ADVERTISEMENT

ಅರಸೀಕೆರೆ ಕ್ಷೇತ್ರಕ್ಕೆ ಬಿಎಸ್‌ವೈ ಆಪ್ತ ಮರಿಸ್ವಾಮಿ

ಘೋಷಣೆಯಾಗದ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಬಿಜೆಪಿ ಟಿಕೆಟ್‌

ಕೆ.ಎಸ್ ಸುನಿಲ್
Published 23 ಏಪ್ರಿಲ್ 2018, 9:16 IST
Last Updated 23 ಏಪ್ರಿಲ್ 2018, 9:16 IST

ಹಾಸನ: ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಸಮೀಪಿಸುತ್ತಿದ್ದರೂ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಘೋಷಣೆಯಾಗದಿರುವುದು ಆಕಾಂಕ್ಷಿಗಳನ್ನು ಕಂಗಾಲು ಮಾಡಿದೆ.

ಹಾಸನ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಪ್ರೀತಂ ಜೆ.ಗೌಡ ಮತ್ತು ಸಕಲೇಶಪುರ ಕ್ಷೇತ್ರದ ಆಕಾಂಕ್ಷಿ ಸೋಮಶೇಖರ್‌ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಂದ ಬಿ.ಫಾರಂ ಪಡೆದು ಭಾನುವಾರ ಹಾಸನಕ್ಕೆ ಮರಳಿದ್ದಾರೆ. ಆದರೆ, ಇಬ್ಬರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡದಿರುವುದಕ್ಕೆ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಬಿ.ಫಾರಂ ನೀಡಿರುವುದನ್ನು ಖಚಿತ ಪಡಿಸಿರುವ ಇಬ್ಬರೂ, ಸೋಮವಾರ  ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.

ADVERTISEMENT

ಶಾಸಕ ಸಿ.ಟಿ.ರವಿ ಬೆಂಬಲಿಗರಾದ ಪ್ರೀತಂ ಅವರಿಗೆ ಪಕ್ಷದ ಕೆಲವು ಹಿರಿಯ ನಾಯಕರಿಂದ ವಿರೋಧ ವ್ಯಕ್ತವಾಗಿರುವುದೇ ಟಿಕೆಟ್‌ ಘೋಷಣೆಯಾಗದಿರಲು ಕಾರಣ ಎಂಬ ಮಾತು ಕೇಳಿ ಬಂದಿದೆ. ಜತೆಗೆ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿರುವ ಅಗಿಲೆ ಯೋಗೀಶ್‌ ಹಾಗೂ ಕಟ್ಟಾಯ ಅಶೋಕ್‌ ಅವರು ತಮ್ಮ ಗಾಡ್‌ಫಾದರ್‌ಗಳ ಮೂಲಕ ಲಾಬಿ ಮುಂದುವರಿಸಿರುವುದರಿಂದ ವಿಳಂಬವಾಗುತ್ತಿದೆ.

ಮತ್ತೊಂದೆಡೆ ಬಿಜೆಪಿ ಪ್ರಬಲ ಸ್ಪರ್ಧೆಯೊಡ್ಡಬಲ್ಲದು ಎಂಬ ಲೆಕ್ಕಚಾರವಿರುವ ಬೇಲೂರು ಮತ್ತು ಸಕಲೇಶಪುರ ಕ್ಷೇತ್ರದಲ್ಲಿಯೂ ಅನಿಶ್ಚಿತತೆ ಮುಂದುವರಿದಿದೆ.

ಸಕಲೇಶಪುರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಸೋಮಶೇಖರ್‌ ಅವರ ಬೆಂಬಲಿಗರಲ್ಲೂ ಆತಂಕ ಮೂಡಿಸಿದೆ. ನಾಲ್ಕು ಕ್ಷೇತ್ರಗಳ ಆಕಾಂಕ್ಷಿಗಳು ಭಾನುವಾರ ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ, ಪಕ್ಷದಿಂದ ಯಾವುದೇ ಸೂಚನೆ ಬಾರದಿರುವುದು ಆತಂಕ ಉಂಟು ಮಾಡಿದೆ.

