ADVERTISEMENT

ಆಮ್ಲ ಮಳೆ: ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2012, 6:00 IST
Last Updated 1 ನವೆಂಬರ್ 2012, 6:00 IST

ಬೇಲೂರು: ತಾಲ್ಲೂಕಿನ ಹಗರೆ ಸಮೀಪದ ಕೊಮಾರನಹಳ್ಳಿ ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ಸಂಜೆ ಆಮ್ಲ ಮಳೆ (ಆಸಿಡ್ ಮಳೆ) ಯಾಗಿರುವ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಈ ಭಾಗದ ಜನರು ಗಾಬರಿಗೊಂಡಿದ್ದಾರೆ.
ಕೊಮಾರನಹಳ್ಳಿ ಗ್ರಾಮದ 50 ಎಕರೆ ವಿಸ್ತೀರ್ಣದಲ್ಲಿ ಹಳದಿ ವರ್ಣದ ಆಮ್ಮ ಮಳೆಯಾಗಿದ್ದು, ಆಮ್ಲದ ಹನಿಗಳು ಜೋಳ, ಟೊಮೆಟೋ ಗಿಡ ಸೇರಿದಂತೆ ವಿವಿಧ ಗಿಡಗಳ ಎಲೆಯ ಮೇಲೆ ಬಿದ್ದು, ಕಪ್ಪು ಕಲೆಯಾಗಿದೆ. ಹಾಸಿದ್ದ ಟಾರ್ಪಲ್‌ನಲ್ಲೂ ಚುಕ್ಕಿಗಳು ಮೂಡಿವೆ. ಕೊಮಾನಹಳ್ಳಿ ಗ್ರಾಮದ ಜಯಣ್ಣ ಎಂಬುವವರ ಮೇಲೆ ಆಮ್ಲ ಮಳೆಯ ಹನಿಗಳು ಬಿದ್ದಿದ್ದು, ಅವರ ಕೈಗೆ ಒಂದು ಗಂಟೆಗೂ ಹೆಚ್ಚು ಕಾಲ ತುರಿಕೆಯಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹರೀಶ್ ಅವರ ಹೇಳಿಕೆಯ ಪ್ರಕಾರ ಕಾರ್ಖಾನೆಗಳ ಮಾಲಿನ್ಯ ಹೆಚ್ಚುತ್ತಿದ್ದು, ರಾಸಾಯನಿಕಗಳು ಗಾಳಿಯಲ್ಲಿ ಸೇರುತ್ತಿರುವುದರಿಂದ ಪರಿಸರದ ಮೇಲೆ ವೈಪರೀತ್ಯ ಉಂಟಾಗಿ ಆಮ್ಲಮಳೆಯಾಗುವ ಸಾಧ್ಯತೆಯಿದೆ. ಹಳದಿ ಬಣ್ಣ ಅಲ್ಲದೆ ಇತರ ಬಣ್ಣಗಳಲ್ಲೂ ಮಳೆಯಾಗಲಿದೆ.

ಕೊಮಾರನಹಳ್ಳಿಯಲ್ಲಿನ ಆಮ್ಲ ಮಳೆಯ ಬಗ್ಗೆ ಅಧ್ಯಯನ ಮಾಡದೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಪತ್ರಿಕೆಗೆ ಸ್ಪಷ್ಟಪಡಿಸಿದರು.

ಕಳೆದ ಎರಡು ದಿನಗಳಿಂದ ತಂಡಿ ಹವೆ ಇದೆ. ಒಂದು ವೇಳೆ ಉರಿ ಬಿಸಿಲೇನಾದರು ಇದ್ದಿದ್ದರೆ, ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೂ ಇತ್ತು ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದ ರೈತರು ಮತ್ತು ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.