಅದರಲ್ಲಿ 27 ಹೆಣ್ಣು, 11 ಗಂಡು ಮಕ್ಕಳು ಈವರೆಗೂ ಪತ್ತೆಯಾಗಿಲ್ಲ ಎಂದು ಹೇಳಿದರು.

ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಿ ಬೆಳೆಸಲು ಪ್ರತಿಯೊಬ್ಬ ನಾಗರಿಕ ಸಹಕಾರ ನೀಡಬೇಕು. ಮಾನವ ಕಳ್ಳಸಾಗಣೆ, ಬಾಲ್ಯ ವಿವಾಹ, ಅನಾಥ ಮಕ್ಕಳು ಇವು ಸಮಾಜದ ದೊಡ್ಡ ಪಿಡುಗು. ಇವುಗಳ ತೊಡೆಯಲು ಯತ್ನಿಸಬೇಕು ಎಂದರು.

ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಪದ್ಮಾ, ‘ಇಂದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕಿರುಕುಳ ಆಗುತ್ತಿದೆ. ಊಟ, ಬಟ್ಟೆ ಶಿಕ್ಷಣ ಕೊಡಿಸಿದರೆ ಹೊಣೆ ಮುಗಿಯಿತು ಎಂಬ ಭಾವನೆ ಸರಿಯಲ್ಲ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಮಕ್ಕಳ ಕಾವಲು ಸಮಿತಿ ರಚಿಸಬೇಕು. ಮಕ್ಕಳ ಹಕ್ಕು ಕ್ಲಬ್‌ ಆರಂಭಿಸಬೇಕು. ಆಗಾಗ್ಗೆ ಸಭೆ ನಡೆಸಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಬೇಕು ಎಂದು ಸಲಹೆ ಮಾಡಿದರು. ಸಿಡಿಪಿಒ ಅನಿತಾ, ಸಂಪನ್ಮೂಲ ವ್ಯಕ್ತಿ ದೇವರಾಜು, ಜಿಲ್ಲಾಮಕ್ಕಳ ಘಟಕದ ಕಾರ್ಯಕರ್ತರಾದ ಶಿವಣ್ಣ, ಆರ್‌.ಡಿ.ಲೋಹಿತ್‌, ಸವಿತಾ, ಶಿಕ್ಷಕರಾದ ಯಲ್ಲಯ್ಯ, ಲಲಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.