ಇನ್ನೊಂದೆಡೆ ಬಿಜೆಪಿ ನಾಯಕರು ಹಾಸನ ಜಿಲ್ಲೆಯ ಟಿಕೆಟ್‌ ಹಂಚಿಕೆ ವಿಷಯದಲ್ಲಿ ಜೆಡಿಎಸ್‌ನೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ. ಬೇಲೂರು ಕ್ಷೇತ್ರಕ್ಕೆ ಎಚ್‌.ಕೆ.ಸುರೇಶ್‌, ಕೊರಟಿಕೆರೆ ಪ್ರಕಾಶ್‌ ಅವರು ಹಿರಿಯ ನಾಯಕರ ಮೂಲಕ ಲಾಬಿ ಮುಂದುವರಿಸಿದ್ದಾರೆ.

ಅರಸೀಕೆರೆ ಕ್ಷೇತ್ರದಿಂದ ಡಾ.ಅರುಣ್‌ ಸೋಮಣ್ಣ ಸ್ಪರ್ಧಿಸಲು ನಿರಾಕರಿಸಿದ ಕಾರಣ ಯಡಿಯೂರಪ್ಪ ಅವರ ಆಪ್ತ ಬೆಂಗಳೂರು ಜಿಲ್ಲಾ ಪಂಚಾಯಿತಿ ಸದಸ್ಯ ಮರಿಸ್ವಾಮಿ ಹಾಗೂ ಉದ್ಯಮಿ ಕೆ.ವಿ.ಎನ್‌.ಶಿವರು ಹೆಸರು ಮುನ್ನೆಲೆಗೆ ಬಂದಿದೆ. ಈ ಪೈಕಿ ಮರಿಸ್ವಾಮಿಗೆ ಟಿಕೆಟ್‌ ಖಚಿತ ಎನ್ನಲಾಗಿದೆ.

ಇವರೊಂದಿಗೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿವಿಟಿ ಬಸವರಾಜು, ಮಾಜಿ ಶಾಸಕ ಕೆ.ಪಿ.ಪ್ರಭುಕುಮಾರ್‌ ಅವರ ಪುತ್ರ ವಿಜಯಪ್ರಭು, ಮುಖಂಡ ರಾಜ್‌ಕುಮಾರ್‌ ಟಿಕೆಟ್‌ಗೆ ಪ್ರಯತ್ನ ಮುಂದುವರಿಸಿದ್ದಾರೆ.

ಮರಿಸ್ವಾಮಿಗೆ ಟಿಕೆಟ್ ದೊರೆಯುವುದು ಖಚಿತ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅರಸೀಕೆರೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಮುಖಂಡರು ಹಾಗೂ ಕಾರ್ಯಕರ್ತರು ಸಭೆ ಸೇರಿ ಚರ್ಚೆ ನಡೆಸಿದರು. ಈ ವೇಳೆ ಕೆಲವರು ಮರಿಸ್ವಾಮಿಯನ್ನು ಬೆಂಬಲಿಸಿದರೆ, ಮತ್ತೆ ಕೆಲವರು ಸ್ಥಳೀಯರಿಗೆ ಟಿಕೆಟ್‌ ಕೊಡಬೇಕು ಎಂದು ಗಲಾಟೆ ಮಾಡಿದ್ದಾರೆ.

ನಾಳೆ ನಾಮಪತ್ರ ಸಲ್ಲಿಕೆ: ಮರಿಸ್ವಾಮಿ
‘ಯಡ್ಡಿಯೂರಪ್ಪ ಸೇರಿದಂತೆ ರಾಜ್ಯದ ನಾಯಕರು ಮನವೊಲಿಸಿದ ಪರಿಣಾಮ ಸ್ಪರ್ಧಿಸಲು ಒಪ್ಪಿಕೊಂಡಿದ್ದು, ಮಂಗಳವಾರ ನಾಮಪತ್ರ ಸಲ್ಲಿಸಲಾಗುವುದು. ಪ್ರಚಾರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ನಾಯಕರು ಬರಲಿದ್ದಾರೆ. ಆತಂಕ ಪಡುವುದು ಬೇಡ ಎಂದು ಬಿಎಸ್‌ವೈ ಭರವಸೆ ನೀಡಿದರು. ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಕೈಗೊಳ್ಳಲಾಗುವುದು’ ಎಂದು ಮರಿಸ್ವಾಮಿ ಅವರು ‘ಪ್ರಜಾವಾಣಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.