ADVERTISEMENT

ಕುರಿ, ಮೇಕೆ ವೀರ್ಯ ಸಂಕಲನ ಕೇಂದ್ರ

ಮೊದಲ ಕೇಂದ್ರ ಜಿಲ್ಲೆಯಲ್ಲಿ ಸ್ಥಾಪನೆ; ₹ 3 ಕೋಟಿ ವೆಚ್ಚ, 17ರಂದು ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 11:01 IST
Last Updated 15 ಫೆಬ್ರುವರಿ 2017, 11:01 IST

ಹಾಸನ: ‘ಕುರಿಗಳ ತಳಿ ಅಭಿವೃದ್ಧಿಗೆ ಒತ್ತು ನೀಡಲು, ರಾಜ್ಯದ ಪ್ರಥಮ ಕುರಿ– -ಮೇಕೆಗಳ ವೀರ್ಯ ಬ್ಯಾಂಕ್ ಅನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ ಮಂಗಳವಾರ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಕೋರವಂಗಲ ಗೇಟ್ ಬಳಿ ಇರುವ ರೇಷ್ಮೆ ಕೃಷಿ ತರಬೇತಿ ಕೇಂದ್ರದ ಬಳಿ 50 ಎಕರೆ ಪ್ರದೇಶದಲ್ಲಿ ವೀರ್ಯ ಬ್ಯಾಂಕ್ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

₹ 3 ಕೋಟಿ ವೆಚ್ಚದಲ್ಲಿ ಅಸ್ತಿತ್ವಕ್ಕೆ ಬರಲಿರುವ ಉದ್ದೇಶಿತ ಕುರಿ ಮೇಕೆಗಳ ವೀರ್ಯ ಸಂಕಲನ ಕೇಂದ್ರದ ಸ್ಥಾಪನೆಗೆ ಫೆ.17ರಂದು ಸಚಿವ ಎ.ಮಂಜು ಶಂಕುಸ್ಥಾಪನೆ ಮಾಡುವರು ಎಂದರು. ದೇಸಿ ತಳಿಯ ಕುರಿ, ಮೇಕೆಗಳ ಸಂರಕ್ಷಣೆ ಯೋಜನೆಯಡಿ ಈ ಕೇಂದ್ರ ಸ್ಥಾಪನೆಯಾಗಲಿದೆ.  ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು. 

‘ಕುರಿ, ಮೇಕೆಗಳ ದೇಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಜಾನುವಾರುಗಳಿಗೆ ಮಾಡುವಂತೆ ಕುರಿ, ಮೇಕೆಗಳಿಗೆ ಕೃತಕ ಗರ್ಭಧಾರಣೆ ನಡೆಯಲಿದೆ. ಇದರಿಂದ ಹೆಚ್ಚು ಶಕ್ತಿಶಾಲಿ ಮತ್ತು ತೂಕದ ಮರಿಗಳ ಜನನ ನಿರೀಕ್ಷಿಸಲಾಗಿದೆ’ ಎಂದು ಹೇಳಿದರು.

ಪಶುಪಾಲನೆ ಕೃಷಿಕರ ಪ್ರಮುಖ ಉಪ ಕಸುಬು ಮತ್ತು ಆದಾಯದ ಮೂಲ. ಬಹುತೇಕ ಗ್ರಾಮಗಳಲ್ಲಿ ಮಹಿಳೆಯರು ಇದರಿಂದಾಗಿಯೇ ಸ್ವಾವಲಂಬಿ ಬದುಕು ಕಂಡುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಹೈನುಗಾರಿಕೆಯಂತೆ ಕುರಿ ಸಾಕಾಣಿಕೆ ಕೂಡಾ ಲಾಭದಾಯಕ ಆಗಿರಬೇಕು. ಉತ್ತಮ ತಳಿಯ ಕುರಿ, ಮೇಕೆಗಳ ಅಭಿವೃದ್ಧಿ ಹಾಗೂ ವೈಜ್ಞಾನಿಕ ಮಾರಾಟ ವ್ಯವಸ್ಥೆ ಇರಬೇಕು. ಈ ದೃಷ್ಟಿಯಿಂದ ಪಶು ಸಂಗೋಪನಾ ಸಚಿವ ಎ.ಮಂಜು ಸುಧಾರಣೆ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದಾರೆ ಎಂದರು.

ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹೆಚ್ಚುವರಿ ನಿರ್ದೇಶಕ ಟಿ.ಎಸ್.ಮಂಜು, ಪಶು ಇಲಾಖೆಯ ಉಪನಿರ್ದೇಶಕ ಡಾ.ಸಿ.ಟಿ.ಧರ್ಮಪ್ಪ, ಪಶುವೈದ್ಯ ಪರೀಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.