ADVERTISEMENT

ಎತ್ತಿನಹೊಳೆ: ಏಕರೂಪದ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 6:12 IST
Last Updated 16 ಜೂನ್ 2017, 6:12 IST

ಸಕಲೇಶಪುರ: ‘ಎತ್ತಿನಹೊಳೆ ತಿರುವು ಯೋಜನೆಗೆ ಸ್ವಾದೀನಪಡಿಸಿಕೊಳ್ಳುವ ತಾಲ್ಲೂಕಿನ ಎಲ್ಲಾ ಭೂ ಹಿಡುವಳಿ ದಾರರಿಗೆ ಏಕರೂಪದ ಪರಿಹಾರ ನೀಡಬೇಕು’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.

ಪಟ್ಟಣದಲ್ಲಿ ನಡೆದ ಹಾಸನ ಜಿಲ್ಲಾ ಪ್ಲಾಂಟರ್‌್ಸ ಸಂಘದ ವಾರ್ಷಿಕ ಮಹಾಸಮ್ಮೇಳನ, ಕಾಫಿ ಕೃಷಿ ಮೇಳ, ಪರಿಸರ ವೇದಿಕೆ ಉದ್ಘಾಟನೆ ಹಾಗೂ ಬೆಳೆಗಾರ ಪತ್ರಿಕೆ ವರ್ಷಾಚರಣೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭೂಮಿಯ ಬೆಲೆ ಆಧಾರವಾಗಿ ಇಟ್ಟುಕೊಂಡು ಪರಿಹಾರ ಹಂಚಿಕೆಗೆ ನಾವು ಒಪ್ಪುವುದಿಲ್ಲ. ಎಲ್ಲಾ ಸಂತ್ರಸ್ತರಿಗೂ ಏಕರೂಪ ಪರಿಹಾರ ನೀಡಬೇಕು. ಕುಡಿಯುವ ನೀರಿನ ಮಹತ್ವದ ಯೋಜನೆ ಇದಾಗಿ­ರುವುದರಿಂದ, ವಿಶೇಷ ಪ್ರಕರಣವೆಂದು ಗುರುತಿಸಿ ಪರಿಹಾರದ ವಿಷಯದಲ್ಲಿ ಸರ್ಕಾರ ರೈತರ ಬೇಡಿಕೆಗಳಿಗೆ ಮನ್ನಣೆ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಅರಣ್ಯ, ಕಂದಾಯ ಹಾಗೂ ನೀರವಾರಿ ಸಚಿವರು ಶೀಘ್ರದಲ್ಲಿ ಸಂತ್ರಸ್ತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಪರಿಹಾರ ವಿತರಣೆ ಗೊಂದಲಕ್ಕೆ ತೆರೆ ಎಳೆಯಬೇಕು’ ಎಂದು ಆಗ್ರಹಿಸಿದರು.

ಆನೆ ಕಾರಿಡಾರ್‌ಗೆ ಆಗ್ರಹ:
‘ಒಂದು ದಶಕದಿಂದ ತಾಲ್ಲೂಕಿನಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಳೆಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲೇಬೇಕು.

ಅಲ್ಲದೇ, ಅತ್ತಿಹಳ್ಳಿ ಭಾಗದಲ್ಲಿ 8 ಗ್ರಾಮಗಳ 466 ಕುಟುಂಬಗಳು 2,600ಕ್ಕೂ ಹೆಚ್ಚು ಹಿಡುವಳಿ ಭೂಮಿಯನ್ನು ಆನೆ ಕಾರಿಡಾರ್‌ ನಿರ್ಮಾಣಕ್ಕಾಗಿ ನೀಡಲು ತುದಿಗಾಲಲ್ಲಿ ನಿಂತಿವೆ. ಸಮಸ್ಯೆಯ ಗಂಭೀರತೆ ಅರಿತು ಸರ್ಕಾರ ಕೂಡಲೇ ಆನೆ ಕಾರಿಡಾರ್‌ ನಿರ್ಮಾಣಕ್ಕೆ ಮುಂದಾಗಬೇಕು.

‘ಹವಾಮಾನ ವೈಪರಿತ್ಯದಿಂದ ಏಲಕ್ಕಿ ಬೆಳೆ ನಾಶವಾಗಿದೆ. ಆ ಪ್ರದೇಶದಲ್ಲಿ ಈಗ ಕಾಫಿ ಬೆಳೆಯುವುದಕ್ಕೆ ಮಾತ್ರ ಸಾಧ್ಯ. ಕಾಫಿ ಕೃಷಿಗೆ ಮರಗಳ ಕಡಿತಲೆ ಅನಿವಾರ್ಯ. ಸರ್ಕಾರ ಆ ಭಾಗದಲ್ಲಿ ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಬೇಕು’ ಎಂದೂ ಅವರು ಕೋರಿದರು.

ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿದರು. ಜಿಲ್ಲಾ ಪ್ಲಾಂಟರ್‌್ಸ ಸಂಘದ ಅಧ್ಯಕ್ಷ ಕಿರೇಹಳ್ಳಿ ಕೆ.ಬಿ.ಕೃಷ್ಣಪ್ಪ, ಉಪಾಧ್ಯಕ್ಷ ಸಿ.ಎಸ್‌.­ಮಹೇಶ್‌, ರಾಜ್ಯ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ಯು.ಎಂ.  ತೀರ್ಥಮಲ್ಲೇಶ್, ಉಪಾಧ್ಯಕ್ಷ  ಡಾ.ಎಚ್‌.ಟಿ.ಮೋಹನ್ ಕುಮಾರ್, ಟಿ.ಪಿ. ಸುರೇಂದ್ರ,  ಕಾರ್ಯಕ್ರಮ ಸಂಯೋಜಕರಾದ ಮುಜಾಹಿದ್‌ ಅಲಂ, ಎಚ್‌.ಎಚ್‌.ಉದಯ್‌, ಎಸ್‌.ಕೆ. ಸೂರ್ಯ, ವಿಶ್ವನಾಥ್‌ ನಾಯಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.